
ಮೈಸೂರು :- ಕೆಂಪಿಸಿದ್ದನ ಹುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ಎಐಡಿಎಸ್ಓ ನೇತೃತ್ವದಲ್ಲಿ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯನ್ನು ಉದ್ದೇಶಿಸಿ AIKKMS ರೈತ ಸಂಘಟನೆಯ ಕೆಂಪಿಸಿದ್ದನ ಹುಂಡಿ ಗ್ರಾಮ ಸಮಿತಿಯ ಸದಸ್ಯರಾದ ರವಿ ಅವರು ಮಾತನಾಡಿ ಕೆ.ಪಿ.ಎಸ್ ಶಾಲೆಗಳಿಗಾಗಿ ಸರ್ಕಾರವು ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ನಿಂದ 2000 ಕೋಟಿ ಸಾಲವನ್ನು ಈಗಾಗಲೇ ಪಡೆದಿದೆ. ಮುಂದುವರೆದು ‘ಕಲ್ಯಾಣ ಕರ್ನಾಟಕ ವ್ಯಾಪ್ತಿಯ 07 ಜಿಲ್ಲೆಗಳಲ್ಲಿ 200 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಹೆಚ್ಚುವರಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶಾಲಾ ಶಿಕ್ಷಣ ಇಲಾಖೆಗೆ ಅಧಿಕಾರ ನೀಡಲಾಗಿದೆ.’ ಎಂದು ಆದೇಶ ಹೇಳುತ್ತದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮೀಸಲಿಟ್ಟ ದುಡ್ಡನ್ನೂ ಕಬಳಿಸುವ ಹುನ್ನಾರವಿದು. ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲು ಸಾಲ ಪಡೆಯುವಷ್ಟೂ ಸರ್ಕಾರ ದಿವಾಳಿಯಾಗಿದೆಯೇ ಎಂಬುದು ನಮ್ಮ ಪ್ರಶ್ನೆ. ಇಷ್ಟೂ ಸಾಲದ್ದಕ್ಕೆ ಕೆ.ಪಿ.ಎಸ್ ಶಾಲೆಗಳ ಹೊಸ ಕಟ್ಟಡಗಳಿಗಾಗಿ ಸರ್ಕಾರ ಖಾಸಗಿ ಕಂಪನಿಗಳತ್ತ ಕೈಚಾಚಿದೆ. ಹೊಂಗನೂರಿನ ಶಾಲೆಯ ಕಟ್ಟಡ ಕಟ್ಟಿಸಿರುವುದು ಒಂದು ಖಾಸಗಿ ಕಂಪನಿ. ಅದಕ್ಕೆ ಶಾಲೆಯ ಮುಖ್ಯದ್ವಾರದ ಮೇಲೆ ಶಾಲೆಯ ಹೆಸರಿನ ಮೇಲೆ ಕಂಪನಿಯ ಹೆಸರಿದೆ! ದೇಶಕ್ಕಾಗಿ, ಜನರಿಗಾಗಿ ದುಡಿದ ವ್ಯಕ್ತಿಗಳು, ಶಾಲೆಗೆ ನಿಸ್ವಾರ್ಥವಾಗಿ ದಾನ ನೀಡಿದ್ದ ದಾನಿಗಳ ಹೆಸರು ನೀಡುವ ಆಚರಣೆ ಇನ್ನು ಕಣ್ಮರೆಯಾಗುತ್ತದೆ. ಹಣ ನೀಡುವ ಕಂಪನಿಗಳ ಹೆಸರು ಮಾತ್ರವಲ್ಲದೇ, 6 ನೇ ತರಗತಿಯಿಂದ ನೀಡಲಾಗುವ ವೃತ್ತಿಪರ ಶಿಕ್ಷಣದ ಪಠ್ಯಕ್ರಮವನ್ನೂ ‘ಉದ್ಯಮ ಪಾಲುದಾರರ’ ಸಹಾಯದಿಂದ ವಿನ್ಯಾಸಗೊಳಿಸಲಾಗುವುದಂತೆ. ಆದೇಶದ ಪ್ರಕಾರ ‘ಶಾಲಾ ನಿರ್ವಹಣೆಯನ್ನು ಹೊರಗುತ್ತಿಗೆ ನೀಡುವುದು, ಶಾಲೆಗಳು ಸ್ವಂತ ಮೂಲದಿಂದ ಆದಾಯವನ್ನು ಸಂಗ್ರಹಿಸುವುದು, ಆದಾಯ ಸಂಗ್ರಹದ ಆಯ್ಕೆಗಳನ್ನು ಒದಗಿಸುವುದು ಮತ್ತು ಶಾಲಾ ಆಡಳಿತ ಸಮಿತಿಗಳನ್ನು ಸ್ಥಾಪಿಸುವ ಮೂಲಕ ಈ ಶಾಲೆಗಳನ್ನು ಬಲಪಡಿಸಲಾಗುವುದು. ಅಂದರೆ ಈ ಕೆ.ಪಿ.ಎಸ್ ಶಾಲೆಗಳನ್ನು ಸರ್ಕಾರದ ನಿಯಂತ್ರಣದಿಂದ ಕ್ರಮೇಣವಾಗಿ ಖಾಸಗಿ ಕಂಪನಿಗಳ ಮಡಿಲಿಗಿಡಲಾಗುತ್ತದೆ ಎಂದರು.

ಗ್ರಾಮಸ್ಥರಾದ ಯೋಗೇಶ್ ಅವರು ಮಾತನಾಡಿ ಒಂದೆಡೆ ಸರ್ಕಾರಿ ಶಾಲೆಗಳು ಮುಚ್ಚಲಿವೆ, ಇನ್ನೊಂದೆಡೆ ಈ ಕೆ.ಪಿ.ಎಸ್ ಶಾಲೆಗಳು ಖಾಸಗಿ ಶಾಲೆಗಳಾಗಿ ಸಾರ್ವಜನಿಕ ಶಿಕ್ಷಣವೇ ಈ ನಾಡಿನಿಂದ ಕಣ್ಮರೆಯಾಗಲಿದೆ. ಖಾಸಗಿಯವರ ಬಳಿ ಹಣಕ್ಕಾಗಿ ಕೈಚಾಚುವುದನ್ನು ಬಿಟ್ಟು ರಾಜ್ಯ ಸರ್ಕಾರವು ತನ್ನ ಬಜೆಟ್ ನಲ್ಲಿ 30% ಹಾಗೂ ಕೇಂದ್ರ ಸರ್ಕಾರವು 10% ಶಿಕ್ಷಣಕ್ಕೆ ಮೀಸಲಿಟ್ಟಾಗ ಈ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದರು. ನಮ್ಮೂರಿನ ಸರ್ಕಾರಿ ಶಾಲೆಯನ್ನು ಮುಚ್ಚಿ ನಂಜನಗೂಡಿಗೆ ವಿಲೀನಗೊಳಿಸುವುದಾಗಿ ಸರ್ಕಾರ ಆದೇಶದಲ್ಲಿ ತಿಳಿಸಿದೆ. ಇದನ್ನು ನಮ್ಮೂರಿನ ಜನತೆ ಯುವಕರು ಒಕ್ಕೋರಲಿನಿಂದ ವಿರೋಧಿಸುತ್ತೇವೆ ಎಂದರು.
ಎಐಡಿಎಸ್ಓ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ನಿತಿನ್ ಅವರು ಮಾತನಾಡಿಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆ ಹಾಗೂ ಎನ್.ಇ.ಪಿ ಯ ಶಾಲಾ ಸಂಕೀರ್ಣ ಎರಡೂ ಒಂದೇ.ಕರ್ನಾಟಕದಲ್ಲಿ ಎನ್.ಇ.ಪಿ -2020 ನ್ನು ಹಿಂಪಡೆಯುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎನ್.ಇ.ಪಿ ಯನ್ನು ಅಕ್ಷರಶಃ ಜಾರಿಗೆ ತರುತ್ತಿದೆ. 1 ರಿಂದ 12 ನೇ ತರಗತಿಯವರೆಗೆ ಒಂದೇ ಜಾಗದಲ್ಲಿ ಮಾಡುವುದು, ಖಾಸಗಿ ಕಂಪನಿಗಳ ಹಣ ಸಹಾಯದೊಂದಿಗೆ ಶಾಲಾ ಸಂಕೀರ್ಣಗಳನ್ನು ರಚಿಸುವುದು, ಬೇರೆ ಶಾಲೆಗಳನ್ನು ಈ ಶಾಲಾ ಸಂಕೀರ್ಣದೊಂದಿಗೆ ವಿಲೀನಮಾಡುವುದೆಲ್ಲವೂ ಎನ್.ಇ.ಪಿ ಯ ನೀಲಿನಕ್ಷೆಯೇ.
ಕೆಂಪಿಸಿದ್ದನ ಹುಂಡಿ ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿಯನ್ನು ರಚಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘಟನೆಯAIKKMS ರೈತ ಸಂಘಟನೆಯ ಕೆಂಪಿಸಿದ್ದನ ಹುಂಡಿ ಗ್ರಾಮ ಸಮಿತಿಯ ಸದಸ್ಯರಾದ ಮಂಜು, ರವಿ ಕೆ .ಎಸ್ ,ಉಮೇಶ್, ಭಾಸ್ಕರ್ ,ಭರತ್ ,ಸುಮತಿ ಹಾಗೂ ಎಐಡಿಎಸ್ಓ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ನಿತಿನ್,ಉಪಾಧ್ಯಕ್ಷರಾದ ಸ್ವಾತಿ, ಪದಾಧಿಕಾರಿಗಳಾದ ದಿಶಾ , ಅಂಜಲಿ ನಂದೀಶ್, ವಿಕಾಸ್ ಹಾಗೂ ಊರಿನ ಗ್ರಾಮಸ್ಥರಾದ ಚಂದ್ರಶೇಖರ್, ಆನಂದ್, ಸಿದ್ದರಾಜು, ವಸಂತ ,ನೀಲಕಂಠ ವಿದ್ಯಾರ್ಥಿಗಳಾದ ಅಜಯ್, ವಿಜಯ್ ,ಶಿವು ಹಾಗೂ ಮುಂತಾದವರು ಭಾಗವಹಿಸಿದ್ದರು



