ಜಾತ್ರೆ ಬಳಿಕ ಕಸದ ರಾಶಿಗಳ ನಡುವೆ ಚುಂಚನಕಟ್ಟೆ: ಸ್ವಚ್ಚತೆಗೆ ನಿರ್ಲಕ್ಷ್ಯ ಆರೋಪ, ಆಡಳಿತದ ವಿರುದ್ಧ ಭಕ್ತರ ಆಕ್ರೋಶ

ಜಾತ್ರೆ ಬಳಿಕ ಕಸದ ಕಾಟ: ಚುಂಚನಕಟ್ಟೆ ದೇವಾಲಯ ಆವರಣದಲ್ಲಿ ಸ್ವಚ್ಚತೆ ನಿರ್ಲಕ್ಷ್ಯ
ವರದಿ :- ಹೊಸೂರ್ ಆನಂದ್.
ಸಾಲಿಗ್ರಾಮ :- ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯಲ್ಲಿಕಳೆದ ಜನವರಿ ತಿಂಗಳಲ್ಲಿ ನಡೆದ ಭಾರೀ ಜಾತ್ರಾ ಮಹೋತ್ಸವದ ಸಂಭ್ರಮ ಕಡಿಮೆಯಾಗುತ್ತಿದ್ದಂತೆ, ಅಲ್ಲಿನ ಪರಿಸರದ ನೈಜ ಸ್ಥಿತಿ ಬಾರದೆ ಇರುವುದು ಆತಂಕಕಾರಿ ರೂಪ ಪಡೆದುಕೊಂಡಿದೆ. ಜಾತ್ರೆಯ ನಂತರ ತ್ಯಾಜ್ಯ ವಿಲೇವಾರಿ ಕ್ರಮ ಕೈಗೊಳ್ಳದೇ ಹಾಗೆಯೇ ಬಿಟ್ಟಿರುವುದರಿಂದ ಶ್ರೀರಾಮ ದೇವಾಲಯದ ಆವರಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಕಸದ ರಾಶಿಗಳಿಂದ ತುಂಬಿ ದೇವಾಸ್ಥನಕ್ಕೆ ಬರುವ ಭಕ್ತಾದಿಗಳಿಗೆ ದುರ್ವಾಸನೆಯಿಂದ ಕೂಡಿರುವುದು ಸ್ಥಳೀಯರು ಮತ್ತು ಅಲ್ಲಿಗೆ ಬರುವ ಭಕ್ತರಲ್ಲಿ ಆಕ್ರೋಶ ಮೂಡಿಸಿದೆ.

ಚುಂವನಕಟ್ಟೆಯ ಜಾನುವಾರು ಜಾತ್ರೆ ಹಾಗೂ ಬ್ರಹ್ಮ ರಥೋತ್ಸವದ ಸಂದರ್ಭಗಳಲ್ಲಿ ಸಾವಿರಾರು ಭಕ್ತರು ದೂರದ ಸ್ಥಳಗಳಿಂದ ಆಗಮಿಸಿ ಅನ್ನಪ್ರಸಾದ ಸೇವಿಸಿ ಹಿಂತಿರುಗಿರುವ ಹಿನ್ನೆಲೆಯಲ್ಲಿ ಬಳಸಿದ ಊಟದ ಎಲೆಗಳು, ಪ್ಲಾಸ್ಟಿಕ್ ಲೋಟಗಳು, ಪ್ಯಾಕೆಟ್‌ಗಳು ಹಾಗೂ ಇತರೆ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಡಿರುವ ದೃಶ್ಯ ಕಂಡುಬರುತ್ತಿದೆ. ಶ್ರೀರಾಮ ಸುತ್ತಮುತ್ತ ದೇವಾಲಯದ ಆವರಣದಲ್ಲಿ ಹರಡಿಕೊಂಡಿರುವ ಈ ಕಸದ ರಾಶಿಗಳು ಕೇವಲ ಕಣ್ಣಿಗೆ ಅಸಹ್ಯಕರವಾಗಿರುವುದಷ್ಟೇ ಅಲ್ಲ, ಕಮಟುವಾಸನೆಯಿಂದ ಪರಿಸರವೇ ಗಬ್ಬೆದ್ದು ನಾರುತ್ತಿದೆ. ಇದರಿಂದ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಮೂಗುಮುಚ್ಚಿಕೊಂಡೇ ದೇವರ ಪೂಜೆಗೆ ಬರುವಂತ ಪರಿಸ್ಥಿತಿ ಎದುರಾಗಿದೆ ಎಂಬ ದೂರುಗಳು ಅಲ್ಲಿಗೆ ಬರುವ ಭಕ್ತದಿಗಳಿಂದ ಕೇಳಿಬರುತ್ತಿವೆ.
ಶ್ರೀ ರಾಮ ದೇವಾಲಯದ ತೇರಿನ ಮನೆ ಸುತ್ತಮುತ್ತ, ದೇವಾಲಯದ ಅವರಣದಲ್ಲಿರುವಂತಹ ಹನುಮಂತ ಮೂರ್ತಿಯ ಆಸುಪಾಸಿನಲ್ಲಿ ಅಡುಗೆ ಮಾಡಿದ ನಂತರ ಬಿಟ್ಟುಹೋದ ತ್ಯಾಜ್ಯ, ಮುಡಿಕಟ್ಟೆ ಪ್ರದೇಶ ಹಾಗೂ ರಾಮಸಮುದ್ರ ನಾಲೆಯ ಏರಿಯ ಬಳಿ ಕಸ ಸೇರುವಿಕೆಯಿಂದ ಪರಿಸರ ಹಾಳಾಗಿದೆ. ಅಲ್ಲದೆ ಆದಿಚುಂಚನಗಿರಿ ಕಲ್ಯಾಣ ಮಂಟಪದ ಸುತ್ತ ಹಾಗೂ ದೇವಾಲಯದ ಆಗಮನ ಗೋಪುರದ ಬಳಿಯೂ ಸ್ವಚ್ಚತೆ ಕಾಣದಿರುವುದು ಜಾತ್ರೆಯ ನಂತರ ವ್ಯವಸ್ಥಾಪನಾ ಕೊರತೆಯನ್ನು ತೋರಿಸುತ್ತಿದೆ. ಜಾತ್ರೆಯ ಸಂಭ್ರಮ ಮುಗಿದ ಬಳಿಕ ಚುಂಚನಕಟ್ಟೆಯ ಸ್ವಚ್ಚತೆ ಕೂಡ ಹಾಳಾಗಿರುವ ಚಿತ್ರಣ ಎದ್ದು ಕಾಣುವಂತೆ ಸ್ಪಷ್ಟವಾಗುತ್ತಿದೆ ಎಂದು ಸ್ಥಳೀಯರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
ಶ್ರೀರಾಮ ದೇವಾಲಯ ಕೇವಲ ಜಾತ್ರಾ ದಿನಗಳಿಗೆ ಮಾತ್ರ ಸೀಮಿತವಾಗಿರುವ ಸ್ಥಳವಲ್ಲ. ನಿತ್ಯ ಹಾಗೂ ವಾರಾಂತ್ಯಗಳಲ್ಲಿ ಸಾವಿರಾರು ಭಕ್ತರು ಭೇಟಿ ನೀಡುವ ಪವಿತ್ರ ಕ್ಷೇತ್ರವಾಗಿರುವುದರಿಂದ ಮೂಲಭೂತ ಸೌಲಭ್ಯಗಳು ಹಾಗೂ ಸ್ವಚ್ಚತೆ ಕಾಪಾಡುವುದು ಅತ್ಯವಶ್ಯಕ. ಜಾತ್ರೆ ಮುಗಿದು ತಿಂಗಳಿಗೂ ಹೆಚ್ಚು ಕಾಲ ಕಳೆದರೂ ಪರಿಸ್ಥಿತಿ ಬದಲಾಗದಿರುವುದು ಹೊಣೆಗಾರಿಕೆ ಯಾರದು ಎಂಬ ಪ್ರಶ್ನೆಯನ್ನು ಎತ್ತಿದೆ.
ಇನ್ನೊಂದೆಡೆ ಕುಪ್ಪೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ಅಸಮರ್ಥತೆಯನ್ನು ತೊರಿಸುತ್ತಿದ್ದಾರೆ. ಶ್ರೀರಾಮ ದೇವಾಲಯ ಆಡಳಿತ ಮಂಡಳಿ ಹಾಗೂ ತಾಲ್ಲೂಕು ಆಡಳಿತದಿಂದ ಯಾವುದೇ ಅನುದಾನ ದೊರೆಯದೆ ಇರುವುದರಿಂದ ಜಾತ್ರೆಯ ಸಂದರ್ಭದಲ್ಲಿನ ಸ್ವಚ್ಚತಾ ವೆಚ್ಚವೇ ಗ್ರಾಮ ಪಂಚಾಯಿತಿಗೆ ಹೆಚ್ಚುವರಿ ಹೊರೆ ಆಗುತ್ತಿದೆ ಎಂದು ಅವರು ಹೇಳುತ್ತಿದ್ದಾರೆ. ಪರಸ್ಪರ ಹೊಣೆ ತಪ್ಪಿಸುವ ಈ ಸ್ಥಿತಿ ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇತ್ತೀಚೆಗೆ ದೇವಾಲಯದ ಹುಂಡಿಯನ್ನು ತೆರೆಯಲಾಗಿದ್ದು ಲಕ್ಷಾಂತರ ರೂಪಾಯಿ ಹಣ ಖಾತೆಗೆ ಜಮಾ ಮಾಡಲಾಗಿದೆ ಎಂಬ ಮಾಹಿತಿ ನಡುವೆ, ದೇವಾಲಯ ಆವರಣದ ಸ್ವಚ್ಚತೆಗೆ ಅಗತ್ಯ ಅನುದಾನ ನೀಡಲು ಹಿಂದೇಟು ಹಾಕುತ್ತಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಭಕ್ತರಿಂದ ಬಂದ ಕಾಣಿಕೆ ಹಣವನ್ನು ಮೂಲಸೌಕರ್ಯ ಸುಧಾರಣೆ ಹಾಗೂ ಪರಿಸರ ನಿರ್ವಹಣೆಗೆ ಬಳಸಬೇಕು ಎಂಬ ಒತ್ತಾಯ ಭಕ್ತಾಧಿಗಳಲ್ಲಿ ಕೇಳಿಬರುತ್ತಿದೆ
ಅಲ್ಲಿರುವ ಸ್ಥಳೀಯರು ಹಾಗೂ ಭಕ್ತರು ಸಂಬಂಧಪಟ್ಟ ಇಲಾಖೆ ಹಾಗೂ ಆಡಳಿತ ಸಂಸ್ಥೆಗಳು ತಕ್ಷಣವೇ ಗಮನಹರಿಸಿ ದೇವಾಲಯದ ಆವರಣವನ್ನು ಸ್ವಚ್ಚಗೊಳಿಸುವಂತೆ ಆಗ್ರಹಿಸಿದ್ದಾರೆ. ಪವಿತ್ರ ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳು ಅನಾನೂಕೂಲತೆಗಳನ್ನು ಅನುಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಸ್ಥಳಿಯರ ಮನವಿ.
ದೇವಾಲಯದ ಹುಂಡಿ ಹಣವನ್ನು ನಿಯಮಿತವಾಗಿ ತೆರೆಯುವ ದೇವಾಲಯ ಆಡಳಿತ, ಭಕ್ತರ ಮೂಲಭೂತ ಸೌಲಭ್ಯಗಳ ಸುಧಾರಣೆ ಹಾಗೂ ಆವರಣದ ಸ್ವಚ್ಚತೆಗೆ ಸಮಾನ ಆದ್ಯತೆ ನೀಡದಿರುವುದು ಶೋಚನಿಯ ಸಂಗತಿಯಾಗಿದೆ. ಆಡಳಿತ ಮಂಡಳಿಯಈ ನಿರ್ಲಕ್ಷ್ಯದಿಂದ ದೇವಾಲಯಕ್ಕೆ ಬರುವ ಭಕ್ತರು ಅನಾನೂಕೂಲ ಅನುಭವಿಸುವಂತಾಗಿದೆ ಎಂದು ಹೊಸೂರಿನ ಡೈರಿಯ ಮಾಜಿ ಅಧ್ಯಕ್ಷ ಸ್ವಾಮಿ ಕಳವಳ ವ್ಯಕ್ತಪಡಿದಿದ್ದಾರೆ..



