
10.2 ಕೋಟಿ ಉಳಿತಾಯದ “ಸ್ವಚ್ಚ ಮೈಸೂರು” ಬಜೆಟ್: ಸ್ವಚ್ಛತೆ, ಹಸಿರು ಮತ್ತು ಡಿಜಿಟಲ್ ಸೇವೆಗಳಿಗೆ ಮಹಾನಗರಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆ
ಮೈಸೂರು, ಮಾ.25: ನಗರವನ್ನು ಸ್ವಚ್ಛತೆ ಮತ್ತು ಪರಿಸರ ಸ್ನೇಹಿತ್ವದ ದಿಕ್ಕಿನಲ್ಲಿ ಮುನ್ನಡೆಸುವ ಗುರಿಯೊಂದಿಗೆ ಮೈಸೂರು ಮಹಾನಗರಪಾಲಿಕೆ 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ₹10.2 ಕೋಟಿ ಉಳಿತಾಯದ ಸಮತೋಲನ ಬಜೆಟ್ ರೂಪಿಸಿದೆ. “ಸ್ವಚ್ಚ ಮೈಸೂರು” ಎಂಬ ಆಶಯದಡಿ ಮಂಡನೆಯಾದ ಈ ಬಜೆಟ್ನಲ್ಲಿ ಸ್ವಚ್ಛತೆ, ಹಸಿರು ಪರಿಸರ ಮತ್ತು ತಂತ್ರಜ್ಞಾನ ಆಧಾರಿತ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಪ್ರಾದೇಶಿಕ ಆಯುಕ್ತರೂ ಆಗಿರುವ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ಬಜೆಟ್ ಮಂಡಿಸಿದರು. ₹1311.13 ಕೋಟಿ ಆದಾಯ ಸಂಗ್ರಹ ಗುರಿ ಹೊಂದಿರುವ ಪಾಲಿಕೆ, ₹1300.92 ಕೋಟಿ ವೆಚ್ಚ ನಿರೀಕ್ಷಿಸಿದ್ದು, ₹10.2 ಕೋಟಿ ಉಳಿತಾಯ ಸಾಧಿಸುವ ನಿರೀಕ್ಷೆ ವ್ಯಕ್ತಪಡಿಸಿದೆ. ವಿಶೇಷವಾಗಿ, ಮಂಡಿಸಲಾದ 39 ಯೋಜನೆಗಳಲ್ಲಿ ಸುಮಾರು 70% ಸ್ವಚ್ಛತೆ ಸಂಬಂಧಿತ ಯೋಜನೆಗಳಾಗಿವೆ.
ತ್ವರಿತ ಕಾಮಗಾರಿಗಳಿಗೆ ಒತ್ತಾಯ
ಬಜೆಟ್ನಲ್ಲಿ ಘೋಷಿಸಲಾದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಒಂದು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಬೇಕೆಂದು ನಿತೇಶ್ ಪಾಟೀಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಯಾವುದೇ ವಿಳಂಬವಿಲ್ಲದೆ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ತಾಕೀತು ಮಾಡಿದರು.
ಮೂರನೇ ಬಾರಿ ಆಡಳಿತಾಧಿಕಾರಿ ಬಜೆಟ್
ಚುನಾಯಿತ ಪ್ರತಿನಿಧಿಗಳ ಅವಧಿ ಅಂತ್ಯಗೊಂಡ ಬಳಿಕ ಅಧಿಕಾರಿಗಳಿಂದಲೇ ಮಂಡನೆಯಾಗುತ್ತಿರುವ ಇದು ಮೂರನೇ ಬಜೆಟ್. ಈ ಬಾರಿ ನಿತೇಶ್ ಪಾಟೀಲ್ ಬಜೆಟ್ ಮಂಡಿಸಿದ್ದು, ಹಿಂದಿನ ಸಾಲುಗಳಲ್ಲಿ ಡಾ. ಜಿ.ಸಿ. ಪ್ರಕಾಶ್ ಹಾಗೂ ಡಿ.ಎಸ್. ರಮೇಶ್ ಬಜೆಟ್ ಮಂಡಿಸಿದ್ದರು. ಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೇ ಬಜೆಟ್ ಅನುಮೋದನೆಗೊಂಡಿತು. ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾರ್ವಜನಿಕ ಸ್ನೇಹಿ ಆಡಳಿತಕ್ಕೆ ಹೆಜ್ಜೆಪ್ರತಿ ಶುಕ್ರವಾರ “ಜನ ಸ್ಪಂದನ” ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸುವ ಯೋಜನೆ ಜಾರಿಗೆ ಬರಲಿದೆ. ಜೊತೆಗೆ ಇ-ಖಾತೆ ಮತ್ತು ಸಿಆರ್ ನೀಡಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ನಿಯಮಿತ ದಾಖಲೆಗಳೊಂದಿಗೆ 15% ಒಳಗಿನ ನಕ್ಷೆ ಉಲ್ಲಂಘನೆಯ ಕಟ್ಟಡಗಳಿಗೆ ಸಿಆರ್ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
ಸ್ವಚ್ಛತಾ ಬಜೆಟ್ ಪ್ರಮುಖ ಅಂಶಗಳು
ಹಸಿರು-ಉಸಿರು ಯೋಜನೆ
ನಗರದ 9 ವಲಯ ಕಚೇರಿಗಳಲ್ಲಿ ಒಟ್ಟು 13,000 ಗಿಡಗಳನ್ನು ನೆಟ್ಟು ನಿರ್ವಹಿಸುವ ಯೋಜನೆ.
ಉದ್ಯಾನ ದತ್ತು ಯೋಜನೆ
‘ನಮ್ಮ ಮೈಸೂರು-ನಮ್ಮ ಕೊಡುಗೆ’ ಅಡಿಯಲ್ಲಿ ಉದ್ಯಾನಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡಿ ನಿರ್ವಹಣೆ. ಈಗಾಗಲೇ 11 ಪಾರ್ಕ್ಗಳು ದತ್ತು.
ವೇಸ್ಟ್ ಟು ವಂಡರ್ ಪಾರ್ಕ್
ತ್ಯಾಜ್ಯ ವಸ್ತುಗಳಿಂದ ಕಲಾಕೃತಿಗಳನ್ನು ನಿರ್ಮಿಸಿ ಜನರಲ್ಲಿ ಜಾಗೃತಿ ಮೂಡಿಸುವ ವಿನೂತನ ಯೋಜನೆ.
ಹಸಿ ತ್ಯಾಜ್ಯ ಸಂಸ್ಕರಣಾ ಘಟಕ
ವಿದ್ಯಾರಣ್ಯಪುರಂನಲ್ಲಿ 150 ಟಿಪಿಡಿ ಸಾಮರ್ಥ್ಯದ ಘಟಕವನ್ನು ಬಿಪಿಸಿಎಲ್ ಸಹಯೋಗದಲ್ಲಿ ಸ್ಥಾಪನೆ.
ಕ್ಲೀನ್ ಸಿಟಿ ಆ್ಯಪ್
ತ್ಯಾಜ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಚಿತ್ರ ಸಹಿತ ದೂರು ನೀಡಲು ಡಿಜಿಟಲ್ ವೇದಿಕೆ.
ಗ್ರೀನ್ ಪ್ರಾಪರ್ಟಿ ಟ್ಯಾಗ್
ಮಳೆ ನೀರು ಸಂಗ್ರಹಣೆ, ಸೌರಶಕ್ತಿ ಬಳಕೆ, ತ್ಯಾಜ್ಯ ವಿಂಗಡಣೆ ಮಾಡಿದ ಕಟ್ಟಡಗಳಿಗೆ ಪ್ರೋತ್ಸಾಹ.
ಸ್ವಚ್ಛ ಪ್ರದೇಶ ಯೋಜನೆ
ನಗರ ಕೇಂದ್ರ ವ್ಯಾಪಾರ ಪ್ರದೇಶವನ್ನು ದಿನವಿಡೀ ಸ್ವಚ್ಛವಾಗಿಡಲು CSR ಸಹಭಾಗಿತ್ವದಲ್ಲಿ ಯೋಜನೆ.
ಮರ ಮತ್ತು ವ್ಯಾಪಾರಿಗಳ ಸಮೀಕ್ಷೆ
ನಗರದ ಸಾಲು ಮರಗಳ ಸಮೀಕ್ಷೆ ಪೂರ್ಣಗೊಳಿಸುವುದರೊಂದಿಗೆ ಬೀದಿ ವ್ಯಾಪಾರಿಗಳಿಗೆ ಜಿಯೋ-ಟ್ಯಾಗಿಂಗ್ ಮೂಲಕ ಗುರುತಿನ ಚೀಟಿ.
ಅಕ್ಕ ಕೆಫೆ ಮತ್ತು ಕಾಫಿ ಕಿಯೋಸ್ಕ್
ಮಹಿಳಾ ಸ್ವಸಹಾಯ ಸಂಘಗಳಿಗೆ ಉದ್ಯೋಗ ಸೃಷ್ಟಿಸಲು ಕಿಯೋಸ್ಕ್ ಕೇಂದ್ರಗಳು.
ಮೂಲ ಸೌಕರ್ಯಗಳಿಗೆ ಭರ್ಜರಿ ಅನುದಾನ
ನೀರು ಮತ್ತು ಒಳಚರಂಡಿ ಅಭಿವೃದ್ಧಿಗೆ ₹30 ಕೋಟಿ
ರಸ್ತೆ ಮತ್ತು ಚರಂಡಿ ಕಾಮಗಾರಿಗೆ ₹30 ಕೋಟಿ
ಪಾದಚಾರಿ ಮಾರ್ಗಕ್ಕೆ ₹10 ಕೋಟಿ
ವೃತ್ತಗಳ ಅಭಿವೃದ್ಧಿಗೆ ₹5 ಕೋಟಿ
ಕ್ರೀಡಾಂಗಣ ಹಾಗೂ ಪುರಭವನ ಅಭಿವೃದ್ಧಿಗೆ ವಿಶೇಷ ಅನುದಾನ

ನಗರದಲ್ಲಿ ಪಾರಂಪರಿಕ ಶೌಚಗೃಹ, ಮಾರುಕಟ್ಟೆ ಮತ್ತು ಈಜುಕೊಳಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಗುಣಮಟ್ಟ ಪರೀಕ್ಷೆಗೆ ಪ್ರಯೋಗಾಲಯ
ನಗರದ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗಾಗಿ ₹1 ಕೋಟಿ ವೆಚ್ಚದಲ್ಲಿ ವಿಶೇಷ ಲ್ಯಾಬ್ ಸ್ಥಾಪನೆ. ಸಿಮೆಂಟ್, ಮರಳು, ಕಾಂಕ್ರಿಟ್ ಸೇರಿದಂತೆ ನಿರ್ಮಾಣ ಸಾಮಗ್ರಿಗಳ ಗುಣಮಟ್ಟವನ್ನು ಪರಿಶೀಲಿಸಲು ಇದು ನೆರವಾಗಲಿದೆ.
ಡಿಜಿಟಲ್ ಸಂಪರ್ಕಕ್ಕೆ ಕ್ಯೂಆರ್ ಕೋಡ್ ವ್ಯವಸ್ಥೆ
ವಲಯ ಕಚೇರಿಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಿ, ಸಾರ್ವಜನಿಕರಿಗೆ ಸಂಬಂಧಿತ ಅಧಿಕಾರಿಗಳ ಸಂಪರ್ಕ ವಿವರಗಳನ್ನು ತಕ್ಷಣ ಪಡೆಯುವ ವ್ಯವಸ್ಥೆ. ಜೊತೆಗೆ, ಎಲ್ಲಾ ಕಡತಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಲು ₹50 ಲಕ್ಷ ಮೀಸಲು ಮಾಡಿ, ಇ-ಆಫೀಸ್ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ.
ಈ ಬಜೆಟ್ ಕೇವಲ ಸಂಖ್ಯೆಗಳ ಲೆಕ್ಕಾಚಾರವಲ್ಲ; ಮೈಸೂರನ್ನು ಸ್ವಚ್ಛ, ಹಸಿರು ಮತ್ತು ಜನಸ್ನೇಹಿ ನಗರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಮಾರ್ಗಸೂಚಿ ಎಂದು ಹೇಳಬಹುದು.




