
ಮೈಸೂರು ಫೆ.11:- ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಹಾಗೂ ಸಾಧಕರ ಸಂದೇಶಗಳನ್ನು ಸಮಾಜಕ್ಕೆ ಸಾರಲು, ಅವರ ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ವಿವಿಧ ಮಹನೀಯರ ಜಯಂತಿಗಳ ಆಚರಣೆ ಮಾಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ವಿವಿಧ ಜಯಂತಿಗಳಾದ ಛತ್ರಪತಿ ಶಿವಾಜಿ ಜಯಂತಿ, ಸಂತ ಕವಿ ಸರ್ವಜ್ಞ ಜಯಂತಿ, ಶ್ರೀ ರೇಣುಕಾಚಾರ್ಯ ಜಯಂತಿ, ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಣೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಛತ್ರಪತಿ ಶಿವಾಜಿ ಜಯಂತಿಯನ್ನು ಫೆ. 19ರಂದು ಬೆಳಗ್ಗೆ 12 ಗಂಟೆಗೆ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು. ಸಂತ ಕವಿ ಸರ್ವಜ್ಞ ಜಯಂತಿಯನ್ನು ಫೆ 20.ರಂದು ಬೆಳಗ್ಗೆ 11 ಗಂಟೆಗೆ ಕಿರು ರಂಗಮoದಿರದಲ್ಲಿ ಆಚರಣೆ ಮಾಡಲಾಗುವುದು. ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಮಾ.01 ಬೆಳಗ್ಗೆ 11:30 ಕ್ಕೆ ರಂದು ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು. ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿಯನ್ನು ಮಾ. 08.ರಂದು ಬೆಳಗ್ಗೆ 11 ಗಂಟೆಗೆ ಕಿರು ರಂಗಮoದಿರದಲ್ಲಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವೇದಿಕೆ ಮೇಲೆ ಗೀತಾ ಗಾಯನ ಏರ್ಪಡಿಸಲಾಗುವುದು. ಸಮುದಾಯದ ಮುಖಂಡರ ಸಲಹೆಯಂತೆ ದಿವ್ಯ ಸಾನಿಧ್ಯ ಹಾಗೂ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿ ಯನ್ನು ಆಹ್ವಾನಿಸಲಾಗುವುದು ಎಂದರು.
ಜಯಂತಿಗಳ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲಾ ಸಮುದಾಯದವರು ಸೇರಿ ಜಯಂತಿಗಳ ಆಚರಣೆ ಮಾಡಬೇಕು. ಜಯಂತಿಗಳ ಆಚರಣೆಯ ಉದ್ದೇಶ ಮಹನೀಯರ ಆದರ್ಶಗಳನ್ನು ಪಾಲನೆ ಮಾಡುವುದು ಆಗಿದೆ. ಮಹನೀಯರ ತತ್ವ ಆದರ್ಶಗಳನ್ನು ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆಯ ಮೇಲೆ ಗಣ್ಯರಿಗೆ ಬೊಕ್ಕೆಗಳನ್ನು ನೀಡಿ ಸ್ವಾಗತ ಮಾಡುವ ಬದಲು ಆಯಾ ಜಯಂತಿಗಳಲ್ಲಿ ಆನೇಕ ಮಹನೀಯರ ಜೀವನ ಚರಿತ್ರೆ ಕುರಿತ ಪುಸ್ತಕಗಳನ್ನು ನೀಡಿ ಸ್ವಾಗತ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಯಂತಿಗಳು ನಡೆಯುವ ಸ್ಥಳದ ಸ್ವಚ್ಚತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ತಳಿರು ತೋರಣ, ಹಾಗೂ ಶಾಮಿಯಾನ ವ್ಯವಸ್ಥೆಯನ್ನು ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಮಾಡಬೇಕು. ವಿವಿಧ ಜಯಂತಿಗಳ ಆಚರಣೆ ಮಾಡುವಾಗ ಮೈಸೂರು ನಗರದಲ್ಲಿ ಇರುವ ಎಲ್ಲಾ ಮಹನೀಯರ ಪ್ರತಿಮೆಗಳನ್ನು ಮಹಾನಗರ ಪಾಲಿಕೆಯ ವತಿಯಿಂದ ಸ್ವಚ್ಛ ಮಾಡಬೇಕು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಡಿ ಎಂ ಸುದರ್ಶನ್ ಅವರು ಮಾತನಾಡಿ ಜಯಂತಿಗಳ ಆಚರಣೆಗೆ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳಿಗೆ ಮುಖಂಡರಿಗೆ ಆಹ್ವಾನ ನೀಡಲಾಗುವುದು. ಕಲಾಮಂದಿರದಲ್ಲಿ ಗೀತಾ ಗಾಯನ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಸಮುದಾಯದ ಮುಖಂಡರು ಮಾತನಾಡಿ ತಮ್ಮ ತಮ್ಮ ಜಯಂತಿಗಳ ಆಚರಣೆಯ ದಿವ್ಯ ಸಾನಿಧ್ಯಕ್ಕೆ ತಮ್ಮ ಸಮುದಾಯದ ಸ್ವಾಮೀಜಿಗಳ ಹೆಸರನ್ನು ಆಯ್ಕೆ ಮಾಡಿ ಒಂದೆರಡು ದಿನಗಳಲ್ಲಿ ನೀಡಲಾಗುವುದು. ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಹೆಸರನ್ನು ನೀಡಲಾಗುವುದು ಎಂದು ಸಮುದಾಯದ ಮುಖಂಡರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಜಯಂತಿಗಳ ಆಚರಣೆಯ ಸಂಬAಧ ಸಮುದಾಯಗಳ ಮುಖಂಡರುಗಳು ಉಪಸ್ಥಿತರಿದ್ದರು.



