HOMENews

ಸಂಕಷ್ಟದಲ್ಲಿದ್ದ ಕುಮಾರಿ ಎಂಬ ಮಹಿಳೆಗೆ ಮಾಸಾಶನ ಮಾಡಿಸಿ ನೆರವಾದ ದಸಂಸ

ಹುಣಸೂರು:-  ನಗರದ ಕಲ್ಕುಣಿಕೆಯ ಕುರ್ಜನ ಬೀದಿಯಲ್ಲಿ ವಾಸವಿರುವ ಕುರುಬ ಸಮಾಜದ ಕುಮಾರಿ ಎಂಬ ಸಂಕಷ್ಟದಲ್ಲಿದ್ದ ಮಹಿಳೆಗೆ ದಿನಾಂಕ : 18-03-2026 ರ ಬುಧವಾರ ಹುಣಸೂರು ತಹಸೀಲ್ದಾರ್ ರವರಾದ ಮಂಜುನಾಥ್ ರವರಿಂದ ಮನಸ್ವಿನಿ ಯೋಜನೆಯ ಮಾಸಾಶನ ಮಂಜೂರಾತಿ ಪತ್ರವನ್ನು ಕೊಡಿಸಲಾಯಿತು.

ಈ ಸಂದರ್ಭದಲ್ಲಿ ದಸಂಸ ದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ಮಾತನಾಡಿ ಕುಮಾರಿ ಎಂಬ ಮಹಿಳೆ ಕಲ್ಕುಣಿಕೆ ಗ್ರಾಮದಲ್ಲಿ ವಾಸವಿದ್ದು, ಇವರ ಗಂಡ ಕಳೆದ 15 ವರ್ಷಗಳ ಹಿಂದೆಯೇ ಇವರನ್ನು ಬಿಟ್ಟು ಬೇರೆ ಹೋಗಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಈ ಹೆಣ್ಣು ಮಕ್ಕಳನ್ನು ಕೂಲಿ ನಾಲಿ ಮಾಡಿ ಸಾಕಿ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿರುತ್ತಾರೆ. ನಂತರ ಗಂಡನಿಂದಲೂ ದೂರವಾಗಿ ಹೆಣ್ಣು ಮಕ್ಕಳನ್ನು ಬೇರೆ ಮನೆಗೆ ಮದುವೆ ಮಾಡಿಕೊಟ್ಟು ಒಂಟಿಯಾಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದರು. ಇವರು ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಾ ಚಿಕಿತ್ಸೆಗೂ ಹಣವಿಲ್ಲದೆ ಬಹಳ ಸಂಕಷ್ಟದ ಬದುಕನ್ನು ದೂಡುತ್ತಾ ಇವರ ಕಷ್ಟವನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ಒಳಗೊಳಗೆ ನೋವನ್ನು ಅನುಭವಿಸುತ್ತಿದ್ದರು. ಈ ಮಹಿಳೆಯ ನೋವನ್ನು ಕಲ್ಕುಣಿಕೆ ಗ್ರಾಮದ ಪಾರ್ವತಮ್ಮ ಎಂಬುವರು ತಿಳಿದುಕೊಂಡು ದಸಂಸ ದ ಗಮನಕ್ಕೆ ತರಲಾಗಿತ್ತು. ಈ ಮಹಿಳೆಯ ಪರಿಸ್ಥಿತಿಯನ್ನು ತಿಳಿದುಕೊಂಡ ನಾವು ಈ ಮಹಿಳೆಗೆ ಆತ್ಮಸ್ಥೈರ್ಯ ತುಂಬಿ ಮನಸ್ವಿನಿ ಯೋಜನೆಯಡಿ ಮಾಸಾಶಸನವನ್ನು ಮಂಜೂರು ಮಾಡಿಸಲು ಹಾಡುಗಾರ ಕಿರಿಜಾಜಿ ಗಜೇಂದ್ರ ರವರಿಗೆ ಮತ್ತು ಬೆಳತ್ತೂರು ಗ್ರಾಮದ ಪೂಜಾರಿ ವೆಂಕಟೇಶ್ ರವರಿಗೆ ವಹಿಸಲಾಗಿತ್ತು. ನಂತರ ಈ ಮಹಿಳೆಯ ಸಂಕಷ್ಟದ ಪರಿಸ್ಥಿತಿಯನ್ನು ತಹಸೀಲ್ದಾರ್ ಮಂಜುನಾಥ್, ಉಪತಹಸೀಲ್ದಾರ್ ಚಂದ್ರ ರವರಿಗೆ ತಿಳಿಸಿ ಮನಸ್ವಿನಿ ಮಂಜೂರು ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಾಯಿತು. ದಸಂಸ ದ ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ರವರು ಮನಸ್ವಿನಿ ಯೋಜನೆಯಡಿ ಮಾಸಾಶನವನ್ನು ಈ ಮಹಿಳೆಗೆ ಮಂಜೂರು ಮಾಡಿಕೊಟ್ಟಿರುವುದಕ್ಕೆ ದಸಂಸ ವು ಅಭಿನಂದಿಸುತ್ತದೆ. ದಸಂಸ ವು ನೊಂದವರು, ಹಸಿದವರು, ಬೀದಿಯಲ್ಲಿ ಬಿದ್ದ ಎಲ್ಲಾ ಜಾತಿಯ ಬಡವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬರುತ್ತಿದೆ ಎಂದರು.
ತಹಸೀಲ್ದಾರ್ ಮಂಜುನಾಥ್ ರವರು ಮಾತನಾಡಿ ಸಂಕಷ್ಟದಲ್ಲಿರುವ ಇಂತಹ ಮಹಿಳೆಯರನ್ನು ಹುಡುಕಿ ಸರ್ಕಾರದ ಸೌಲಭ್ಯಗಳನ್ನು ನಮ್ಮಿಂದ ಮಾಡಿಸಿಕೊಟ್ಟು ಅವರ ನೋವಿನ ಬದುಕಿಗೆ ನೆರವಾಗುವ ಈ ನಿಮ್ಮ ಕಾರ್ಯವು ಶ್ಲಾಘನೀಯವಾಗಿದೆ ಎಂದರು. ಮನಸ್ವಿನಿ ಯೋಜನೆಯ ಮಂಜೂರಾತಿ ಆದೇಶ ಪತ್ರವನ್ನು ಪಡೆದುಕೊಂಡ ಕುಮಾರಿಯ ಮುಖದಲ್ಲಿ ನೋವು ಮಾಯವಾಗಿ ಮಂದಹಾಸದೊಂದಿಗೆ ಕೃತಜ್ಞತೆಯಿಂದ ಕೈಮುಗಿದರು.ಈ ಸಂದರ್ಭದಲ್ಲಿ ದಸಂಸ ದ ಕಿರಿಜಾಜಿ ಗಜೇಂದ್ರ, ಬೆಳ್ತೂರು ಗ್ರಾಮದ ಪೂಜಾರಿ ವೆಂಕಟೇಶ್, ಕಲ್ಕುಣಿಕೆ ಗ್ರಾಮದ ಪಾರ್ವತಮ್ಮ ಹಾಜರಿದ್ದರು.
“ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಗುಣ ನಿಮ್ಮಲ್ಲಿದ್ದರೆ ನೀವು ನಂಬಿರುವ ದೇವರೇ ನಿಮ್ಮ ಮನೆ ಬಾಗಿಲಿಗೆ ಬರುವನು”

Leave a Reply