HOMENews

ವೈದ್ಯಕೀಯ ಕನಸಿನತ್ತ ಹೆಜ್ಜೆ ಗ್ರಾಮೀಣ ಪ್ರತಿಭೆಗೆ ಗರಿ: ನಿಶ್ಚಲ ಸಾಧನೆಗೆ ಎಲ್ಲೆಡೆ ಮೆಚ್ಚುಗೆ

ವರದಿ: ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ, ಏಪ್ರಿಲ್ 10: ಪರಿಶ್ರಮದ ಪಥದಲ್ಲಿ ನಡೆದ ಹೆಜ್ಜೆಗಳು ಕೆಲವೊಮ್ಮೆ ಮಿಂಚಿನಂತೆ ಫಲ ಕೊಡುತ್ತವೆ… ಅದಕ್ಕೆ ಜೀವಂತ ಉದಾಹರಣೆಯಾಗಿ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿ ಕುಮಾರಿ ನಿಶ್ಚಲ ಹೊರಹೊಮ್ಮಿದ್ದಾರೆ.
2025–26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅವರು, ಶೇಕಡಾ 97.83 (587 ಅಂಕ) ಗಳಿಸಿ ಪಿರಿಯಾಪಟ್ಟಣ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಅವರ ಈ ಸಾಧನೆ ಶಿಕ್ಷಣ ವಲಯದಲ್ಲಿ ಹೆಮ್ಮೆ ಮೂಡಿಸಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಕ್ಷರ ಪಿಯು ಕಾಲೇಜಿನ ಗೌರವವನ್ನು ಮತ್ತಷ್ಟು ಎತ್ತಿದೆ.
ಕುಮಾರಿ ನಿಶ್ಚಲ ಅವರು ಮೂಲತಃ ಕೊಪ್ಪಲ ಜಿಲ್ಲೆಯ ತಂದ್ರಿಗುಡಿ ಗ್ರಾಮದ ನಿವಾಸಿಗಳಾದ ಕುಮಾರ್ ಹಾಗೂ ವಿಶಾಲಾಕ್ಷಿ ದಂಪತಿಯ ಪುತ್ರಿ. ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳ ನಡುವೆಯೂ ಶಿಕ್ಷಣದ ಮೇಲೆ ಅಚಲ ಮನೋಭಾವದಿಂದ ಅವರು ಈ ಸಾಧನೆಗೆ ತಲುಪಿದ್ದಾರೆ.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಕೆ. ಹೊಸಹಳ್ಳಿ ಕೃಷ್ಣೇಗೌಡ ಅವರು ಮಾತನಾಡಿ, “ನಿಶ್ಚಲ ಅವರು ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿದ್ದು, ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ರಜೆ ಅವಧಿಯಲ್ಲಿಯೂ ಊರಿಗೆ ತೆರಳದೇ ಓದಿನತ್ತ ಕೇಂದ್ರೀಕರಿಸಿದ್ದು ಅವರ ಶ್ರದ್ಧೆ ಮತ್ತು ಸಂಕಲ್ಪವನ್ನು ತೋರಿಸುತ್ತದೆ” ಎಂದು ಶ್ಲಾಘಿಸಿದರು.
“ಶಿಸ್ತಿನ ವಿದ್ಯಾರ್ಥಿನಿಯಾಗಿರುವ ನಿಶ್ಚಲ ಅವರು ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು ಹೊಂದಿದ್ದಾರೆ. ಅವರಂತಹ ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪಿದರೆ ಇನ್ನಷ್ಟು ಸಾಧನೆಗಳು ಸಾಧ್ಯ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಲಯ ಮೇಲ್ವಿಚಾರಕಿ ಶ್ರೀಮತಿ ರಶ್ಮಿ ಅವರು ಕೂಡ ಸಂತಸ ವ್ಯಕ್ತಪಡಿಸಿ, “ನಿಶ್ಚಲ ಅವರು ಸದಾ ಮಿತಭಾಷಿಯಾಗಿದ್ದು, ಅಧ್ಯಯನದ ಕಡೆ ಹೆಚ್ಚು ಗಮನ ಹರಿಸುವ ಗುಣ ಹೊಂದಿದ್ದಾರೆ. ಇತರ ವಿದ್ಯಾರ್ಥಿನಿಗಳಿಗೆ ಮಾದರಿಯಾಗಿದ್ದಾರೆ” ಎಂದು ಹೇಳಿದರು.

ಈ ಸಾಧನೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದ್ದು, ಸಿಬ್ಬಂದಿಗಳು ಹಾಗೂ ಸಹಪಾಠಿಗಳು ಅಭಿನಂದನೆಗಳ ಮಳೆಗರೆದರು. ನಿಶ್ಚಲ ಅವರ ಯಶಸ್ಸು ಗ್ರಾಮೀಣ ಹಾಗೂ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದೆ.

Leave a Reply