
ವಿಜಯನಗರ, ಮಾ.15:- ಆಸ್ತಿ ಹಂಚಿಕೆ ವಿಚಾರವಾಗಿ ಉಂಟಾದ ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಗರಿ ಶಿರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸ್ವಂತ ಅಣ್ಣನನ್ನೇ ತಮ್ಮನು ಸ್ನೇಹಿತನೊಂದಿಗೆ ಸೇರಿ ಕೊಲೆ ಮಾಡಿ, ಬಳಿಕ ಅದನ್ನು ರಸ್ತೆ ಅಪಘಾತವೆಂದು ತೋರಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಹರಪನಹಳ್ಳಿ ತಾಲೂಕಿನ ಹಗರಿ ಶಿರನಹಳ್ಳಿ ಗ್ರಾಮದ ಮರಳು ಸಿದ್ದೇಶ (26) ಎಂದು ಗುರುತಿಸಲಾಗಿದೆ. ಈತನ ಸ್ವಂತ ತಮ್ಮ ಪತ್ರಿಗೌಡ (24) ಹಾಗೂ ಆತನ ಸ್ನೇಹಿತ ಕಡಬಗೆರೆ ಗ್ರಾಮದ ಉತ್ತಂಗಿ ನಾರಪ್ಪ (29) ಕೊಲೆ ಮಾಡಿದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಮೃತ ಸಿದ್ದೇಶ ಕುಟುಂಬದ ಜಮೀನು ಮತ್ತು ಟ್ರಾಕ್ಟರ್ ಸೇರಿದಂತೆ ಮನೆಯ ಆಸ್ತಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ಆದರೆ ಆಸ್ತಿಯಲ್ಲಿ ತನ್ನ ಪಾಲು ನೀಡಬೇಕು ಎಂದು ತಮ್ಮ ಪತ್ರಿಗೌಡ ಹಲವು ಬಾರಿ ಕುಟುಂಬದೊಂದಿಗೆ ವಾಗ್ವಾದ ನಡೆಸುತ್ತಿದ್ದ ಎನ್ನಲಾಗಿದೆ. ಮಾರ್ಚ್ 13ರಂದು ಮಧ್ಯಾಹ್ನವೂ ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ಜಗಳ ನಡೆದಿದೆ. ಪಾಲು ನೀಡದಿದ್ದರೆ ಬೆಂಗಳೂರಿಗೆ ಹೋಗಿ ಕೆಲಸ ಮಾಡುತ್ತೇನೆ ಎಂದು ಹೇಳಿ ಪತ್ರಿಗೌಡ ಮನೆ ಬಿಟ್ಟು ಹೋಗಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ.
ತಮ್ಮನನ್ನು ಹುಡುಕಲು ಮರಳು ಸಿದ್ದೇಶ ತನ್ನ ಬೈಕ್‌ನಲ್ಲಿ ಸ್ನೇಹಿತ ಉತ್ತಂಗಿ ನಾರಪ್ಪನನ್ನು ಕೂರಿಸಿಕೊಂಡು ಹೊರಟಿದ್ದ. ಆದರೆ ತಡರಾತ್ರಿ ಹಿರೇಮೇಗಳಗೆರೆ ಸಮೀಪದ ಹೊಸಹಳ್ಳಿ ಕ್ರಾಸ್ ಬಳಿ ಬೈಕ್ ಅಪಘಾತವಾಗಿ ಸಿದ್ದೇಶ ಮೃತಪಟ್ಟಿದ್ದಾನೆ ಎಂದು ದೂರದ ಸಂಬಂಧಿ ಜಯಪ್ಪ ಅವರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಮೃತನ ತಾಯಿ ಶಾಂತಮ್ಮ ಅವರು ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಮಗನ ಶವ ನೋಡಿದಾಗ ತಲೆ, ಮುಖ ಮತ್ತು ಎದೆ ಭಾಗದಲ್ಲಿ ಗಂಭೀರ ಗಾಯಗಳು ಕಂಡುಬಂದಿದ್ದು, ಅವು ವಾಹನ ಅಪಘಾತದ ಗಾಯಗಳಂತೆ ಕಾಣಲಿಲ್ಲ. ಜೊತೆಗೆ ಬೈಕ್‌ನಲ್ಲಿ ಇದ್ದ ತಮ್ಮ ಹಾಗೂ ಸ್ನೇಹಿತನಿಗೆ ಯಾವುದೇ ಗಾಯಗಳಿಲ್ಲದಿರುವುದು ಅನುಮಾನಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಆಸ್ತಿ ವಿಚಾರದ ದ್ವೇಷದಿಂದ ಇಬ್ಬರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದು ಶಾಂತಮ್ಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಘಟನೆ ನಡೆದ 24 ಗಂಟೆಗಳಲ್ಲೇ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆರೋಪಿಗಳು ಕೊಲೆ ಮಾಡಿದ ಬಳಿಕ ಅದನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಭೇಟಿ ನೀಡಿ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು. ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಸಂತೋಷ್ ಚೌಹಾಣ್, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್ಐ ವಿಜಯಕೃಷ್ಣ ಹಾಗೂ ನಾಗರತ್ನ ಸೇರಿದಂತೆ ಪೊಲೀಸ್ ತಂಡ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿದುಬಂದಿದೆ.





