ಅಭಿವೃದ್ಧಿಯನ್ನು ದೂರ ತಳ್ಳುವ ಬಜೆಟ್ – ಮೈಸೂರು ಬಿಜೆಪಿ ಮಾಧ್ಯಮ ಸಹ ಸಂಚಾಲಕ ಸಂತೋಷ್ ಕುಮಾರ್ ಆರೋಪ

ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಅಭಿವೃದ್ಧಿಯನ್ನು ದೂರಕ್ಕೆ ತಳ್ಳುವಂತೆಯೂ ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸುವಂತೆಯೂ ಇರುವ ಕರಾಳ ಅಧ್ಯಾಯವಾಗಿದೆ ಎಂದು ಮೈಸೂರು ಮಹಾನಗರದ ಮಾಧ್ಯಮ ಸಹ ಸಂಚಾಲಕರಾದ ಸಂತೋಷ್ ಕುಮಾರ್ ಬಿ.ಎಂ ತಿಳಿಸಿದ್ದಾರೆ. ಈ ಬಜೆಟ್ ಜನರ ಕಣ್ಣಿಗೆ ಧೂಳು ಎರಚುವ ತಂತ್ರದ ಬಜೆಟ್ ಆಗಿದ್ದು, ರಾಜ್ಯದ ಅಭಿವೃದ್ಧಿಗೆ ಸ್ಪಷ್ಟವಾದ ದಿಕ್ಕು ನೀಡುವಲ್ಲಿ ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರವು ಪಂಚ ಗ್ಯಾರಂಟಿಗಳಿಗೆ ಯಾವುದೇ ಹೊಸ ಆರ್ಥಿಕ ಮೂಲಗಳನ್ನು ಸೃಷ್ಟಿಸದೇ, ವಿವಿಧ ಇಲಾಖೆಗಳ ಅನುದಾನವನ್ನು ಕಡಿತಗೊಳಿಸಿ ಅದನ್ನು ಗ್ಯಾರಂಟಿ ಯೋಜನೆಗಳಿಗೆ ಜೋಡಿಸಿರುವುದು ಸರಿಯಾದ ಆರ್ಥಿಕ ನೀತಿಯಾಗಿಲ್ಲ ಎಂದು ಸಂತೋಷ್ ಕುಮಾರ್ ಬಿ.ಎಂ ಅವರು ಹೇಳಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ 44,632 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕೇವಲ 1,336 ಕೋಟಿ ರೂ. ಮಾತ್ರ ಮೀಸಲಿಡಲಾಗಿದೆ. ದಲಿತರ ಹೆಸರಿನಲ್ಲಿ ಬಜೆಟ್ ಗಾತ್ರವನ್ನು ಹೆಚ್ಚಿಸಿಕೊಂಡು, ವಾಸ್ತವದಲ್ಲಿ ಗ್ಯಾರಂಟಿ ಯೋಜನೆಗಳ ಸಾಲ ತೀರಿಸಲು ಅದನ್ನು ಬಳಸುತ್ತಿರುವುದು ವಿಷಾದನೀಯ ಸಂಗತಿ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಅಭಕಾರಿ ನೀತಿಯಲ್ಲಿ ಮದ್ಯದ ಕಂಪನಿಗಳಿಗೆ ಬೆಲೆ ನಿಗದಿಪಡಿಸುವ ಅಧಿಕಾರ ನೀಡಿರುವುದು ಸರ್ಕಾರ ಲಿಕ್ಕರ್ ಲಾಬಿಗೆ ಶರಣಾಗಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಸಂತೋಷ್ ಕುಮಾರ್ ಬಿ.ಎಂ ಅವರು ಆರೋಪಿಸಿದ್ದಾರೆ. ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಮಾರುಕಟ್ಟೆ ಪ್ರವೇಶಕ್ಕಾಗಿ ಕೇವಲ 100 ಕೋಟಿ ರೂ. ಮಾತ್ರ ನೀಡಿರುವುದು ರೈತರ ಮೂಗಿಗೆ ತುಪ್ಪ ಸವರಿದಂತಾಗಿದೆ ಎಂದು ಅವರು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಬಜೆಟ್ ಪ್ರಗತಿಪರವಲ್ಲದೆ, ಕರ್ನಾಟಕದ ಜನರಿಗೆ ಸುಳ್ಳು ಭರವಸೆ ನೀಡುವ ಬಜೆಟ್ ಆಗಿದೆ ಎಂದು ಸಂತೋಷ್ ಕುಮಾರ್ ಬಿ.ಎಂ ಅವರು ಹೇಳಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಬ್ರೇಕ್ ಹಾಕಿ, ರಾಜ್ಯವನ್ನು ಸಾಲದ ಹೊರೆಗೊಳಿಸುವಂತೆಯೇ ಈ ಬಜೆಟ್ ರೂಪುಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಹಿಂದ ವರ್ಗಗಳ ನಾಯಕತ್ವದ ಹೆಸರಿನಲ್ಲಿ ಹಿಂದುಳಿದ ವರ್ಗಗಳ ಮತಗಳನ್ನು ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಸಮುದಾಯಗಳಿಗೆ ನಿರೀಕ್ಷಿತ ರೀತಿಯ ಕೊಡುಗೆಗಳನ್ನು ನೀಡಿಲ್ಲ. ಬದಲಾಗಿ ಬಜೆಟ್ನ ಬಹುಪಾಲು ಹಣವನ್ನು ನಿರ್ದಿಷ್ಟ ಸಮುದಾಯಕ್ಕೆ ಮೀಸಲಿಟ್ಟಿರುವುದು ನ್ಯಾಯಸಮ್ಮತವಾಗಿಲ್ಲ ಎಂದು ಸಂತೋಷ್ ಕುಮಾರ್ ಬಿ.ಎಂ ತಿಳಿಸಿದ್ದಾರೆ. ಅಲ್ಪಸಂಖ್ಯಾತರ ಶಾಲೆಗಳ ಉನ್ನತೀಕರಣಕ್ಕೆ 1,000 ಕೋಟಿ ರೂ. ಮೀಸಲಿಡಲಾಗಿದ್ದು, ದೇವಸ್ಥಾನಗಳ ಅಭಿವೃದ್ಧಿಗೆ ಹಣ ಮೀಸಲಿಡಲು ಸರ್ಕಾರದ ಬಳಿ ಸಾಧ್ಯವಾಗಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ 3 ಲಕ್ಷ ರೂ. ಸಹಾಯಧನ ಘೋಷಿಸಲಾಗಿದ್ದರೂ, ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕೇವಲ ಭರವಸೆಗಳೇ ಸಿಕ್ಕಿವೆ ಎಂದು ಸಂತೋಷ್ ಕುಮಾರ್ ಬಿ.ಎಂ ಅವರು ಹೇಳಿದ್ದಾರೆ. ಬೊಕ್ಕಸದ ಬಹುಪಾಲು ಹಣವನ್ನು ನಿರ್ದಿಷ್ಟ ಸಮುದಾಯಕ್ಕೆ ಮೀಸಲಿಡುತ್ತಿರುವ ಈ ನೀತಿಯನ್ನು ಜನತೆ ಸೂಕ್ತ ಸಮಯದಲ್ಲಿ ಪಾಠ ಕಲಿಸುವರು ಎಂದು ಅವರು ಎಚ್ಚರಿಸಿದ್ದಾರೆ.
ಮುಸ್ಲಿಂ ತುಷ್ಟಿಕರಣದ ರಾಜಕಾರಣ ಮಾಡಿ, ಹಿಂದೆ ಬೆಂಬಲ ನೀಡಿದ ಅಹಿಂದ ವರ್ಗಗಳಿಗೆ ಯಾವುದೇ ಮಹತ್ವದ ಕೊಡುಗೆ ನೀಡದೆ ಕಣ್ಣೋರೆಸುವ ನಾಟಕ ಮಾಡಲಾಗಿದೆ ಎಂದು ಸಂತೋಷ್ ಕುಮಾರ್ ಬಿ.ಎಂ ಅವರು ಆರೋಪಿಸಿದ್ದಾರೆ. 2025–26ನೇ ಸಾಲಿನಲ್ಲಿ ರಾಜ್ಯದ ಒಟ್ಟು ಸಾಲವು 8.14 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಕೇವಲ ಬಡ್ಡಿ ಪಾವತಿಗೆ ಮಾತ್ರ 48,000 ಕೋಟಿ ರೂ. ವೆಚ್ಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಾಜ್ಯದ ಆರ್ಥಿಕ ಲೆಕ್ಕಾಚಾರವೇ ಅಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಹಾಯಕವಾಗದ ಬಜೆಟ್ ಆಗಿದ್ದು, ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಮೈಸೂರು ಮಹಾನಗರದ ಮಾಧ್ಯಮ ಸಹ ಸಂಚಾಲಕರಾದ ಸಂತೋಷ್ ಕುಮಾರ್ ಬಿ.ಎಂ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




