HOMENews

ಬಯೋಮೈನಿಂಗ್ ತಂತ್ರಜ್ಞಾನದಿಂದ ಮೈಸೂರಿನ ಹಳೆಯ ಕಸದ ಸಮಸ್ಯೆಗೆ ಪರಿಹಾರ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ಎರಡು ದಶಕಗಳಿಂದ ತಲೆದೋರಿದ್ದ ಕಸದ ಸಮಸ್ಯೆಗೆ ಮೈಸೂರು ಮಹಾನಗರ ಪಾಲಿಕೆ ಬಯೋಮೈನಿಂಗ್ ತಂತ್ರಜ್ಞಾನದ ಮೂಲಕ ಪರಿಣಾಮಕಾರಿ ಪರಿಹಾರ ಕಂಡುಹಿಡಿಯುತ್ತಿದೆ. ನಗರದ ಸುಯೇಜ್ ಫಾರಂನಲ್ಲಿ ವರ್ಷಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯವನ್ನು ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಮಾಡುವ ಕಾರ್ಯ ವೇಗವಾಗಿ ಸಾಗುತ್ತಿದೆ.

ಮೈಸೂರು ನಗರವನ್ನು ದೇಶದ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಮುಂದಿರಿಸುವ ನಿಟ್ಟಿನಲ್ಲಿ ಕಸ ವಿಲೇವಾರಿ ಪ್ರಮುಖ ಸವಾಲಾಗಿ ಪರಿಣಮಿಸಿತ್ತು. ನಗರದಲ್ಲಿ ಪ್ರತಿದಿನ ಸುಮಾರು 500 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಅದರ ಒಂದು ಭಾಗವನ್ನು ಮಾತ್ರ ವಿಲೇವಾರಿ ಮಾಡಲಾಗುತ್ತಿತ್ತು. ಉಳಿದ ತ್ಯಾಜ್ಯವನ್ನು ಸುಯೇಜ್ ಫಾರಂನಲ್ಲಿ ಹಾಕಲಾಗುತ್ತಿದ್ದು, ವರ್ಷಗಳಿಂದ ಸುಮಾರು 6 ಲಕ್ಷ ಟನ್‌ಗೂ ಅಧಿಕ ಕಸ 22 ಎಕರೆ ಪ್ರದೇಶದಲ್ಲಿ ಗುಡ್ಡೆಯಾಗಿತ್ತು.

ಈ ತ್ಯಾಜ್ಯದ ದುರ್ವಾಸನೆ ಹಾಗೂ ಮಾಲಿನ್ಯದಿಂದ ವಿದ್ಯಾರಣ್ಯಪುರಂ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದರು. ಆರೋಗ್ಯ ಸಮಸ್ಯೆಗಳ ಜೊತೆಗೆ ಪರಿಸರ ಮಾಲಿನ್ಯವೂ ಹೆಚ್ಚಾಗಿದ್ದು, ನಗರ ಸ್ವಚ್ಛತೆಯ ಮಟ್ಟಕ್ಕೂ ಇದರಿಂದ ಧಕ್ಕೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ಸುಮಾರು 52 ಕೋಟಿ ರೂ. ವೆಚ್ಚದಲ್ಲಿ ಸುಯೇಜ್ ಫಾರಂನಲ್ಲಿ ಬಯೋಮೈನಿಂಗ್ ಯೋಜನೆಯನ್ನು 2024ರ ಮಾರ್ಚ್ ತಿಂಗಳಲ್ಲಿ ಆರಂಭಿಸಲಾಯಿತು. ಈ ಯೋಜನೆಯಡಿ ಹಳೆಯ ತ್ಯಾಜ್ಯವನ್ನು ಯಂತ್ರಗಳ ಮೂಲಕ ಬೇರ್ಪಡಿಸಿ ಮರುಬಳಕೆಗೆ ಯೋಗ್ಯ ವಸ್ತುಗಳನ್ನು ಪ್ರತ್ಯೇಕಿಸಲಾಗುತ್ತಿದೆ.

ಬಯೋಮೈನಿಂಗ್ ವಿಧಾನದಲ್ಲಿ ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್, ಲೋಹ, ಗಾಜು ಮುಂತಾದ ವಸ್ತುಗಳನ್ನು ಬೇರ್ಪಡಿಸಿ ಮರುಬಳಕೆಗೆ ಕಳುಹಿಸಲಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಕಾರ್ಖಾನೆಗಳಲ್ಲಿ ಇಂಧನವಾಗಿ ಬಳಸಲಾಗುತ್ತಿದ್ದು, ಜೈವಿಕ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಉಳಿದ ಮಣ್ಣಿನ ಭಾಗವನ್ನು ಲ್ಯಾಂಡ್ ಫಿಲ್ಲಿಂಗ್ ಕಾರ್ಯಗಳಿಗೆ ಬಳಸಲಾಗುತ್ತಿದೆ.

ಸರ್ಕಾರಿ ಆಸ್ತಿಯನ್ನು ಉಳಿಸಿದ ಶಾಸಕ ಟಿ.ಎಸ್. ಶ್ರೀವತ್ಸರಿಗೆ ನಾಗರಿಕರಿಂದ ಅಭಿನಂದನೆ

ಯೋಜನೆಯ ಅನುಷ್ಠಾನದ ಬಳಿಕ ಈಗಾಗಲೇ 22 ಎಕರೆ ಪ್ರದೇಶದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯದಲ್ಲಿ ಸುಮಾರು 3.17 ಲಕ್ಷ ಟನ್ ಕಸವನ್ನು ತೆರವುಗೊಳಿಸಲಾಗಿದ್ದು, ಸುಮಾರು 13 ಎಕರೆ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಉಳಿದ 9 ಎಕರೆ ಪ್ರದೇಶದಲ್ಲಿರುವ ತ್ಯಾಜ್ಯವನ್ನು ಕೂಡ ಬರುವ ಜೂನ್ ವೇಳೆಗೆ ಸಂಪೂರ್ಣವಾಗಿ ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ.

ಮೈಸೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್ ಮಾತನಾಡಿ, “ಸುಯೇಜ್ ಫಾರಂನಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯ ಸ್ಥಳೀಯ ನಿವಾಸಿಗಳಿಗೆ ದೊಡ್ಡ ಸಮಸ್ಯೆಯಾಗಿತ್ತು. ಈಗ ಬಯೋಮೈನಿಂಗ್ ತಂತ್ರಜ್ಞಾನದಿಂದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿದೆ. ಉಳಿದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಜೊತೆಗೆ ಬಯೋಗ್ಯಾಸ್ ಘಟಕವನ್ನು ಸ್ಥಾಪಿಸುವ ಕಾರ್ಯವೂ ನಡೆಯುತ್ತಿದೆ” ಎಂದು ಹೇಳಿದರು.

ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಮಾತನಾಡಿ, “ಸುಯೇಜ್ ಫಾರಂನಲ್ಲಿ ಸಂಗ್ರಹವಾಗಿದ್ದ ಹಳೆಯ ತ್ಯಾಜ್ಯವನ್ನು ಹಂತ ಹಂತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಈಗಾಗಲೇ ಲಕ್ಷಾಂತರ ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಮುಂದಿನ ಕೆಲ ತಿಂಗಳಲ್ಲಿ ಹಳೆಯ ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುವುದು. ಇನ್ನು ಮುಂದೆ ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಪ್ರತಿದಿನವೇ ಸಂಸ್ಕರಣೆ ಮಾಡುವ ವ್ಯವಸ್ಥೆಯನ್ನು ಬಲಪಡಿಸಲಾಗುವುದು” ಎಂದು ತಿಳಿಸಿದ್ದಾರೆ.

ಈ ಯೋಜನೆಯಿಂದ ದೀರ್ಘಕಾಲದಿಂದ ಸಮಸ್ಯೆಯಾಗಿದ್ದ ಕಸದ ಗುಡ್ಡೆಗಳು ಕಡಿಮೆಯಾಗುತ್ತಿದ್ದು, ಪರಿಸರ ಸಂರಕ್ಷಣೆಯ ಜೊತೆಗೆ ಮರುಬಳಕೆಯ ವಸ್ತುಗಳ ಉತ್ಪಾದನೆಗೂ ಉತ್ತೇಜನ ಸಿಗುತ್ತಿದೆ. ಸ್ಥಳೀಯ ನಿವಾಸಿಗಳಿಗೂ ಇದು ಮಹತ್ತರ ಪರಿಹಾರವಾಗಿದ್ದು, ಮೈಸೂರು ಮತ್ತೊಮ್ಮೆ ಸ್ವಚ್ಛ ನಗರಿಯ ಪಟ್ಟವನ್ನು ಬಲಪಡಿಸುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ.

ಸ್ವಚ್ಛತಾ ಸರ್ವೇಕ್ಷಣ್ ಪ್ರಶಸ್ತಿ ದಟ್ಟಗಳ್ಳಿ ಗ್ರೀನ್ ಫೌಂಡೇಶನ್ ಗೆ

Leave a Reply