
ಮೈಸೂರು, ಫೆ.26, 2026:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಮೈಸೂರು ವೃತ್ತದ ಮುಖ್ಯ ಇಂಜಿನಿಯರ್ ಆಗಿದ್ದ ಮೃತ್ಯುಂಜಯ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಗುರುವಾರ ನಗರದ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಇಂಜಿನಿಯರ್ ಮೃತ್ಯುಂಜಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೆಸ್ಕ್ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು, ಮೃತ್ಯುಂಜಯ ಅವರ ಕಾರ್ಯವೈಖರಿ, ಕೆಲಸದ ಮೇಲಿನ ಶ್ರದ್ಧೆ ಮತ್ತು ನಿಷ್ಠೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿದ್ದಕ್ಕಾಗಿ ಸಂತಸ ಹಂಚಿಕೊಂಡು, ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೃತ್ಯುಂಜಯ ಅವರು, “ಸರ್ಕಾರಿ ಉದ್ಯೋಗ ದೊರೆತಿರುವುದು ನಮ್ಮ ಪುಣ್ಯಫಲ. ಆದ್ದರಿಂದ ನಾವೆಲ್ಲರೂ ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸಬೇಕು. ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇದ್ದರೆ ಜನರಿಂದ ಗೌರವ ಹಾಗೂ ಪ್ರಶಂಸೆ ಸ್ವಾಭಾವಿಕವಾಗಿ ದೊರೆಯುತ್ತದೆ” ಎಂದು ಹೇಳಿದರು.

ತಮ್ಮ ಸೇವಾ ಅವಧಿಯಲ್ಲಿ ಹೆಚ್ಚಿನ ವರ್ಗಾವಣೆಗಳು ಆಗದೆ, ದೀರ್ಘಕಾಲ ಬೆಸ್ಕಾಂನಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದು ಅವರು ಸ್ಮರಿಸಿದರು. ಹಿರಿಯ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯುವ ಮನೋಭಾವ ಹೊಂದದೆ, ಎಲ್ಲರೂ ಒಗ್ಗೂಡಿ ಸಂಸ್ಥೆಯ ಏಳಿಗೆಗಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಸಂಸ್ಥೆಯ ಬಗ್ಗೆ ಪ್ರಾಮಾಣಿಕತೆ ಮತ್ತು ಇಂಟಿಗ್ರಿಟಿ ಹೊಂದಿ ಕೆಲಸ ಮಾಡಬೇಕು. ನಾವು ಕೆಲಸ ಮಾಡುವ ಸಂಸ್ಥೆಯನ್ನು ಮನೆಯಂತೆ ಭಾವಿಸಿ, ವೃತ್ತಿ ಗೌಪ್ಯತೆ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಸದಾ ಅಧ್ಯಯನಶೀಲರಾಗಿದ್ದು ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿರಿಯ ಅಧಿಕಾರಿಗಳಿಗೆ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಸೆಸ್ಕ್‌ನ ತಾಂತ್ರಿಕ ನಿರ್ದೇಶಕರಾದ ಡಿ.ಜೆ. ದಿವಾಕರ್ ಸೇರಿದಂತೆ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
“ಮೃತ್ಯುಂಜಯ ಅವರು ತಮ್ಮ ಕೆಲಸದಲ್ಲಿ ಸಕಾರಾತ್ಮಕ ಗುಣ ಹೊಂದಿದ್ದರು. ಅವರ ಕೆಲಸದ ವೈಖರಿ ಎಲ್ಲರಿಗೂ ಮಾದರಿ ಆಗಿದ್ದು, ಅವರ ಸೇವೆಯ ಅನುಭವವನ್ನು ಇನ್ನಷ್ಟು ಪರಿಣಾಮಕಾರಿ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಮೃತ್ಯುಂಜಯ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ”.
ಕೆ.ಎಂ. ಮುನಿಗೋಪಾಲ ರಾಜು,
ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್.





