
ಗದಗ, ಫೆಬ್ರವರಿ 19: ರಾಜ್ಯದ ಗದಗ ಜಿಲ್ಲೆಯಲ್ಲಿ ಹಿಂದೂ ದೇವಾಲಯಗಳ ಮೇಲಿನ ವಿಧ್ವಂಸಕೃತ್ಯಗಳು ಮುಂದುವರಿದಿದ್ದು, ಎರಡು ಗ್ರಾಮಗಳಲ್ಲಿ ಹಿಂದೂ ದೇವರ ವಿಗ್ರಹಗಳಿಗೆ ಹಾನಿ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಈಗಾಗಲೇ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ಈಶ್ವರ, ನಂದಿ ಹಾಗೂ ಹೊನ್ನತ್ತೆಮ್ಮ ದೇವರುಗಳ ಮೂರ್ತಿಗಳನ್ನು ಕಿಡಿಗೆಡಿಗಳು ಧ್ವಂಸಗೊಳಿಸಿದ್ದ ಪ್ರಕರಣದ ತನಿಖೆಯನ್ನು ಪೋಲಿಸರು ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೆ ಮಲ್ಲಿಕಾರ್ಜುನಪುರ ಮತ್ತು ಆದರಳ್ಳಿ ಗ್ರಾಮಗಳಲ್ಲಿ ಇಂತಹ ಘಟನೆಗಳು ಸಂಭವಿಸಿರುವುದು ಜನರಲ್ಲಿಭಯ ಹಾಗೂ ಆತಂಕ ಮೂಡಿಸಿದೆ.
ಇಲ್ಲಿನ ಸ್ಥಳಿಯರ ಮಾಹಿತಿಯ ಪ್ರಕಾರ, ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ಗಾಳಿ ಬಸವೇಶ್ವರ ದೇವಸ್ಥಾನದಲ್ಲಿ ಯಾರೋ ಅಪರಿಚಿತರು ಶಿವಲಿಂಗ, ಪಾಣಿಪೀಠ ಮತ್ತು ನಂದಿ ವಿಗ್ರಹಗಳಿಗೆ ಹಾನಿ ಮಾಡಿದ್ದಾರೆ. ಬೆಳಗಿನ ಜಾವ ದೇವಸ್ಥಾನಕ್ಕೆ ತೆರಳಿದ ಗ್ರಾಮಸ್ಥರು ವಿಗ್ರಹಗಳು ಭಗ್ನಗೊಂಡಿರುವುದನ್ನು ಕಂಡು ಇಲ್ಲಿನ ಸ್ಥಳಿಯರು ಬೆಚ್ಚಿಬಿದ್ದಿದ್ದಾರೆ. ಮೂರ್ತಿ ಭಗ್ನವಾಗಿರುವ ವಿಷಯ ತಿಳಿದು ಸ್ಥಳಕ್ಕೆ ಸ್ಥಳಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ರೀತಿ ಹೋಲುವ ಮತ್ತೊಂದು ಘಟನೆ ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿ ಸಮೀಪದ ದಂಡೇರಿ ಮರಿಯಮ್ಮ ದೇವಾಲಯದಲ್ಲಿ ದೇವರ ಮೂರ್ತಿಗಳನ್ನು ವಿರೋಪಗೊಳಿಸಿರುವುದು ನಡೆದಿದೆ. ಮರಿಯಮ್ಮ ದೇವಿಯ ವಿಗ್ರಹದ ಮುಖ ಭಾಗವನ್ನು ಹಾನಿಗೊಳಿಸಿ, ದೇವರ ವಿಗ್ರಹಕ್ಕೆ ಮಸಿ ಬಳಿದಿರುವುದು ಗಮನಕ್ಕೆ ಬಂದಿದೆ. ಈಂತಹ ಕೃತ್ಯದಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
ಇಲ್ಲಿನ ಸ್ಥಳೀಯರ ಪ್ರಕಾರ, ಈ ದೇವಾಲಯಗಳು ಸಾವಿರಾರಿ ವರ್ಷಗಳ ಪುರಾತನ ಕಾಲದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿವೆ. ಈ ಪ್ರದೇಶದಲ್ಲಿ ಜನವಸತಿ ಕಡಿಮೆ ಇರುವ ಪ್ರದೇಶಗಳಲ್ಲಿ ಇರುವ ದೇವಸ್ಥಾನಗಳನ್ನು ದುಷ್ಕರ್ಮಿಗಳು ಗುರಿಯಾಗಿಸಿಕೊಂಡು ಇಂತಹ ಕೃತ್ಯ ಎಸಗುತ್ತಿರುವ ಸಾಧ್ಯತೆ ವ್ಯಕ್ತವಾಗುತ್ತಿದೆ. ಶಿಂಗಟಾಲೂರು ಗ್ರಾಮದಲ್ಲಿ ನಡೆದ ಈ ಹಿಂದಿನ ಘಟನೆಯ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಇದೀಗ ಮತ್ತೇ ಎರಡು ಕಡೆಗಳಲ್ಲಿ ವಿಗ್ರಹಗಳಿಗೆ ಹಾನಿ ಆಗಿರುವುದು ಇಲ್ಲಿನ ಜನರ ಕಳವಳವನ್ನು ಹೆಚ್ಚಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ವಿವಿಧ ಕೋನಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ, ಸ್ಥಳೀಯರ ವಿಚಾರಣೆ ಹಾಗೂ ಪೆಟ್ರೋಲಿಂಗ್ ಬಲಪಡಿಸುವ ಮೂಲಕ ಆರೋಪಿಗಳನ್ನು ಬಂಧಿಸಲು ಪೋಲಿಸರು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿನ ಇತರೆ ಪುರಾತನ ದೇವಾಲಯಗಳ ಸುತ್ತಮುತ್ತಲೂ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇಂತಹ ಘಟನೆಗಳನ್ನು ಖಂಡಿಸಿರುವ ಗ್ರಾಮಸ್ಥರು, ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಎಸಗುವರನ್ನ ತಕ್ಷಣವೇ ಬಂದಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕೃತ್ಯವನ್ನು ಎಸಗಿರುವ ದೋಷಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಬೇಡಿಕೆ ಇಲ್ಲಿನ ಸ್ಥಳಿಯರಿಂದ ಕೇಳಿಬರುತ್ತಿದೆ. ಕೆಲವರು ದೇವಾಲಯಗಳ ಬಳಿ ಸಿಸಿಟಿವಿ ಅಳವಡಿಕೆ ಮತ್ತು ರಾತ್ರಿ ಪಾಳಿಯ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.
ಗದಗ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ವಿಗ್ರಹ ಧ್ವಂಸ ಘಟನೆಗಳು ಜನರಲ್ಲಿ ಅಲ್ಲಿನ ಜನರಲ್ಲಿ ಅಶಾಂತಿ ಉಂಟುಮಾಡಿದ್ದು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂಬ ನಿರೀಕ್ಷೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ.



