
ಅಕ್ರಮ ಕಟ್ಟಡಗಳ ಮೇಲೆ ಕಣ್ಣು: ಕೆ.ಆರ್.ನಗರ ಪುರಸಭೆಯಿಂದ ಎಚ್ಚರಿಕೆ
ವರದಿ ವಡ್ಡರಕೊಪ್ಪಲು ಶಿವರಾಮು.
ಕೆ.ಆರ್.ನಗರ. ಫೆ. 06:- ಪುರಸಭೆಯ ಗಮನಕ್ಕೆ ತರದೆ ಯಾವುದೇ ಅನಧಿಕೃತ ಕಟ್ಟಡಗಳು ಮತ್ತು ಪುರಸಭೆಯ ವಾಣಿಜ್ಯ ಮಳಿಗೆಗಳನ್ನು ಬಳಕೆ ಮಾಡಿಕೊಂಡರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ ಪುರಸಭೆ ಮುಖ್ಯಾಧಿಕಾರಿಜಿಎಸ್ ರಮೇಶ್

ಪಟ್ಟಣದಲ್ಲಿ ತಲೆಯೆತ್ತಿರುವ ಅನಧಿಕೃತ ಕಟ್ಟಡಗಳು ಮತ್ತು ಪುರಸಭೆಯಿಂದ ಮುಚ್ಚಲ್ಪಟ್ಟ ವಾಣಿಜ್ಯ ಮಳಿಗೆಗಳನ್ನು ಪುರಸಭೆಗೆ ಮಾಹಿತಿ ನೀಡದೆ ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಜಿಎಸ್ ರಮೇಶ್ ಹೇಳಿದರು.
ಪುರಸಭೆಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಾರ್ಷಿಕ ಅನುದಾನ ಹಂಚಿಕೆ ಮಾಡುವಾಗ ಜನರ ಬೇಡಿಕೆ ಮತ್ತು ಅನುಕೂಲಕ್ಕೆ ತಕ್ಕ ಹಾಗೆ ಹಣ ಮೀಸಲಿಡಲಾಗುತ್ತದೆ.ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡಿನ ಸಮಗ್ರ ಅಭಿವೃದ್ಧಿ ಸಾರ್ವಜನಿಕರು ನೀಡುವ ಸಲಹೆ ಮತ್ತು ಸೂಚನೆಗಳನ್ನು ಸ್ವೀಕಾರ ಮಾಡಿ ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಪುರಸಭೆ ಮುಖ್ಯಾಧಿಕಾರಿ ಹೇಳಿದರು.
ಬಜೆಟ್ ಪೂರ್ವ ಸಭೆಯಲ್ಲಿ ಪುರಸಭೆ ಎಚ್ಚರಿಕೆ: ನಿಯಮ ಉಲ್ಲಂಘನೆ ಸಹಿಸಲಾಗದು
ಪ್ರಮುಖ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಮತ್ತು ಸಾರ್ವಜನಿಕರು ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದು ಇದರೊಂದಿಗೆ ಎಲ್ಲಾ ವಿಚಾರಗಳನ್ನು ಪರಿಗಣಿಸಿ ಉತ್ತಮ ಬಜೆಟ್ ಮಂಡಿಸುವ ಭರವಸೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಕೋಳಿಪ್ರಕಾಶ್ ಮಾತನಾಡಿ ಪಟ್ಟಣದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದು ಇದಕ್ಕೆ ಯಾರು ಹೊಣೆ ಎಂದು ತೀಕ್ಷವಾಗಿ ಪ್ರಶ್ನಿಸಿದರು.
ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜಾಗುತ್ತಿದ್ದು ಇದರೊಂದಿಗೆ ಸ್ವಚ್ಚತೆಗೂ ಕಾಣದಂತಾಗಿರುವುದರಿಂದ ಅಧಿಕಾರಿಗಳ ವಿರುದ್ದ ಜನತೆ ಆಕ್ರೋಶ ಗೊಂಡಿದ್ದು ಇದನ್ನು ಸರಿಪಡಿಸಿ ಕೊಂಡು ಬಜೆಟ್ ನಲ್ಲಿ ಜನ ಪರ ಕೆಲಸಗಳಿಗೆ ಅಗತ್ಯ ಹಣ ಒದಗಿಸಬೇಕು ಎಂದು ಸಲಹೆ ನೀಡಿದರು.

ಸೌಲಭ್ಯ ಕೊರತೆ ಕುರಿತು ಟೀಕೆ ಮಧ್ಯೆ ಬಜೆಟ್ ಸಭೆ ಚರ್ಚೆಗಳು ಕಾವು
ತಾಲೂಕು ಕಸಾಪ ಉಪಾಧ್ಯಕ್ಷ ಕೆ.ಹೆಚ್.ಕೃಷ್ಣಯ್ಯ ಮಾತನಾಡಿ ಪಟ್ಟಣದ ಸಾರ್ವಜನಿಕ ರಸ್ತೆಗಳು ಮತ್ತು 23 ವಾರ್ಡುಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗಂಭೀರ ವಾಗಿ ಚರ್ಚಿಸಿ ಅಗತ್ಯ ಸಲಹೆ ನೀಡಿ ಆಡಳಿತ ಮಂಡಳಿಯ ಅನುಪಸ್ಥಿತಿಯಲ್ಲಿ ಅಧಿಕಾರಿಗಳು ಉತ್ತಮ ಬಜೆಟ್ ಮಂಡಿಸಬೇಕೆಂದರು.
ತಾಲೂಕು ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ವಡ್ಡರಕೊಪ್ಪಲುಶಿವರಾಮು ಮಾತನಾಡಿ ನಿತ್ಯ ಸಾರ್ವಜನಿಕ ಸುದ್ದಿ ಮಾಡಿ ವೃತ್ತಿ ಧರ್ಮ ಪಾಲಿಸುವ ನಿಜ ಪತ್ರಕರ್ತರ ಆರೋಗ್ಯ ದ ಹಿತ ದೃಷ್ಟಿಯಿಂದ 5 ಲಕ್ಷ ರೂಗಳನ್ನು ಅಪದ್ಧನ ಮತ್ತು ವೈದ್ಯಕೀಯ ನಿಧಿಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು. ಇದಕ್ಕುತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಸ್ಥಳೀಯ ಸಂಸ್ಥೆಗಳಲ್ಲಿ ಪತ್ರಕರ್ತರ ಅಭುದ್ದೋಯಕ್ಕೆ ಮತ್ತು ಆರೋಗ್ಯ ನಿಧಿಗೆ ಹಣ ಮೀಸಲಿಡುವ ಬಗ್ಗೆ ಸರ್ಕಾರ ಮತ್ತು ಸಂಬಂಧಿತ ಇಲಾಖೆಯವರಿಂದ ಅಗತ್ಯ ಮಾಹಿತಿ ಪಡೆದು ಅದನ್ನು ಅನುಷ್ಠಾನಗೊಳಿಸುತ್ತೇನೆ ಎಂದು ಮಾಹಿತಿ ನೀಡಿದರು.
ಪುರಸಭೆ ಸ್ಥಾಯಿ ಸಮಿಯಿ ಮಾಜಿ ಅಧ್ಯಕ್ಷ ಎಸ್.ಯೋಗಾನಂದ್ ಮಾತನಾಡಿ ಪಟ್ಟಣದ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಸುಳ್ಳು ನೆಪ್ಪ ಹೋಡಿ ಬಾಡಿಗೆ ಪಾವತಿ ಮಾಡುತ್ತಿಲ್ಲ ಮತ್ತು ಪ್ರಭಾವಿ ಉದ್ಯಮಿ ಮತ್ತು ವ್ಯಾಪಾರಿಯಾಗಿರುವ ಕಾಮಧೇನುಧರ್ಮ ಎಂಬಾತ ತನ್ನ ಬೇಕರಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದು ಕೂಡಲೇ ವಿದ್ಯುತ್ ಸಂಪರ್ಕ ಕಡಿತ ಮಾಡಿಸಬೇಕು ಎಂದು ರೋಷದಿಂದ ನುಡಿದರು.

ಆದಿ ಜಾಂಬವ ಸಂಘದ ಅಧ್ಯಕ್ಷ ಲೋಕೇಶ, ಪತ್ರಕರ್ತ ಕುಪ್ಪೆಮಹದೇವಸ್ವಾಮಿ, ರಸ್ತೆ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ.ಮಹದೇವ್ ಮತ್ತಿತರರು ಮಾತನಾಡಿ ಬಜೆಟ್ ಸಂಬಂಧ ಹಲವು ಸಲಹೆ ಸೂಚನೆ ನೀಡಿದರು. ಕಛೇರಿ ವ್ಯವಸ್ಥಾಪಕ ಎಸ್.ಪಿ.ರಾಜೇಂದ್ರಕುಮಾರ್, ಪರಿಸರ ಅಭಿಯಂತರ ಬಿ.ಎಸ್.ಮಧುಸೂದನ್, ಕಚೇರಿ ಅಕೌಂಟೆಂಟ್ ಸ್ವಪ್ನ. ಕಂದಾಯಾಧಿಕಾರಿ ಆರ್.ರಘು, ಕಿರಿಯ ಆರೋಗ್ಯ ನಿರೀಕ್ಷಕ ಹೆಚ್.ಎಸ್. ಲೋಕೇಶ್, ನೋಡೆಲ್ ಇಂಜಿನಿಯರ್ ಬಸವರಾಜು, ಕಛೇರಿ ಸಿಬ್ಬಂದಿಗಳಾದ ಲೋಕೇಶ್, ಆರ್.ಕುಮಾರ್, ಮಹದೇವನಾಯಕ, ಕೆ.ಸಿ.ಗಣೇಶ್ ಮತ್ತಿತರರು ಇದ್ದರು.



