HOMENews

ಜೈಲು ವ್ಯವಸ್ಥೆ ಸುಧಾರಣೆ ಹೆಸರಿನಲ್ಲಿ ಕ್ರೌರ್ಯ ನಡೆಯುತ್ತಿದೆ: ಓ.ಎಲ್. ನಾಗಭೂಷಣಸ್ವಾಮಿ

ಮೈಸೂರು, ಮಾ.15:- ಸಮಾಜದಲ್ಲಿ ನಡೆಯುತ್ತಿರುವ ಅಸಮಾನತೆ, ಅಧಿಕಾರದ ದುರುಪಯೋಗ ಹಾಗೂ ಜೈಲು ವ್ಯವಸ್ಥೆಯ ಬಗ್ಗೆ ಗಂಭೀರ ಚರ್ಚೆಗಳು ಅಗತ್ಯವಿದೆ ಎಂದು ಹಿರಿಯ ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು. ಜೈಲು ವ್ಯವಸ್ಥೆ ಕೈದಿಗಳನ್ನು ಸುಧಾರಿಸುವ ಉದ್ದೇಶ ಹೊಂದಿದರೂ, ಕೆಲವೊಮ್ಮೆ “ಸುಧಾರಣೆ” ಎಂಬ ಹೆಸರಿನಲ್ಲಿ ಕ್ರೌರ್ಯವೂ ನಡೆಯುತ್ತಿರುವುದು ದುಃಖಕರ ಸಂಗತಿ ಎಂದು ಅವರು ಹೇಳಿದರು.

ನಗರದ ಜೆಎಲ್ಬಿ ರಸ್ತೆಯಲ್ಲಿರುವ ದಿ ಇನ್ಸಟ್ಯೂಟ್ ಆಫ್ ಇಂಜಿನಿಯರ್ಸ ಸಭಾಂಗಣದಲ್ಲಿ ಕವಿತಾ ಪ್ರಕಾಶನ ಆಯೋಜಿಸಿದ್ದ ಸಾಹಿತ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಲೇಖಕ ರಮೇಶ್ ಚಂದ್ರ ಅವರ ‘ರುಹಾದಿಯೊಳಗಣ ಹಾಡೇರು’ ಕವನ ಸಂಕಲನ ಹಾಗೂ ಗಣೇಶ್ ಅಮೀನಗಡ ಅವರ ‘ಕೈದಿಗಳ ಕಥನ’, ‘ರಂಗ ಪುಸಂಗ’ ಮತ್ತು ‘ರಂಗ ಕರ್ಪೂರ’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಮಾತನಾಡಿದ ನಾಗಭೂಷಣಸ್ವಾಮಿ ಅವರು, ಜೈಲಿಗೆ ಹೋಗಿ ಬಂದ ವ್ಯಕ್ತಿಯ ಮೇಲೆ ಅಪರಾಧಿಯ ಮುದ್ರೆ ಜೀವನಪೂರ್ತಿ ಅಂಟಿಕೊಂಡೇ ಇರುತ್ತದೆ. ಸಮಾಜವು ಅವರನ್ನು ಸಂಶಯದ ದೃಷ್ಟಿಯಿಂದಲೇ ನೋಡುತ್ತದೆ. ಆದರೆ ಭ್ರಷ್ಟಾಚಾರ ಅಥವಾ ದೊಡ್ಡ ಮಟ್ಟದ ಹಣಕಾಸು ದುರುಪಯೋಗದಲ್ಲಿ ತೊಡಗಿದವರನ್ನು ಕೆಲವೊಮ್ಮೆ ಸಮಾಜವೇ ಗೌರವಿಸುವ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

“ಸಣ್ಣ ತಪ್ಪಿಗಾಗಿ ಜೈಲು ಸೇರಿದವರು ಸಮಾಜದಲ್ಲಿ ಅವಮಾನಕ್ಕೆ ಗುರಿಯಾಗುತ್ತಾರೆ. ಆದರೆ ದೊಡ್ಡ ಮಟ್ಟದ ತಪ್ಪು ಮಾಡಿದವರನ್ನು ಕೆಲವೊಮ್ಮೆ ಗೌರವದಿಂದ ಸ್ವಾಗತಿಸಲಾಗುತ್ತದೆ. ಇದು ನಮ್ಮ ನ್ಯಾಯ ಮತ್ತು ನೈತಿಕ ಮೌಲ್ಯಗಳನ್ನು ಪ್ರಶ್ನಿಸುವ ವಿಷಯವಾಗಿದೆ,” ಎಂದು ಅವರು ಹೇಳಿದರು.

ಜೈಲುಗಳಲ್ಲಿ ಇರುವ ಕೈದಿಗಳ ಹಿನ್ನೆಲೆ ಕುರಿತು ಮಾತನಾಡಿದ ಅವರು, ಹೆಚ್ಚಿನ ಕೈದಿಗಳು ಬಡತನ ಮತ್ತು ಶಿಕ್ಷಣದ ಕೊರತೆಯಿಂದ ಸಂಕಷ್ಟ ಅನುಭವಿಸುವವರೇ ಆಗಿದ್ದಾರೆ ಎಂದು ಹೇಳಿದರು. “ಜೈಲಿನಲ್ಲಿರುವ 100 ಮಂದಿಯಲ್ಲಿ ಸುಮಾರು 98 ಮಂದಿ ಗ್ರಾಮೀಣ ಪ್ರದೇಶಗಳಿಂದ ಬಂದ ಬಡವರು ಹಾಗೂ ಅಲ್ಪಶಿಕ್ಷಿತರು. ನ್ಯಾಯಕ್ಕಾಗಿ ಹೋರಾಡಲು ಅಗತ್ಯವಾದ ಸಂಪನ್ಮೂಲಗಳು ಅವರಿಗೆ ಲಭ್ಯವಿಲ್ಲ. ನ್ಯಾಯವನ್ನು ಖರೀದಿಸಲು ಸಾಧ್ಯವಾಗದವರೇ ಹೆಚ್ಚು ಬಾರಿ ಜೈಲು ಸೇರುತ್ತಾರೆ,” ಎಂದು ಅವರು ವಿಶ್ಲೇಷಿಸಿದರು.

ಜೈಲು ವ್ಯವಸ್ಥೆಯ ಉದ್ದೇಶ ಕೇವಲ ಶಿಕ್ಷೆ ನೀಡುವುದು ಮಾತ್ರವಲ್ಲ, ವ್ಯಕ್ತಿಯ ಮನೋಭಾವದಲ್ಲಿ ಬದಲಾವಣೆ ತರಬೇಕು. ಕೈದಿಗಳ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು ಅವರನ್ನು ಸಮಾಜಮುಖಿಯಾಗಿಸುವ ಪ್ರಯತ್ನಗಳು ಹೆಚ್ಚಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಲೇಖಕರಾದ ರಮೇಶ್ ಚಂದ್ರ, ಗಣೇಶ್ ಅಮೀನಗಡ, ಹಿರಿಯ ರಂಗಕರ್ಮಿ ಹುಲಿಗಪ್ಪ ಕಟ್ಟಿಮನಿ, ಜೈಲಿನ ಅನುಭವ ಹಂಚಿಕೊಂಡ ಹೆಚ್ ವಿ ರಮೇಶ್ ಹಾಗೂ ಮಹೇಶ್ ಬಗಲಿ ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು ಹಾಗೂ ಸಮಾಜಮುಖಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಾಹಿತ್ಯದ ಮೂಲಕ ಜೈಲು ಜೀವನದ ವಾಸ್ತವಿಕತೆ ಹಾಗೂ ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ಚಿಂತನೆಗೆ ಕಾರಣವಾದ ಕಾರ್ಯಕ್ರಮ ಇದಾಗಿದೆ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.

Leave a Reply