ಮೈಸೂರು 26 :- ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ ಭವನದಲ್ಲಿ ದಿನಾಂಕ:26-01-2026ರಂದು ಬೆಳಗ್ಗೆ 7.30 ಗಂಟೆಗೆ 77ನೇ ಗಣರಾಜೋತ್ಸವ ದಿನಾಚರಣೆಯನ್ನು ಮಾನ್ಯ ಕುಲಪತಿಗಳಾದ ಪ್ರೊ. ಎನ್. ಕೆ. ಲೋಕನಾಥ್‌ರವರು, ಎನ್.ಸಿ.ಸಿ. ಕೆಡಟ್‌ಗಳಿಂದ ಗೌರವ ವಂದನೆ ಸ್ವೀಕರಿಸಿ, ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಲಲಿತಕಲಾ ಕಾಲೇಜು, ಯುವರಾಜ ಕಾಲೇಜು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ದೇಶ ಭಕ್ತಿಗೀತೆ ಮತ್ತು ನಾಡಗೀತೆಗಳನ್ನು ಹಾಡಿದರು. ಮಾನ್ಯ ಕುಲಪತಿಗಳು ಮಾತನಾಡುತ್ತಾ ಪ್ರತಿ ವರ್ಷ ಸಂಭ್ರಮದಿಂದ ಆಚರಿಸಲಾಗುವ ಗಣರಾಜ್ಯೋತ್ಸವವು, 1950ರ ಜನವರಿ 26 ರಂದು ಭಾರತೀಯ ಸಂವಿಧಾನದ ಐತಿಹಾಸಿಕ ಅಂಗೀಕಾರವನ್ನು ಸೂಚಿಸುತ್ತದೆ. ಗಣರಾಜ್ಯೋತ್ಸವವು ನ್ಯಾಯ, ಸ್ವಾತಂತ್ತ್ಯಯ, ಸಮಾನತೆ ಮತ್ತು ಭ್ರಾತೃತ್ವದ ಮೂಲ ಮೌಲ್ಯಗಳ ದ್ಯೋತಕವಾಗಿದೆ, ಗಣರಾಜ್ಯೋತ್ಸವವು ನಾಗರೀಕರಿಗೆ ಅವರ ಹಕ್ಕುಗಳ ಜೊತೆಗೆ ಅವರ ಕರ್ತವ್ಯಗಳನ್ನು ನೆನಪಿಸುತ್ತದೆ. ಭಾರತೀಯ ಸಂವಿಧಾನವು ಈ ದೇಶದ ವಿಶಾಲ ವೈವಿಧ್ಯತೆಗೆ, ಏಕೀಕೃತ ಚೌಕಟ್ಟನ್ನು ಒದಗಿಸುತ್ತದೆ.

ಇದು ಪ್ರತಿಯೊಬ್ಬ ಭಾರತೀಯನಿಗೂ ಘನತೆ ಮತ್ತು ಸಮಾನ ಅವಕಾಶವನ್ನು ಖಾತರಿಪಡಿಸುತ್ತದೆ. ಗಣರಾಜ್ಯೋತ್ಸವವು ವಸಾಹತುಶಾಹಿ ಅಧೀನತೆಯ ಮೇಲೆ ಪ್ರಜಾಪ್ರಭುತ್ವದ ಆದರ್ಶಗಳ ವಿಜಯವನ್ನು ಸಂಕೇತಿಸುತ್ತದೆ. ಭಾರತವು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಗಣರಾಜ್ಯವೆಂಬ ಅಸ್ಮಿತೆಯನ್ನು ದೃಢಪಡಿಸುತ್ತದೆ. ಡಾ. ಬಿ.ಆರ್. ಅಂಬೇಡ್ಕರ್‌ರವರು ಈ ಮಹೋನ್ನತ ಸಂವಿಧಾನದ ಮುಖ್ಯ ಶಿಲ್ಪಿ. ಅವರು ಸಾಮಾಜಿಕ ನ್ಯಾಯ ಮತ್ತು ದಮನಿತರ ಸಬಲೀಕರಣವನ್ನು ಬಲವಾಗಿ ಪ್ರತಿಪಾದಿಸಿದರು. ಡಾ.ಬಿ.ಆರ್.ಅಂಬೇಡ್ಕರ್‌ರವರು ಶಿಕ್ಷಣವನ್ನು, ವಿಮೋಚನೆ ಮತ್ತು ಪ್ರಗತಿಗೆ ಪ್ರಬಲ ಸಾಧನವೆಂದು ಪರಿಗಣಿಸಿದ್ದರು. ಪ್ರಜಾಪ್ರಭುತ್ವವು, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯಲ್ಲಿ ಬೇರೂರಿರ ಬೇಕೆಂದು ಅವರು ದೃಢವಾಗಿ ನಂಬಿದ್ದರು. ಸಾಂವಿಧಾನಿಕ ನೈತಿಕತೆಯ ಕುರಿತಾದ ಅವರ ಒತ್ತಾಯವು ಇಂದಿಗೂ ಬಹಳ ಪ್ರಸ್ತುತವಾಗಿದೆ. ಸಮಾನತೆಯ ಭಾರತಕ್ಕಾಗಿ ಅವರ ಜೀವಮಾನದ ಹೋರಾಟವನ್ನು ಗಣರಾಜ್ಯೋತ್ಸವವು ಗೌರವಿಸುತ್ತದೆ.

ಬಾಬಾ ಸಾಹೇಬರ ಆಲೋಚನೆಗಳು, ನೀತಿ-ನಿರೂಪಣೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸದಾ ಮಾರ್ಗದರ್ಶನವನ್ನು ನೀಡುತ್ತಲೇ ಇರುತ್ತವೆ. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಭಾರತವು ತ್ವರಿತ ಪ್ರಗತಿಯನ್ನು ಸಾಧಿಸುತ್ತಿದೆ. ಶಿಕ್ಷಣವು, ಸುಸ್ಥಿರ ರಾಷ್ಟ್ರೀಯ ಅಭಿವೃದ್ದಿಯ ಅಡಿಪಾಯವಾಗಿ ಉಳಿದಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಯುವ ಜನತೆಯಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ದಿಯನ್ನು ಬೆಳೆಸಬೇಕು. ಮೈಸೂರು ವಿಶ್ವವಿದ್ಯಾನಿಲಯವು ರಾಷ್ಟ ನಿರ್ಮಾಣದಲ್ಲಿ ಹಿಂದಿನಿಂದಲೂ ಬಹುದೊಡ್ಡ ಪರಂಪರೆಯನ್ನು ಹೊಂದಿದೆ. ಶಿಕ್ಷಣ ಮತ್ತು ಸಾಂವಿಧಾನಿಕ ಬದ್ಧತೆಯ ಮೂಲಕ ನಾವೆಲ್ಲಾ ಒಟ್ಟಾಗಿ ದೇಶವನ್ನು ಕಟ್ಟೋಣವೆಂದು ಕುಲಪತಿಗಳು ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಮಾನ್ಯ ಕುಲಸಚಿವರಾದ ಶ್ರೀಮತಿ ಎಂ.ಕೆ. ಸವಿತಾ ಕ.ಆ.ಸೇ.(ಹಿರಿಯ ಶ್ರೇಣಿ), ಪರೀಕ್ಷಾಂಗ ಕುಲಸಚಿವರಾದ ಪ್ರೊ. ಎನ್. ನಾಗರಾಜ, ಸಿಂಡಿಕೇಟ್ ಸದಸ್ಯರುಗಳು, ಶೈಕ್ಷಣಿಕ ಮಂಡಳಿ ಸದಸ್ಯರುಗಳು, ಎಲ್ಲಾ ನಿಕಾಯ ಡೀನರುಗಳು, ನಿರ್ದೇಶಕರುಗಳು, ಪ್ರಾಂಶುಪಾಲರುಗಳು, ವಿಭಾಗಗಳ ಮುಖ್ಯಸ್ಥರುಗಳು, ಅಧ್ಯಾಪಕರುಗಳು, ಅಧ್ಯಾಪಕೇತರರುಗಳು, ಸಂಶೋಧಕರು, ವಿದ್ಯಾರ್ಥಿಗಳು, ವಿದ್ಯಾರ್ಥಿಕ್ಷೇಮಪಾಲನಾ ನಿರ್ದೇಶಕರಾದ ಪ್ರೊ. ಗುರುಸಿದ್ದಯ್ಯ ಸಿ, ಡಾ. ಸುಷ್ಮಾ ಎಸ್.ಎನ್. ಹಾಗೂ ನಿರ್ದೇಶನಾಲಯದ ಸಿಬ್ಬಂದಿ ವರ್ಗದವರು, ಭಾಗವಹಿಸಿದ್ದರು.




