
ಕೇಂದ್ರ ಸರ್ಕಾರ ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ರೈತರ ರಕ್ಷಣೆಗೆ ಎನನ್ನು ಮಾಡದೆ ಸುಣ್ಣ ಬಣ್ಣ ಹಚ್ಚಿ, ನಾಲಿಗೆಗೆ ಜೇನು ತುಪ್ಪ ಸವರಿ ಜೊಲ್ಲು ಸುರಿಸುವ ನಿರಾಶಾದಾಯಕ ಬಜೆಟ್ ಮಂಡನೆ.
ಮೈಸೂರು :- ರೈತ ವಿರೋಧಿ ಬಜೆಟ್: ಕನಿಷ್ಠ ಬೆಂಬಲ ಬೆಲೆ ಕಾನೂನು, ಸಾಲಮನ್ನಾ ಸೇರಿ ಮೂಲಭೂತ ಬೇಡಿಕೆಗಳೆಲ್ಲಾ ಕಡೆಗಣನೆ
ಕೇಂದ್ರ ಸರ್ಕಾರ ಮಂಡಿಸಿರುವ ಇತ್ತೀಚಿನ ಬಜೆಟ್ ರೈತರ ಪಾಲಿಗೆ ಸಂಪೂರ್ಣ ನಿರಾಶೆ ತಂದಿದ್ದು, ಕೃಷಿ ಕ್ಷೇತ್ರದ ಮೂಲಭೂತ ಸಮಸ್ಯೆಗಳಿಗೆ ಯಾವುದೇ ಸ್ಪಷ್ಟ ಪರಿಹಾರ ನೀಡಿಲ್ಲ ಎಂದು ರೈತ ಮುಖಂಡರು ಹಾಗೂ ಕೃಷಿ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
ವಿಶೇಷವಾಗಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿ ನೀಡುವ ಕಾನೂನು ಜಾರಿಗೆ ತರಬೇಕೆಂಬ ದೀರ್ಘಕಾಲದ ಬೇಡಿಕೆಯನ್ನು ಬಜೆಟ್ ಸಂಪೂರ್ಣವಾಗಿ ಕಡೆಗಣಿಸಿದೆ. ಕೇವಲ ಘೋಷಣೆಗಳು ಮತ್ತು ಭರವಸೆಗಳ ಮೂಲಕ ರೈತರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸಂಪೂರ್ಣ ಕೃಷಿ ಸಾಲ ಮನ್ನಾ ನಿರ್ಲಕ್ಷ್ಯ
ರೈತರ ಮೇಲೆ ಹೆಚ್ಚುತ್ತಿರುವ ಸಾಲದ ಭಾರವನ್ನು ಗಮನಿಸಿ, ಸಂಪೂರ್ಣ ಕೃಷಿ ಸಾಲ ಮನ್ನಾ ಘೋಷಿಸಬೇಕೆಂಬ ನಿರೀಕ್ಷೆ ಇತ್ತು. ಆದರೆ ಬಜೆಟ್ನಲ್ಲಿ ಈ ಕುರಿತು ಯಾವುದೇ ನಿರ್ಧಾರ ಪ್ರಕಟವಾಗಿಲ್ಲ. ಸಾಲದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆಯ ನಡುವೆ, ಸರ್ಕಾರದ ಈ ಮೌನ ಅಸಂವೇದನಾಶೀಲತೆಯ ಪ್ರತೀಕ ಎಂದು ರೈತ ಸಂಘಗಳು ಕಿಡಿಕಾರಿವೆ.
ಕೆರೆ–ಕಟ್ಟೆಗಳ ಪುನಶ್ಚೇತನಕ್ಕೆ ಯೋಜನೆ ಇಲ್ಲ
ರಾಜ್ಯಾದ್ಯಂತ ಕೆರೆ, ಕಟ್ಟೆಗಳ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆಯುವ ಮೂಲಕ ಅದನ್ನು ರೈತರ ಜಮೀನುಗಳಿಗೆ ಹಾಕಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ಸಮಗ್ರ ಕಾರ್ಯಯೋಜನೆ ಜಾರಿಗೆ ತರಬೇಕೆಂಬ ಬೇಡಿಕೆಯೂ ಬಜೆಟ್ನಲ್ಲಿ ಕಾಣಿಸಿಕೊಂಡಿಲ್ಲ. ಇದು ಕೃಷಿಯ ದೀರ್ಘಕಾಲೀನ ಅಭಿವೃದ್ಧಿಗೆ ಅಗತ್ಯವಾದ ಕ್ರಮವಾಗಿದ್ದರೂ, ಸರ್ಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಲಾಗಿದೆ.
ಕಬ್ಬು ರೈತರಿಗೆ ಅನ್ಯಾಯ
ಕಬ್ಬಿನ FRP ದರವನ್ನು ರೈತರ ಹೊಲದಲ್ಲಿನ ದರವೆಂದು ಪರಿಗಣಿಸುವ ಮಾನದಂಡ ಜಾರಿಗೆ ತರಬೇಕು ಎಂಬ ಬೇಡಿಕೆ ಈಡೇರಿಲ್ಲ. ಜೊತೆಗೆ ಸಕ್ಕರೆ ಇಳುವರಿ ಪ್ರಮಾಣವನ್ನು 9.5ಕ್ಕೆ ನಿಗದಿಪಡಿಸಿ, FRP ದರವನ್ನು ಟನ್ಗೆ ₹6,000 ಮಾಡುವ ಬೇಡಿಕೆಯೂ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದರಿಂದ ಕಬ್ಬು ರೈತರು ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಫಸಲ್ ಭೀಮಾ ಯೋಜನೆ ವಿಫಲ
ಪ್ರಸ್ತುತ ಜಾರಿಯಲ್ಲಿರುವ ಫಸಲ್ ಭೀಮಾ ಬೆಳೆ ವಿಮಾ ಯೋಜನೆ ರೈತರಿಗೆ ನಿಜವಾದ ಪರಿಹಾರ ನೀಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಗ್ರಾಮ ಅಥವಾ ಹೋಬಳಿ ಮಟ್ಟದ ಬದಲಾಗಿ, ಪ್ರತಿ ರೈತನ ಹೊಲದ ಮಟ್ಟದಲ್ಲಿ ಬೆಳೆ ನಷ್ಟ ಪರಿಹಾರ ಸಿಗುವಂತೆ ವ್ಯವಸ್ಥೆ ಬದಲಾಯಿಸಬೇಕಿತ್ತು. ಆದರೆ ಈ ಮಹತ್ವದ ಸುಧಾರಣೆಯ ಬಗ್ಗೆ ಬಜೆಟ್ ಮೌನ ವಹಿಸಿದೆ.
ವಯೋವೃದ್ಧ ರೈತರಿಗೆ ಪಿಂಚಣಿ ನಿರ್ಲಕ್ಷ್ಯ
60 ವರ್ಷ ತುಂಬಿದ ರೈತರಿಗೆ ತಿಂಗಳಿಗೆ ₹10,000 ಪಿಂಚಣಿ ನೀಡುವ ಯೋಜನೆಯನ್ನು ತೆಲಂಗಾಣ ಮಾದರಿಯಲ್ಲಿ ಜಾರಿಗೆ ತರಬೇಕೆಂಬ ಬೇಡಿಕೆಯೂ ಈ ಬಜೆಟ್ನಲ್ಲಿ ಸ್ಪಂದನೆ ಪಡೆದಿಲ್ಲ. ಜೀವನಪೂರ್ತಿ ಕೃಷಿಗೆ ದುಡಿದ ರೈತರಿಗೆ ವೃದ್ಧಾಪ್ಯದಲ್ಲಿ ಭದ್ರತೆ ನೀಡಲು ಸರ್ಕಾರ ವಿಫಲವಾಗಿದೆ ಎಂದು ಟೀಕಿಸಲಾಗಿದೆ.
ರೈತರ ಮಕ್ಕಳ ಭವಿಷ್ಯಕ್ಕೂ ನಿರಾಶೆ
ರೈತನ ಮಗನ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ 25% ಮೀಸಲಾತಿ ನೀಡಬೇಕೆಂಬ ಸಾಮಾಜಿಕ ಭದ್ರತಾ ನೀತಿ ಜಾರಿಗೆ ತರಬೇಕಿತ್ತು. ಆದರೆ ಈ ವಿಚಾರವೂ ಬಜೆಟ್ನಲ್ಲಿ ಪ್ರಸ್ತಾಪವಾಗಿಲ್ಲ.
ಸರ್ಪೈಸಿ ಕಾಯ್ದೆ ವಿರುದ್ಧ ಆಕ್ರೋಶ
ಕೃಷಿ ಸಾಲ ವಸೂಲಾತಿಗಾಗಿ ರೈತರ ಜಮೀನು ವಶಪಡಿಸಿಕೊಳ್ಳಲು ಬಳಸಲಾಗುತ್ತಿರುವ ಸರ್ಪೈಸಿ ಕಾಯ್ದೆಯನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯೂ ಕಡೆಗಣಿಸಲಾಗಿದೆ. ಈ ಕಾಯ್ದೆ ರೈತರ ಬದುಕಿಗೆ ಭೀತಿಯಾಗಿದೆ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ ಅಸಮಾಧಾನ
ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ ₹6,000 ನೀಡುತ್ತಿದ್ದ ಮೊತ್ತವನ್ನು ₹9,000ಕ್ಕೆ ಏರಿಸಲಾಗಿದೆ. ಆದರೆ ಇದನ್ನು ರೈತ ಮುಖಂಡರು “ಅಳುವ ಮಗುವಿಗೆ ಚಾಕಲೇಟ್ ಕೊಟ್ಟಂತೆ” ಎಂದು ವ್ಯಂಗ್ಯವಾಡಿದ್ದಾರೆ. ಬೆಲೆ ಏರಿಕೆ, ಇಂಧನ ವೆಚ್ಚ, ರಸಗೊಬ್ಬರ ಬೆಲೆಗಳ ನಡುವೆ ಈ ಮೊತ್ತ ರೈತರಿಗೆ ಯಾವುದೇ ಉಪಯೋಗಕ್ಕೆ ಬರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ರೈಲ್ವೆ ನೇಮಕಾತಿಯಲ್ಲಿ ಭಾಷಾ ಅನ್ಯಾಯ
ರೈಲ್ವೆ ನೇಮಕಾತಿಯಲ್ಲಿ ಆಯಾ ರಾಜ್ಯದ ಭಾಷೆಗೆ ಅನುಗುಣವಾಗಿ ಪರೀಕ್ಷೆ ನಡೆಸಿ ಆಯ್ಕೆ ಮಾಡಬೇಕೆಂಬ ಬೇಡಿಕೆಯೂ ಈ ಬಜೆಟ್ನಲ್ಲಿ ಸ್ಪಷ್ಟತೆ ಪಡೆಯಲಿಲ್ಲ. ಇದರಿಂದ ಗ್ರಾಮೀಣ ಹಾಗೂ ರೈತ ಕುಟುಂಬಗಳ ಯುವಕರಿಗೆ ಉದ್ಯೋಗ ಅವಕಾಶಗಳು ಕಮ್ಮಿಯಾಗುತ್ತಿವೆ ಎಂದು ಆರೋಪಿಸಲಾಗಿದೆ.
ಈ ಬಜೆಟ್ ರೈತಪರವಾಗಿಲ್ಲ, ಕೃಷಿ ಸಂಕಷ್ಟಕ್ಕೆ ಪರಿಹಾರ ನೀಡುವುದಿಲ್ಲ ಮತ್ತು ಭವಿಷ್ಯದ ಕೃಷಿ ಅಭಿವೃದ್ಧಿಗೆ ದಿಕ್ಕು ತೋರಿಸುವಲ್ಲಿ ವಿಫಲವಾಗಿದೆ. ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೆ, ಮೇಲ್ಮೈ ಪರಿಹಾರಗಳ ಮೂಲಕ ಸರ್ಕಾರ ಕೈ ತೊಳೆದುಕೊಂಡಿದೆ ಎಂದು ರೈತ ಸಂಘಟನೆಗಳು ಕಿಡಿಕಾರಿವೆ.
ಅತ್ತಹಳ್ಳಿ ದೇವೆರಾಜ್
ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜ್ಯ ಕಬ್ಬು ಬೆಳೆಗಾರರ ಸಂಘ.
ಮೋ : 9964082549





