
ಮೈಸೂರು: ಮೈಸೂರು ವಿಶ್ವವಿದ್ಯಾಲಯ ಆವರಣದಲ್ಲಿರುವ ಇ.ಎಂ.ಆರ್.ಸಿ ಸಭಾಂಗಣದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಸೈರನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಗತ್ಯ ಸಹಾಯಕ ಸಾಧನಗಳು ಮತ್ತು ಶೈಕ್ಷಣಿಕ ಪರಿಕರಗಳ ವಿತರಣೆ ಕಾರ್ಯಕ್ರಮವು ಭವ್ಯವಾಗಿ ಜರುಗಿತು.

ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೈರನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜುನಿಚಿ ಮುನೆಜಾವಾ ಅವರು, ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯಡಿ ಪ್ರತಿವರ್ಷ ವಿಕಲಚೇತನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಮಾಜದಲ್ಲಿ ಸಮಾನ ಅವಕಾಶಗಳನ್ನು ಒದಗಿಸಲು ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿದ್ದು, ವಿಕಲಚೇತನರ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಸಮರ್ಥನಂ ಸಂಸ್ಥೆ ಮಾಡುತ್ತಿರುವ ಸೇವೆಯನ್ನು ಪ್ರಶಂಸಿಸಿದರು.

ಸೈರನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕರಾದ ಶ್ರೀ ಪದ್ಮನಾಭ ಅವರು ಮಾತನಾಡಿ, ವಿಕಲಚೇತನರು ವಿಶೇಷ ಸಾಮರ್ಥ್ಯ ಹೊಂದಿದವರು. ಅವರು ತಮ್ಮ ದೃಢಸಂಕಲ್ಪ ಮತ್ತು ಪರಿಶ್ರಮದಿಂದ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಪ್ಯಾರಾ ಒಲಂಪಿಕ್ಸ್ ಮುಂತಾದ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಮ್ಮ ದೇಶದ ವಿಕಲಚೇತನ ಕ್ರೀಡಾಪಟುಗಳು ಹಲವು ಪದಕಗಳನ್ನು ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದಿರುವುದು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಹೇಳಿದರು.
ಸೈರನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಾರ್ಯದರ್ಶಿಯಾದ ಸುರಭಿ ಶರ್ಮಾ ಅವರು ಮಾತನಾಡಿ, ವಿಕಲಚೇತನರು ಅಪಾರ ಪ್ರತಿಭೆ ಮತ್ತು ಸಾಮರ್ಥ್ಯ ಹೊಂದಿರುವವರು. ಅವರಿಗೆ ಸೂಕ್ತ ಅವಕಾಶಗಳು ದೊರೆತಲ್ಲಿ ಅವರು ಸಮಾಜದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಮರ್ಥನಂ ಅಂಗವಿಕಲರ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಶಿವರಾಮು ದೇಶಪಾಂಡೆ ಅವರು ಸಮರ್ಥನಂ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಸಂಸ್ಥೆಯು ವಿಕಲಚೇತನರ ಶಿಕ್ಷಣ, ಪುನರ್ವಸತಿ, ಉದ್ಯೋಗಾವಕಾಶ ಮತ್ತು ಸಬಲೀಕರಣಕ್ಕಾಗಿ ದೇಶದ ವಿವಿಧ ಭಾಗಗಳಲ್ಲಿ ಹಲವು ಯೋಜನೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿದ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಗತ್ಯ ಸಹಾಯಕ ಸಾಧನಗಳು, ಎಲೆಕ್ಟ್ರಿಕಲ್ ವೀಲ್‌ಚೇರ್‌ಗಳು ಹಾಗೂ ಶೈಕ್ಷಣಿಕ ಕಿಟ್‌ಗಳನ್ನು CSR ಯೋಜನೆಯಡಿ ವಿತರಿಸಲಾಯಿತು.
ಸುನಧಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಾಯಿತು. ಈ ಸಂದರ್ಭದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು, ಸೈರನ್ ಕಂಪನಿಯ ಚಂದನ, ಉನ್ನತ ಶಿಕ್ಷಣ ವಿಭಾಗದ ಸಹಾಯಕ ವ್ಯವಸ್ಥಾಪಕರಾದ ರಕ್ಷಾ ಹಾಗೂ ಸಂಸ್ಥೆಯ ಮಹಾಂತೇಶ್, ಆರ್. ಸುಬ್ರಮಣಿ, ಚೈತ್ರಕುಮಾರಿ, ಲತಾ, ಭ್ರಮಾರಂಭ, ಪದ್ಮ, ಬೃಂದಾಬಾಯಿ, ವಿದ್ಯಾವತಿ, ಸ್ಪರ್ಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





