HOMENews

ಶೇಷಾದ್ರಿಪುರಂ ಕಾಲೇಜಿನಲ್ಲಿ 9ನೇ ಸ್ವಯಂ ಪ್ರೇರಿತ ರಕ್ತದಾನ ಶಿಬಿರ: 181 ಯೂನಿಟ್ ರಕ್ತ ಸಂಗ್ರಹ

ಮಾನವೀಯತೆಯ ಸಂದೇಶ ಸಾರಿದ ರಕ್ತದಾನ ಶಿಬಿರ: ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಕೆ

ಮೈಸೂರು, ಫೆ. 5:-  ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ (NSS), ಎನ್‌ಸಿಸಿ ಘಟಕ, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಕೆ.ಆರ್. ಆಸ್ಪತ್ರೆ ರಕ್ತ ನಿಧಿ, ಹಾಗೂ ರೋಟರಿ ಕ್ಲಬ್ ಆಫ್ ಮೈಸೂರ್ ಮಿಡ್ ಟೌನ್ ಇವರ ಸಹಯೋಗದಲ್ಲಿ ಗುರುವಾರ 9ನೇ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಕಾಲೇಜು ಆವರಣದಲ್ಲಿ ನಡೆದ ಈ ಶಿಬಿರದಲ್ಲಿ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದು, ಒಟ್ಟು 181 ಯೂನಿಟ್ ರಕ್ತ ಸಂಗ್ರಹವಾಗಿತು. ದಿವಂಗತ ಕೆ.ಎಂ. ನಂಜಪ್ಪ, ಮಾಜಿ ಮೇಯರ್ ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಮಾಜಿ ಅಧ್ಯಕ್ಷರ ಸ್ಮರಣಾರ್ಥ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.


ರಕ್ತದಾನ ಶಿಬಿರ ಬೆಳಿಗ್ಗೆ 9 ಗಂಟೆಗೆ ಪ್ರಾರಂಭಗೊಂಡು, ಬೆಳಿಗ್ಗೆ 10 ಗಂಟೆಗೆ ಕೆ.ಎಂ. ನಂಜಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಡಿ.ಎಸ್. ಪ್ರತಿಮಾ, ಪ್ರಾದೇಶಿಕ ನಿರ್ದೇಶಕರು (ಡಿಸಿಇಎಂ), ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳ ಬೆಳವಣಿಗೆ ಅಗತ್ಯವಿದ್ದು, ರಕ್ತದಾನವು ಇಂದಿನ ಕಾಲಘಟ್ಟದಲ್ಲಿ ಮಹಾದಾನವೆಂದು ಹೇಳಿದರು. ಒಂದು ಯೂನಿಟ್ ರಕ್ತದಿಂದ ಮೂರು ಜನರ ಜೀವ ಉಳಿಯಬಹುದೆಂಬುದನ್ನು ಉಲ್ಲೇಖಿಸಿ, ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜ ಸೇವೆಯ ಮೌಲ್ಯಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗೌರವ ಅತಿಥಿಗಳಾದ ರಾಜ್ಯ ಸಂಯೋಜಕರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಶ್ರೀ ರಾಜು ಚಂದ್ರಶೇಖರ್ ಮಾತನಾಡಿ, ರಕ್ತದಾನವು ಮಾನವ ಧರ್ಮವಾಗಬೇಕು ಎಂದು ತಿಳಿಸಿದರು. ಸಮಾಜದಲ್ಲಿ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮತ್ತು ರೋಗಿಗಳಿಗೆ ರಕ್ತದ ಅಗತ್ಯತೆಯಿರುವುದರಿಂದ ಪ್ರತಿಯೊಬ್ಬರೂ ಇಂತಹ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕೆ.ಆರ್. ಆಸ್ಪತ್ರೆ ರಕ್ತ ನಿಧಿ ಅಧಿಕಾರಿ ಡಾ. ಕುಸುಮಾ ಮಾತನಾಡಿ, ರಕ್ತದಾನದಿಂದ ಯಾವುದೇ ಹಾನಿ ಉಂಟಾಗುವುದಿಲ್ಲ ಎಂಬ ತಪ್ಪು ಕಲ್ಪನೆಗಳನ್ನು ದೂರಮಾಡಬೇಕೆಂದು ತಿಳಿಸಿದರು. ರಕ್ತದಾನಕ್ಕೆ ಕೇವಲ 15 ನಿಮಿಷ ಬೇಕಾಗುತ್ತದೆ ಹಾಗೂ ಸ್ವಲ್ಪ ವಿಶ್ರಾಂತಿಯ ನಂತರ ಸಾಮಾನ್ಯ ಕಾರ್ಯಗಳಲ್ಲಿ ತೊಡಗಬಹುದು ಎಂದರು. ಅಪಘಾತ, ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ ಮುಂತಾದ ಸಂದರ್ಭಗಳಲ್ಲಿ ರಕ್ತದ ಅಗತ್ಯತೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕೋಶಾಧಿಕಾರಿ ಶ್ರೀ ಎಚ್.ಬಿ. ದಿನೇಶ್ ಅವರು ಮಾತನಾಡಿ, ಕೋವಿಡ್ ಸಮಯದಲ್ಲಿ ರಕ್ತದ ಕೊರತೆಯಿಂದ ಉಂಟಾದ ಸಮಸ್ಯೆಗಳನ್ನು ನೆನಪಿಸಿಕೊಳ್ಳಬೇಕು ಎಂದರು. ರೆಡ್ ಕ್ರಾಸ್ ಸೊಸೈಟಿ ಮೌನವಾಗಿ ಸಮಾಜ ಸೇವೆ ನಡೆಸುತ್ತಿರುವ ಮಹತ್ವದ ಸಂಸ್ಥೆಯಾಗಿದೆ ಎಂದು ಪ್ರಶಂಸಿಸಿದರು.
ರೋಟರಿ ಕ್ಲಬ್ ಆಫ್ ಮೈಸೂರ್ ಮೆಟ್ರೋ ಅಧ್ಯಕ್ಷ ಶ್ರೀ ಮೋಹನ್ ಗುರುಮೂರ್ತಿ ಮಾತನಾಡಿ, ರಕ್ತದಾನ ಸಮಾಜ ಸೇವೆಯ ಶ್ರೇಷ್ಠ ಮಾರ್ಗವಾಗಿದ್ದು, ಯುವಜನತೆ ಇಂತಹ ಕಾರ್ಯಗಳಲ್ಲಿ ಪಾಲ್ಗೊಂಡು ಮಾದರಿಯಾಗಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷರಾದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೆ ಪಿ. ಕೃಷ್ಣ ಮಾತನಾಡಿ, ಕೆ.ಎಂ. ನಂಜಪ್ಪ ಅವರ ಪ್ರೇರಣೆಯಿಂದ ಸಂಸ್ಥೆಯು ಪ್ರತಿ ವರ್ಷ ಸಾವಿರಾರು ಯೂನಿಟ್ ರಕ್ತ ಸಂಗ್ರಹಿಸುತ್ತಿದ್ದು, ಇದರಿಂದ ಅನೇಕ ಜೀವಗಳನ್ನು ಉಳಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಸಂಗ್ರಹಿಸಿದ ರಕ್ತವನ್ನು ಅಗತ್ಯವಿರುವ ಬಡಜನರಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ರೆಡ್ ಕ್ರಾಸ್ ಮೂಲಕ ನಡೆಯುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಐಕೆಎಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಿಜೇತರಾಗಿ ಮನಸ್ವಿನಿ ಮಹೇಂದ್ರ ಕಿರಣ (ದ್ವಿ. ಬಿಬಿಎ) ಪ್ರಥಮ, ಹರ್ಷಿತಾ ಎಂ. (ತೃ. ಬಿಕಾಂ) ದ್ವಿತೀಯ ಹಾಗೂ ಪ್ರದ್ಯುಮ್ನ ಕೆ. (ದ್ವಿ. ಬಿಸಿಎ) ತೃತೀಯ ಸ್ಥಾನ ಪಡೆದರು.


ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎ. ಅನಂತರಾಮ್, ಪ್ರಾಂಶುಪಾಲರಾದ ಡಾ. ಸೌಮ್ಯ ಈರಪ್ಪ ಕೆ., ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಅರ್ಚನಾ ಸ್ವಾಮಿ ಎನ್., ಸಂಯೋಜಕ ವಿನಯ್ ಎಂ., ಎನ್‌ಎಸ್‌ಎಸ್ ಅಧಿಕಾರಿ ಗುರುಮೂರ್ತಿ ಭಟ್, ಎನ್‌ಸಿಸಿ ಅಧಿಕಾರಿ ಲ್ಯೂಟಿನೆಂಟ್ ಕುಮಾರ್ ಆರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ವಿದ್ಯಾರ್ಥಿನಿ ಪಲ್ಗುಣಿ ನಡೆಸಿದರು. ಹರ್ಷಿತಾ ಎಂ. ಸ್ವಾಗತಿಸಿ, ದೀಪಿಕಾ ಆರ್ ವಂದಿಸಿದರು.
ಒಟ್ಟಾರೆ, ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ನಡೆದ ಈ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸಮಾಜ ಸೇವೆಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಅರಿವಿಗೆ ತಂದುಕೊಡುವುದರ ಜೊತೆಗೆ ಮಾನವೀಯ ಮೌಲ್ಯಗಳ ಬಲವರ್ಧನೆಗೆ ಕಾರಣವಾಯಿತು.

Leave a Response