
ಸಾತ್ವಿಕ ಆರಾಧನೆಯತ್ತ ಐತಿಹಾಸಿಕ ತಿರುವು – 10 ಸಾವಿರ ಭಕ್ತರಿಂದ ಸಸ್ಯಾಹಾರ ಸೇವನೆ
ಮೈಸೂರು, ಮಾ.22:- ಜಿಲ್ಲೆಯ ಸರಗೂರು ತಾಲೂಕಿನ ಕುಂದೂರಿನ ಶ್ರೀ ಚಿಕ್ಕದೇವಮ್ಮ ಜಾತ್ರಾಮಹೋತ್ಸವ ಈ ಬಾರಿ ಒಂದು ಮಹತ್ವದ ಸಾಮಾಜಿಕ ಪರಿವರ್ತನೆಗೆ ಸಾಕ್ಷಿಯಾಗಿದ್ದು, ಚಿಕ್ಕದೇವಮ್ಮನ ಬೆಟ್ಟ (ಸಿ.ಡಿ.ಹಿಲ್ಸ್), ಹಾಲ್ಗಡ ಹಾಗೂ ಇಟ್ನಾ ಗ್ರಾಮಗಳಲ್ಲಿ ಪ್ರಾಣಿಬಲಿ ಪದ್ಧತಿ ಸಂಪೂರ್ಣವಾಗಿ ನಿಲ್ಲಿಸಿ ಅಹಿಂಸಾತ್ಮಕ ಸಾತ್ವಿಕ ಆಚರಣೆಗಳು ನಡೆದಿರುವುದು ಗಮನಾರ್ಹವಾಗಿದೆ.ಯುಗಾದಿ ಹಬ್ಬದ ಅಂಗವಾಗಿ ಮೂರು ದಿನಗಳ ಕಾಲ ನಡೆದ ಈ ಜಾತ್ರೆಯಲ್ಲಿ, ಹಿಂದಿನ ವರ್ಷಗಳಲ್ಲಿ ಸಾವಿರಾರು ಪ್ರಾಣಿಗಳ ಬಲಿ ನಡೆಯುತ್ತಿದ್ದ ಸ್ಥಳಗಳು ಈ ಬಾರಿ ಭಿನ್ನ ದೃಶ್ಯಕ್ಕೆ ಸಾಕ್ಷಿಯಾದವು. ರಸ್ತೆ ಬದಿ, ಜಮೀನುಗಳು, ಹಾಲ್ಗಡ ಮೈದಾನ ಹಾಗೂ ಕಪಿಲಾ ನದಿಯ ದಡ ಸೇರಿದಂತೆ ಎಲ್ಲೆಡೆ ರಕ್ತಪಾತದ ಚಿಹ್ನೆಯೇ ಕಾಣದಂತೆ, ಭಕ್ತರು ತೆಂಗಿನಕಾಯಿ, ಎಳನೀರು, ಹೂ-ಹಣ್ಣು, ಅರಿಶಿನ-ಕುಂಕುಮಗಳಿಂದ ದೇವಿಗೆ ಪೂಜೆ ಸಲ್ಲಿಸಿದರು.
ಇದರೊಂದಿಗೆ, “ಹರಕೆ” ಹೆಸರಿನಲ್ಲಿ ನಡೆಯುತ್ತಿದ್ದ ಪ್ರಾಣಿಹಿಂಸೆಗೆ ಸ್ವಯಂಪ್ರೇರಿತ ಅಂತ್ಯ ಘೋಷಿಸಿದ ಭಕ್ತ ಸಮೂಹವು, ಜಾತ್ರೆಯ ಸ್ವರೂಪವನ್ನೇ ಸಾತ್ವಿಕತೆಗೆ ತಿರುಗಿಸಿದಂತಾಯಿತು. ಈ ಬದಲಾವಣೆ ಕೇವಲ ಆಚರಣೆಯಲ್ಲ, ಮನೋಭಾವದ ಕ್ರಾಂತಿಯಾಗಿ ಕಾಣಿಸಿಕೊಂಡಿತು.

ಈ ಸಾಧನೆಯ ಕುರಿತು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು ಪ್ರಾಣಿಬಲಿ ನಿರ್ಮೂಲನ ಜಾಗೃತಿ ಮಹಾಸಂಘ ಹಾಗೂ ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿ, “ಇದು ಎರಡು ದಶಕಗಳ ನಿರಂತರ ಜಾಗೃತಿ ಪ್ರಯತ್ನಗಳ ಫಲ. ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗುವಂತಹ ಘಟನೆ” ಎಂದು ಅಭಿಪ್ರಾಯಪಟ್ಟರು.
ಈ ಯಶಸ್ಸಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನ, 1959ರ ಕರ್ನಾಟಕ ಪ್ರಾಣಿಬಲಿ ಪ್ರತಿಬಂಧಕ ಕಾಯ್ದೆಯ ಜಾರಿ, ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತದ ಮುನ್ನೆಚ್ಚರಿಕಾ ಕ್ರಮಗಳು ಪ್ರಮುಖ ಕಾರಣಗಳಾಗಿವೆ. ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ, ಪಶುಸಂಗೋಪನೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಸರಗೂರು ತಾಲೂಕಿನ ತಹಶೀಲ್ದಾರ್ ಮೋಹನ್ ಕುಮಾರಿ, ಸಿಪಿಐ ಪ್ರಸನ್ನ ಕುಮಾರ್, ಆರ್‌ಐ ರವಿಚಂದ್ರ ಹಾಗೂ ಪಿಎಸ್‌ಐ ಕಿರಣ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸಿದರು.
ಇದೇ ವೇಳೆ ದಯಾನಂದ ಸ್ವಾಮೀಜಿ ನೇತೃತ್ವದ ತಂಡವು ಜಾತ್ರೆಗೆ ಮುನ್ನ ಹಾಗೂ ಸಂದರ್ಭದಲ್ಲಿ ಅಹಿಂಸಾ ಮತ್ತು ಜೀವದಯಾ ಜಾಗೃತಿ ಯಾತ್ರೆ ನಡೆಸಿ, ಗ್ರಾಮಸ್ಥರಲ್ಲಿ ಮನೋಭಾವ ಬದಲಾವಣೆಗೆ ಕಾರಣವಾಯಿತು. ಇದರ ಪರಿಣಾಮವಾಗಿ, ಯಾವುದೇ ಪ್ರಾಣಿಯನ್ನು ಜಾತ್ರಾ ಸ್ಥಳಕ್ಕೆ ತರದೇ ಭಕ್ತರು ಸ್ವಯಂಪ್ರೇರಿತವಾಗಿ ಬಲಿಯನ್ನು ತ್ಯಜಿಸಿದರು.
ಜಾತ್ರೆಯ ಇನ್ನೊಂದು ವಿಶೇಷವೆಂದರೆ, ಮಾಂಸಾಹಾರದ ಬದಲು ಶುದ್ಧ ಸಸ್ಯಾಹಾರವನ್ನು ಸ್ವೀಕರಿಸಿದ ಭಕ್ತ ಸಮೂಹ. ಇಟ್ನಾ ಗ್ರಾಮದ ಕಪಿಲಾ ನದಿಯ ದಡದಲ್ಲಿ ಯುಗಾದಿ ಮರುದಿನ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಸಾಮೂಹಿಕವಾಗಿ ಸಸ್ಯಾಹಾರ ಹಾಗೂ ಸಿಹಿ ಭೋಜನವನ್ನು ಪ್ರಸಾದ ರೂಪದಲ್ಲಿ ಸೇವಿಸಿದರು. ಈ ಅನ್ನಸಂತರ್ಪಣೆಯ ಪೂರ್ಣ ವೆಚ್ಚವನ್ನು ಇಟ್ನಾ ಗ್ರಾಮದ ಯಜಮಾನರಾದ ಚಿನ್ನಾಯಕ ಮತ್ತು ಅವರ ಕುಟುಂಬ ಭರಿಸಿ, ಸ್ವತಃ ವ್ಯವಸ್ಥೆ ನೋಡಿಕೊಂಡಿರುವುದು ಪ್ರಶಂಸನೀಯವಾಗಿದೆ. ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯೂ ಸಹ ಇದಕ್ಕೆ ಸಹಕಾರ ನೀಡಿದೆ.
ದೇವಾಲಯ ಆಡಳಿತ ಮಂಡಳಿ, ಪಂಚಾಯತಿ ಸದಸ್ಯರು, ಗ್ರಾಮಸ್ಥರು, ಭಕ್ತರು ಹಾಗೂ ಮಾಧ್ಯಮಗಳ ಸಹಕಾರದಿಂದ ಈ ಮಹತ್ವದ ಬದಲಾವಣೆ ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಸಾತ್ವಿಕ ಆಚರಣೆಗಳು ರಾಜ್ಯದ ಇತರ ಜಾತ್ರೆಗಳಿಗೂ ಮಾದರಿಯಾಗಲಿ ಎಂಬ ಆಶಾಭಾವ ವ್ಯಕ್ತವಾಗಿದೆ.
ಕುಂದೂರಿನ ಈ ಜಾತ್ರೆ ಭಕ್ತಿ, ಪರಂಪರೆ ಮತ್ತು ಮಾನವೀಯ ಮೌಲ್ಯಗಳ ನಡುವೆ ಹೊಸ ಸಮತೋಲನ ಕಂಡುಕೊಂಡ ಒಂದು ಅಪರೂಪದ ಉದಾಹರಣೆಯಾಗಿ ಹೊರಹೊಮ್ಮಿದೆ.





