
ದಾವಣಗೆರೆ: ರಸ್ತೆ ಮಧ್ಯೆ ಸಿನಿಮೀಯ ರೀತಿಯಲ್ಲಿ ಕಾರು ಅಡ್ಡಗಟ್ಟಿ 38 ಲಕ್ಷ ರೂ. ದರೋಡೆ ನಡೆಸಿದ ಘಟನೆ ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಭದ್ರಾವತಿ ಮೂಲದ ಮಾಲತೇಶ್ ಹಣ ಕಳೆದುಕೊಂಡ ವ್ಯಕ್ತಿ. ಅವರು ತಮ್ಮ ಸ್ನೇಹಿತ ಮಾನಚಾರಿ ಜೊತೆ ಹಗರಿಬೊಮ್ಮನಹಳ್ಳಿಯಲ್ಲಿ ಪೂರ್ವಿಕರ ಜಮೀನು ಮಾರಾಟ ಮಾಡಿ, ಒಟ್ಟು 76 ಲಕ್ಷ ರೂ. ಹಣವನ್ನು ಓಮ್ನಿ ಕಾರಿನಲ್ಲಿ ತೆಗೆದುಕೊಂಡು ಬರುತ್ತಿದ್ದರು. ಹಣವನ್ನು ಎರಡು ಬ್ಯಾಗುಗಳಲ್ಲಿ ವಿಭಜಿಸಲಾಗಿದ್ದು, ಒಂದರಲ್ಲಿ 38 ಲಕ್ಷ ರೂ., ಮತ್ತೊಂದರಲ್ಲಿ 38 ಲಕ್ಷ ರೂ. ಇಡಲಾಗಿತ್ತು. ಜೊತೆಗೆ ಎರಡು ಲಕ್ಷ ರೂ. ನಗದು ಜೆಬಿನಲ್ಲಿ ಇಟ್ಟುಕೊಂಡಿದ್ದರು.
ಮಲೆಬೆನ್ನೂರು ಸಮೀಪಕ್ಕೆ ಬಂದಾಗ, ಅನುಮಾನಾಸ್ಪದ ಕಾರೊಂದು ಮಾಲತೇಶ್ ಅವರ ಕಾರಿಗೆ ಉಜ್ಜಿಕೊಂಡು ಹೋಗಿದೆ. ಇದರಿಂದ ಎಚ್ಚರಗೊಂಡ ಅವರು ವೇಗವಾಗಿ ಮುಂದೆ ಸಾಗಿದ್ದಾರೆ. ಆದರೆ ಆ ಕಾರು ಅವರನ್ನು ಹಿಂಬಾಲಿಸುತ್ತಲೇ ಬಂದಿದೆ. ಕೆಲವೇ ಕ್ಷಣಗಳಲ್ಲಿ ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿ ಸಮೀಪದ ನಿರ್ಜನ ಪ್ರದೇಶದಲ್ಲಿ ಗ್ಯಾಂಗ್ ಕಾರನ್ನು ಅಡ್ಡಗಟ್ಟಿದೆ.
ಕಾರಿನಿಂದ ಇಳಿದ ನಾಲ್ವರು ದುಷ್ಕರ್ಮಿಗಳು ಮಾಲತೇಶ್ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿದ್ದ ಒಂದು ಬ್ಯಾಗಿನ 38 ಲಕ್ಷ ರೂ. ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಆಕಸ್ಮಿಕ ದಾಳಿಯಿಂದ ಬೆಚ್ಚಿಬಿದ್ದ ಮಾಲತೇಶ್ ಪ್ರಾಣಭಯದಿಂದ ತಕ್ಷಣ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ.
ನಂತರ ಅವರು ಮಲೆಬೆನ್ನೂರಿಗೆ ಮರಳಿ ಉಳಿದ ಹಣವನ್ನು ಸಂಬಂಧಿಕರ ಮನೆಯಲ್ಲಿ ಸುರಕ್ಷಿತವಾಗಿ ಇಟ್ಟು, ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ದಾವಣಗೆರೆ ಎಸ್‌ಪಿ ಹೆಚ್.ಟಿ. ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ತನಿಖೆ ಮುಂದುವರೆಸಿದ್ದಾರೆ.
ಪೂರ್ವಯೋಜಿತವಾಗಿ ನಡೆದಿರುವ ಈ ದರೋಡೆ ಪ್ರಕರಣ ಸ್ಥಳೀಯರಲ್ಲಿ ಭೀತಿಯನ್ನು ಉಂಟುಮಾಡಿದ್ದು, ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





