
ಮೈಸೂರು:- ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಮಣಿದು 56,432 ಹುದ್ದೆಗಳನ್ನು ಈ ವರ್ಷದಲ್ಲಿ ಭರ್ತಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿರುವುದು ಸ್ವಾಗತಾರ್ಹವಾದರೂ, 800 ಕೆಪಿಎಸ್ ಶಾಲೆಗಳನ್ನು ತೆರೆಯುವ ಯೋಜನೆಯಿಂದ 40,000ಕ್ಕೂ ಹೆಚ್ಚು ಶಾಲೆಗಳು ಮುಚ್ಚಲಿವೆ. ತತ್ಫಲವಾಗಿ ಸಾವಿರಾರು ಶಿಕ್ಷಕರ ಹುದ್ದೆಗಳು ಕಡಿತಗೊಳ್ಳಲಿವೆ. ಹೊಸ ಉದ್ಯೋಗ ಸೃಷ್ಟಿಯ ಬದಲಿಗೆ ಇರುವ ಉದ್ಯೋಗಗಳನ್ನು ನಾಶಗೊಳಿಸುವ ಯೋಜನೆ ಇದಾಗಿದೆ.
ಯುವಜನರ ಸಮಗ್ರ ಅಭಿವೃದ್ಧಿಗೆ ಯಾವುದೇ ನಿರ್ದಿಷ್ಟ ಯೋಜನೆಗಳಿಲ್ಲದ, ಯಾವುದೇ ಸ್ಪಷ್ಟ ಉದ್ಯೋಗ ನೀತಿ ಇಲ್ಲದ, ಅದರಲ್ಲೂ ಮುಖ್ಯವಾಗಿ ಕಳೆದ ವರ್ಷ ಸರ್ಕಾರ ಘೋಷಿಸಿದ ಯುವಜನ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅವಶ್ಯಕತೆ ಇರುವ ಕಾರ್ಯಯೋಜನೆ ಇಲ್ಲದ ಬಜೆಟ್ ಇದಾಗಿದೆ. ನಿರುದ್ಯೋಗಿ ಯುವಜನರಿಗೆ ನೀಡುತ್ತಿದ್ದ ಯುವನಿಧಿ ಯೋಜನೆಗೆ ಈ ಸಲದ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವ ಕುರಿತು ಸ್ಪಷ್ಟತೆಗಳಿಲ್ಲ.
ಮತ್ತೊಂದೆಡೆ ಜನಸಾಮಾನ್ಯರನ್ನು, ಅದರಲ್ಲೂ ಮುಖ್ಯವಾಗಿ ಯುವಜನರನ್ನು ಸಾಂಸ್ಕೃತಿಕವಾಗಿ ಹಾಳು ಮಾಡುವ, ಕುಟುಂಬಗಳ ನೆಮ್ಮದಿಯನ್ನು ಹಾಳು ಮಾಡುವ ಮದ್ಯ ಮಾರಾಟದಿಂದ ಬರುವ ಅಬಕಾರಿ ತೆರಿಗೆಯಿಂದ ಸುಮಾರು 45,000 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಮದ್ಯಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಇದರ ಹಿಂದಿದೆ.
ಒಟ್ಟಾರೆ, ಯುವಜನರ ಪಾಲಿಗೆ ಈ ಬಜೆಟ್ ನಿರಾಶಾದಾಯಕ ಬಜೆಟ್ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಓ) ಕರ್ನಾಟಕ ರಾಜ್ಯ ಸಮಿತಿ ಭಾವಿಸುತ್ತದೆ.




