
ವರದಿ:ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ : ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ತುಂಬಾ ಹದಗೆಟ್ಟಿದ್ದು, ರೈತರು ಮತ್ತು ಸಾಮಾನ್ಯ ಜನರ ಕಷ್ಟ ಕೇಳುವವರಿಲ್ಲದಂತಾಗಿದೆ ಎಂದು ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಆರೋಪಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತಾಲೂಕಿನಲ್ಲಿ 4 ರಾಗಿ ಖರೀದಿ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ ತೂಕದ ಅಳತೆಯಲ್ಲಿ 4 ಕೆಜಿ ರಾಗಿಯನ್ನು ಕಳೆಯುತ್ತಾರೆ ಹಾಗೂ ರೈತರಿಂದ ರಾಗಿ ಖರೀದಿಸಲು ಬ್ರೋಕರ್ ಮುಖಾಂತರ ಲಂಚವನ್ನು ಕೇಳುತ್ತಿದ್ದಾರೆ ಎಂದು ರೈತರು ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ. ತಾಲೂಕಿನ ವಾಣಿಜ್ಯ ಬೆಳೆ ತಂಬಾಕಾಗಿದ್ದು ಇಂದು ತಂಬಾಕಿಗೆ ಸೂಕ್ತ ಬೆಲೆ ಸಿಗದೆ ತಂಬಾಕನ್ನು ರೈತರು ಸುಟ್ಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಅಲ್ಲದೆ ಬೆಳೆಗೆ ಸೂಕ್ತ ಬೆಲೆಗಾಗಿ ರೈತ ಸಂಘಗಳು ತಂಬಾಕು ಮಂಡಳಿಯಲ್ಲಿ ಅಹೋ ರಾತ್ರಿ ಪ್ರತಿಭಟನೆ ಮಾಡುವುದರ ಮೂಲಕ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಆದರೆ ಇಂತಹ ಸಂದರ್ಭದಲ್ಲಿ ರೈತರೊಂದಿಗೆ ಕೈಜೋಡಿಸಬೇಕಾದ ಮಾನ್ಯ ಸಚಿವರು ಮೌನವಿಸಿದ್ದಾರೆ ಪ್ರತಿ ವಿಚಾರಕ್ಕೂ ಕೇಂದ್ರ ಸರ್ಕಾರದ ಮೇಲೆ ಬೆಟ್ಟು ತೋರಿಸುವ ಸಚಿವರು ಜಿಎಸ್‌ಟಿ ರೂಪದಲ್ಲಿ ತಂಬಾಕಿನಿಂದ ಬರುವ 40% ಆದಾಯವನ್ನು ರಾಜ್ಯ ಸರ್ಕಾರವು ಪಡೆಯುತ್ತಿದ್ದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಷ್ಟೇ ಜವಾಬ್ದಾರಿ ಇದು, ರಾಜ್ಯ ಸರ್ಕಾರ ರೈತರ ಕಣ್ಣೀರ ಮೇಲೆ ರಾಜಕೀಯ ಮಾಡುವುದನ್ನು ಬಿಟ್ಟು ಇಂತಹ ವಿಚಾರಗಳಲ್ಲಿ ಎಲ್ಲರೂ ಸಹ ಒಗ್ಗಟ್ಟಾಗಿ ಹೋರಾಟ ಮಾಡಿ ರೈತರಿಗೆ ನ್ಯಾಯ ಕೊಡಿಸಬೇಕಾಗಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸರೇ ಮಿಷಿನ್ ಕೆಟ್ಟು ಹೋಗಿ ವರ್ಷಗಳೇ ಕಳೆದರೂ ಅದನ್ನು ಸರಿಪಡಿಸಲು ಸಚಿವರು ತಲೆಕೆಡಿಸಿಕೊಳ್ಳುತ್ತಿಲ್ಲ , ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದ್ದು, ವೈದ್ಯರ ಕೊರತೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸ್ಪಂದಿಸದ ವೈದ್ಯರಿದ್ದು ಸಾಕಷ್ಟು ಕಾಯಿಲೆಗಳಿಗೆ ಚಿಕಿತ್ಸೆ ದೊರಕದಾಗಿದೆ. ಕಗ್ಗುಂಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಪ್ರಕರಣ ದಾಖಲಿಸಿ ಆ ಕುಟುಂಬವು ಇಂದು ಬೀದಿಗೆ ಬೀಳುವಂತಾಗಿದೆ. ಹಿರಿಯ ವಯಸ್ಸಿನ ಇವರು ದ್ವೇಷದ ರಾಜಕಾರಣವನ್ನು ತಾಲೂಕಿನಲ್ಲಿ ಮಾಡುತ್ತಿದ್ದು ಇದರಿಂದಾಗಿ ತಾಲೂಕಿನ ಜನತೆ ಬಹಳ ತೊಂದರೆಗೆ ಒಳಗಾಗುತ್ತಿದ್ದಾರೆ. ಇವರು ನನ್ನ ಮೇಲಿನ ದ್ವೇಷಕ್ಕೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಹಾಗೂ ಬೆಂಬಲಿಗರಿಗೆ ತೊಂದರೆ ನೀಡುತ್ತಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ಚುನಾವಣೆಯಲ್ಲಿ ನಿಂತ್ತು ನನ್ನನು ಸೋಲಿಸಲಿ ಎಂದು ಸವಾಲಾಕಿದರು ಹಾಗೂ ಇದೇ ರೀತಿಯ ಬೆಳವಣಿಗೆಯನ್ನು ಮುಂದುವರಿಸಿದಲ್ಲಿ ಇವರ ವಿರುದ್ಧ ಪಕ್ಷದ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಹಿಂದೆ ನಮ್ಮ ನಾಯಕರಾದ ಮಾಜಿ ಶಾಸಕ ಮಾದೇವಣ್ಣನವರು ತಾಲೂಕಿನ ಶಕ್ತಿ ದೇವತೆ ಶ್ರೀ ಮಸಣಿಕಮ್ಮ ದೇವಾಲಯ ನಿರ್ಮಾಣ, ಬೆಟ್ಟದಪುರ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ರಸ್ತೆ ನಿರ್ಮಾಣಕ್ಕೆ ಈ ಹಿಂದೆಯೇ ಬಿಜೆಪಿ ಸರ್ಕಾರದಲ್ಲಿ ಅನುದಾನವನ್ನು ಮಂಜೂರು ಮಾಡಿಸಿದರು ಅದೇ ಕಾಮಗಾರಿಗೆ ಇಂದು ಸಿಎಂ ಸಿದ್ದರಾಮಯ್ಯ ನವರನ್ನು ಕರೆಸಿ ಗುದ್ದಲಿ ಪೂಜೆ ನಡೆಸುತ್ತಿರುವುದು ವಿಪರ್ಯಾಸ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಐಲಾಪುರ ರಾಮು ಮಾತನಾಡಿ ತಾಲೂಕಿನಲ್ಲಿ ಸಚಿವ ಕೆ.ವೆಂಕಟೇಶ್ ನೆಪ ಮಾತ್ರಕ್ಕೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ ಒಂದೇ ಕಾಮಗಾರಿಗೆ ಹಲವು ಬಾರಿ ಗುದ್ದಲಿ ಪೂಜೆ ನೆರವೇರಿಸುತ್ತಿದ್ದಾರೆ . ಹಾರಂಗಿ ಸಮೀಪದ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 3 ರಿಂದ 4 ಬಾರಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಆದರೆ ಇಲ್ಲಿಯವರೆಗೂ ಯಾವುದೇ ಕೆರೆಗಳಿಗೆ ನೀರು ತುಂಬಿಲ್ಲ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸ್ ರೇ ಘಟಕವು ದುರಸ್ತಿಯಾಗಿದ್ದು ಇದನ್ನು ದುರಸ್ತಿ ಪಡಿಸದೆ ಸಮೀಪದಲ್ಲಿರುವ ಇವರ ಬೆಂಬಲಿಗರ ಚಿಕಿತ್ಸಾ ಕೇಂದ್ರಗಳಿಗೆ ಸಹಕಾರವಾಗಿ ನಿಂತಿದ್ದಾರೆ. ಇದರಿಂದಾಗಿ ರೋಗಿಗಳು ಹೆಚ್ಚಿನ ವೆಚ್ಚವನ್ನು ಭರಿಸಿ ಚಿಕಿತ್ಸೆ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಟಿ. ರಂಗಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಕೆ. ಮಹೇಶ್, ಮುಖಂಡರಾದ ಸಿ. ಎನ್. ರವಿ, ಕಂಪ್ಲಾಪುರ ಕುಮಾರ್, ವಿದ್ಯಾಶಂಕರ್, ಪೆಪ್ಸಿ ಕುಮಾರ್,ಬೆಕ್ಕರೆ ಗಣೇಶ್,ಅಪೂರ್ವ ಮೋಹನ್ ಹಾಜರಿದ್ದರು.





