
ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿರುವ ಅಚ್ಚರಿಯ ಘಟನೆ ಜೈಲು ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ವಿಚಾರಣಾಧೀನ ಕೈದಿಗಳು ಮೊಬೈಲ್ ಬಳಸಿಕೊಂಡು ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಪ್ರಕರಣ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಈ ಪ್ರಕರಣದಲ್ಲಿ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಹೆಸರನ್ನು ಉಲ್ಲೇಖಿಸಿ, “ಜೈಲಿನಲ್ಲೇ ಮೊಬೈಲ್ ಸೌಲಭ್ಯ ಇದೆ, ಐಪಿಎಲ್ ನೋಡ್ತಿದ್ದೇವೆ” ಎಂದು ಕೈದಿಗಳು ಹೇಳಿಕೊಂಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿತ್ತು. ಆದರೆ ತನಿಖೆಯಲ್ಲಿ ಹೊರಬಿದ್ದ ಸತ್ಯ ಸಂಪೂರ್ಣವಾಗಿ ಬೇರೆ ದಿಕ್ಕಿನ ಕಥೆಯನ್ನು ಹೇಳುತ್ತಿದೆ.
ಟಾಯ್ಲೆಟ್ ಪೈಪ್‌ನಲ್ಲೇ ‘ಮೊಬೈಲ್ ಲಾಕರ್’!

ಪೊಲೀಸರ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ ಬಹಿರಂಗವಾಗಿದೆ. ಕೈದಿಗಳು ಮೊಬೈಲ್‌ಗಳನ್ನು ಟಾಯ್ಲೆಟ್ ಪೈಪ್ ಒಳಗೆ ಬಚ್ಚಿಟ್ಟಿದ್ದರು. ಮಲಮೂತ್ರ ಸಾಗುವ ಪೈಪಿನಲ್ಲಿ ಮೊಬೈಲ್‌ಗೆ ಹಲವಾರು ಲೇಯರ್ ಕವರ್ ಹಾಕಿ, ಬೇಕಾದಾಗ ತೆಗೆದು ಬಳಸುತ್ತಿದ್ದರು. ಈ ವಿಧಾನವು ಜೈಲು ಸಿಬ್ಬಂದಿಯ ಗಮನಕ್ಕೆ ಬರದಂತೆ ರೂಪಿಸಲಾಗಿದೆ.
ಬ್ಯಾರಕ್ ಬದಲಾವಣೆ ಆದೇಶದ ನಂತರ, ಕೆಲ ನಟೋರಿಯಸ್ ಕೈದಿಗಳು ತಮ್ಮ ಸ್ಥಳಾಂತರವನ್ನು ತಪ್ಪಿಸಲು ಈ ರೀತಿಯ ನಾಟಕ ರೂಪಿಸಿದ್ದಾರೆ ಎನ್ನಲಾಗಿದೆ. ಬ್ಯಾರಕ್ ನಂ. 9ರ ರೂಂ 6ರಲ್ಲಿ ಇದ್ದ ಕೈದಿಗಳು ಈ ವಿಡಿಯೋ ಸೃಷ್ಟಿಸಿ ವೈರಲ್ ಮಾಡಿದ್ದಾರೆ.
ಪ್ರಮುಖ ಆರೋಪಿಗಳಾದ ಅಭಿ @ ಅಭಿಶೇಕ್, ದರ್ಶನ್ ಸೇರಿದಂತೆ ಇನ್ನಿಬ್ಬರು ಕೈದಿಗಳು, ಎಂಡ್ರೋಸ್ ಎಂಬಾತನ ಪ್ರಚೋದನೆಗೆ ಒಳಗಾಗಿ ಈ ಕೃತ್ಯ ಎಸಗಿದ್ದಾರೆ. ಇವರ ವಿರುದ್ಧ ಈಗ ಪ್ರಕರಣ ದಾಖಲಾಗಿದ್ದು, ಸುಳ್ಳು ಮಾಹಿತಿ ಹಂಚಿಕೆ ಮತ್ತು ಅಕ್ರಮ ಮೊಬೈಲ್ ಬಳಕೆಯಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ತನಿಖೆಯಲ್ಲಿ ಕೈದಿಗಳು ಸ್ವತಃ ಒಪ್ಪಿಕೊಂಡಿದ್ದು, ಡಿಜಿಪಿ ಅಲೋಕ್ ಕುಮಾರ್ ಹೆಸರನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದೆ. ಜೈಲಿನ ಒಳಗಿನ ನಿಯಮ ಕಠಿಣಗೊಳಿಸಿದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಕಳಂಕ ತರುವ ಉದ್ದೇಶವೇ ಇದಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಗೆ ತಕ್ಷಣ ಸ್ಪಂದಿಸಿದ ಡಿಜಿಪಿ ಅಲೋಕ್ ಕುಮಾರ್, ಕರ್ತವ್ಯ ಲೋಪದಡಿ ಮೂವರು ವಾರ್ಡರ್‌ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. “ಜೈಲಿನಲ್ಲಿ ಮೊಬೈಲ್ ಪ್ರವೇಶ ಹೇಗೆ ಆಯಿತು?” ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಕಾರ್ಯ ತೀವ್ರಗೊಳಿಸಲಾಗಿದೆ.

ಪ್ರಕರಣದ ನಂತರ ಆರೋಪಿಗಳನ್ನು ಪ್ರತ್ಯೇಕ ಕ್ವಾರಂಟೈನ್ ಸೆಲ್‌ಗೆ ಸ್ಥಳಾಂತರಿಸಲಾಗಿದೆ. ಜೈಲಿನ ಒಳಗಿನ ಭದ್ರತಾ ವ್ಯವಸ್ಥೆಯನ್ನು ಮರುಪರಿಶೀಲನೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಈ ಘಟನೆ ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳು ಇನ್ನೂ ಸಕ್ರಿಯವಾಗಿರುವುದನ್ನು ತೋರಿಸುತ್ತಿದೆ. ಆದರೆ, ತಕ್ಷಣದ ಕ್ರಮ ಮತ್ತು ಸತ್ಯ ಅನಾವರಣದಿಂದ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
“ಟಾಯ್ಲೆಟ್ ಪೈಪ್‌ನಲ್ಲೇ ಮೊಬೈಲ್ ಬಚ್ಚಿಡುವ ಮಟ್ಟಕ್ಕೆ ಹೋಗಿರುವುದು ಜೈಲು ಭದ್ರತೆಗೆ ದೊಡ್ಡ ಎಚ್ಚರಿಕೆಯ ಗಂಟೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಘಟನೆ ಈಗ ‘ಜೈಲಿನೊಳಗಿನ ಡಿಜಿಟಲ್ ಅಂಡರ್ವರ್ಲ್ಡ್’ ಅನ್ನು ಬಯಲಿಗೆಳೆದಿದೆ





