
ಕಲಬುರಗಿ, ಮಾ.28: ಜಗತ್ತು ಇಷ್ಟು ಮುಂದುವರೆದಿದ್ದರು ಈ ವರದಕ್ಷಿಣೆ ಎಂಬ ಸಾಮಾಜಿಕ ಕೆಟ್ಟ ಪದ್ಧತಿ ಮತ್ತೆ ಒಬ್ಬ ಮಹಿಳೆಯ ಜೀವ ಕಸಿದುಕೊಂಡ ಭಯಂಕರ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳ್ಳೂರಗಿ ಸಮೀಪ ಬೆಳಕಿಗೆ ಬಂದಿದೆ. ಸಯಾಲಿ ಜಾಧವ್ ಎಂಬ ಯುವತಿಯನ್ನು ಹ* ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ಪತಿ ಅಕ್ಷಯ್ ಜಾಧವ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮಾಹಿತಿ ನೀಡಿದಂತೆ, ಈ ಪ್ರಕರಣದಲ್ಲಿ ಪತಿ ಅಕ್ಷಯ್ ಜೊತೆಗೆ ಆತನ ತಂದೆ ತಾಯಿಯೂ ಭಾಗಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಇವರಿಬ್ಬರ ಪ್ರೇಮ ವಿವಾಹದಿಂದ ದುರಂತ ಅಂತ್ಯ
ಮೃತ ಸಯಾಲಿ ಮತ್ತು ಅಕ್ಷಯ್ 2022ರಲ್ಲಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಆರಂಭದಲ್ಲಿ ಎಲ್ಲವೂ ಸರಾಗವಾಗಿದ್ದರೂ, ಮದುವೆಯಾದ ಕೆಲವೇ ದಿನಗಳಲ್ಲಿ ಸಂಬಂಧದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭವಾಗಿತ್ತು. ಆರೋಪಗಳ ಪ್ರಕಾರ, ಅಕ್ಷಯ್ ಮತ್ತು ಆತನ ಪೋಷಕರು ಸಯಾಲಿಗೆ ವರದಕ್ಷಿಣೆಗಾಗಿ ನಿರಂತರ ಒತ್ತಡ ಹಾಕುತ್ತಿದ್ದರು.
ತವರು ಮನೆಯಿಂದ ಹಣ ತರಬೇಕೆಂದು ಒತ್ತಾಯಿಸಿ, ಆಕೆಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಸಯಾಲಿ ಈ ಒತ್ತಡಕ್ಕೆ ಮಣಿಯದಿದ್ದಾಗ, ಆಕೆಯನ್ನು ದಾರಿ ಮಧ್ಯೆ ತೆಗೆಯುವ ಕ್ರೂರ ಸಂಚು ರೂಪಿಸಲಾಗಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ದೇವರ ದರ್ಶನದ ನೆಪದಲ್ಲಿ ಹತ್ಯೆ
ಘಟನೆಯ ದಿನ, ಅಕ್ಷಯ್ ತನ್ನ ಪತ್ನಿಯನ್ನು ದತ್ತಾತ್ರೇಯ ದರ್ಶನಕ್ಕೆಂದು ಗಾಣಗಾಪುರಕ್ಕೆ ಕರೆದುಕೊಂಡು ಹೋಗಿದ್ದಾನೆ. ಭಕ್ತಿಯ ನೆಪದಲ್ಲಿ ಆರಂಭವಾದ ಈ ಪ್ರಯಾಣ, ಮಧ್ಯದಲ್ಲೇ ಹಿಂಸಾತ್ಮಕ ತಿರುವು ಪಡೆದಿದೆ.
ಇವರು ಪ್ರಯಾಣದ ವೇಳೆ ಕಾರಿನಲ್ಲೇ ವರದಕ್ಷಿಣೆ ವಿಚಾರವಾಗಿ ಇಬ್ಬರ ನಡುವೆ ಜಗಳ ವಾಗ್ವಾದ ಉಂಟಾಗಿದೆ. ಈ ಜಗಳ ತೀವ್ರಗೊಂಡು, ಕೋಪದ ಆವೇಶದಲ್ಲಿ ಅಕ್ಷಯ್ ತನ್ನ ಪತ್ನಿ ಸಯಾಲಿಯನ್ನು ಬರ್ಬರವಾಗಿ ಹ* ಮಾಡಿದ ಆರೋಪ ಕೇಳಿಬಂದಿದೆ. ಘಟನೆ ಬಳಿಕ ಅದನ್ನು ಮರೆಮಾಚಲು ಯತ್ನಿಸಿದರೂ, ಮೃತಳ ಕುಟುಂಬಸ್ಥರ ಅನುಮಾನದಿಂದ ಪ್ರಕರಣ ಬೆಳಕಿಗೆ ಬಂದಿದೆ. ಸಯಾಲಿ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣವೇ ತನಿಖೆ ಕೈಗೊಳ್ಳಲಾಯಿತು. ವಿಚಾರಣೆ ವೇಳೆ ಸತ್ಯ ಹೊರಬಂದ ಹಿನ್ನೆಲೆಯಲ್ಲಿ, ಪತಿ ಅಕ್ಷಯ್ ಜಾಧವ್ ಹಾಗೂ ಆತನ ತಂದೆ-ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಘಟನೆ ವರದಕ್ಷಿಣೆ ಕಿರುಕುಳವೇ ಈ ಹ*ಗೆ ಪ್ರಮುಖ ಕಾರಣ ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಘಟನೆ ಮತ್ತೊಮ್ಮೆ ವರದಕ್ಷಿಣೆ ಎಂಬ ದುಷ್ಪ್ರವೃತ್ತಿ ಎಷ್ಟು ಭೀಕರ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ನೆನಪಿಸುತ್ತದೆ. ಪ್ರೀತಿಯಿಂದ ಆರಂಭವಾದ ಸಂಬಂಧವೂ, ಹಣದ ಆಸೆಯಿಂದ ಹಿಂಸೆಗೆ ತಿರುಗಬಹುದು ಎಂಬುದು ಈ ಪ್ರಕರಣದ ಕಹಿ ಸತ್ಯ.
ಮಹಿಳೆಯರ ಮೇಲೆ ನಡೆಯುವ ಇಂತಹ ಕಿರುಕುಳ ಮತ್ತು ಹಿಂಸೆಯನ್ನು ತಡೆಯಲು ಕಾನೂನುಗಳಿದ್ದರೂ, ಸಮಾಜದ ಮನೋಭಾವ ಬದಲಾವಣೆ ಅಗತ್ಯ ಎಂಬ ಮಾತು ಮತ್ತೆ ಕೇಳಿಬರುತ್ತಿದೆ. “ಪ್ರೀತಿ”ಯಿಂದ ಆರಂಭವಾದ ಈ ಸಂಬಂಧ, “ಲೋಭ”ದಿಂದ ಕೊನೆಗೊಂಡ ದುರಂತ ಕಥೆಯಾಗಿದ್ದು, ವರದಕ್ಷಿಣೆ ವಿರುದ್ಧ ಕಠಿಣ ಕ್ರಮಗಳ ಅಗತ್ಯತೆಯನ್ನು ಮತ್ತೊಮ್ಮೆ ಹೈಲೈಟ್ ಮಾಡಿದೆ.





