HOMENews

₹17 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ – ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರ ಬಂಧನ

 

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಾದಕವಸ್ತುಗಳ ವಿರುದ್ಧ ನಗರ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದ್ದು, ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಒಟ್ಟು ಸುಮಾರು ₹17 ಕೋಟಿ ಮೌಲ್ಯದ ವಿವಿಧ ಮಾದಕವಸ್ತುಗಳನ್ನು ಜಪ್ತಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ನಗರದಲ್ಲಿ ಸಂಘಟಿತ ಜಾಲದ ಮೂಲಕ ದುಬಾರಿ ಬೆಲೆಯ ಮಾದಕವಸ್ತುಗಳನ್ನು ತರಿಸಿ ಪಾರ್ಟಿಗಳು ಹಾಗೂ ಇತರ ಕಡೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಆರೋಪಿಗಳಿಂದ ಸಾವಿರಾರು ಎಲ್‌ಎಸ್‌ಡಿ ಸ್ಟ್ರಿಪ್ಸ್‌, ಹೈಡ್ರೋಗಾಂಜಾ, ಚರಸ್ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೊದಲ ಪ್ರಕರಣದಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅಶ್ವಿನ್ (27) ಹಾಗೂ ಮೊಬಿನಾ (25) ಎಂಬ ಇಬ್ಬರನ್ನು ಬಂಧಿಸಲಾಗಿದೆ. ಸಿಸಿಬಿ ಡಿಸಿಪಿ-2 ರಾಜ ಇಮಾಮ್ ಖಾಸಿಮ್ ಮತ್ತು ಎಸಿಪಿ ಮಹಾನಂದ್ ನೇತೃತ್ವದ ನಾರ್ಕೋಟಿಕ್ಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಆರೋಪಿಗಳು ಡ್ರಗ್ಸ್ ಮಾರಾಟವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದು, ಥೈಲ್ಯಾಂಡ್‌ನಲ್ಲಿರುವ ವಿನ್ಸೆಂಟ್ ಎಂಬ ವ್ಯಕ್ತಿಯಿಂದ ಮಾದಕವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ವಿನ್ಸೆಂಟ್ ನೀಡಿದ ಸೂಚನೆಗಳ ಪ್ರಕಾರ ನಗರದ ಬಾಗಲೂರು ಪ್ರದೇಶದ ಫ್ಲ್ಯಾಟ್‌ನಲ್ಲಿ ಮಾದಕವಸ್ತುಗಳನ್ನು ಸಂಗ್ರಹಿಸಿ ಬೇಡಿಕೆ ಬಂದಾಗ ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ದಾಳಿಯಲ್ಲಿ 8,335 ಎಲ್‌ಎಸ್‌ಡಿ ಸ್ಟ್ರಿಪ್ಸ್‌, ಸುಮಾರು 5 ಕೆ.ಜಿ. ಹೈಡ್ರೋಗಾಂಜಾ ಮತ್ತು 534 ಗ್ರಾಂ ಚರಸ್ ಪತ್ತೆಯಾಗಿದೆ. ಈ ಮಾದಕವಸ್ತುಗಳ ಒಟ್ಟು ಮೌಲ್ಯ ಕೋಟ್ಯಂತರ ರೂಪಾಯಿಗಳಾಗಿದ್ದು, ಇತ್ತೀಚಿನ ದಿನಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಲ್‌ಎಸ್‌ಡಿ ಸ್ಟ್ರಿಪ್ಸ್ ವಶಕ್ಕೆ ಪಡೆದಿರುವುದು ಅಪರೂಪವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ಎಲ್‌ಎಸ್‌ಡಿ ಸ್ಟ್ರಿಪ್‌ಗೆ ಸುಮಾರು ₹3,000 ಮೌಲ್ಯವಿದೆ ಎಂದು ಅಂದಾಜಿಸಲಾಗಿದೆ.

ಎರಡನೇ ಪ್ರಕರಣದಲ್ಲಿ ದಂಧೆಕೋರರು ಮಾದಕವಸ್ತುಗಳನ್ನು ಚಾಕಲೇಟ್ ಮತ್ತು ಬಿಸ್ಕತ್ ಪೆಟ್ಟಿಗೆಗಳಲ್ಲಿ ಬಚ್ಚಿಟ್ಟು ಪಾರ್ಸೆಲ್ ಮೂಲಕ ಕಳುಹಿಸುವ ಹೊಸ ತಂತ್ರ ಬಳಸಿರುವುದು ಪತ್ತೆಯಾಗಿದೆ. ವಿದೇಶದಿಂದ ಬೆಂಗಳೂರಿನ ಕೆಂಪೇಗೌಡನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಚೆ ಕಚೇರಿಗೆ ಬಂದಿದ್ದ ಪಾರ್ಸೆಲ್ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.

ಪಾರ್ಸೆಲ್ ತೆರೆದು ಪರಿಶೀಲಿಸಿದಾಗ ಚಾಕಲೇಟ್ ಹಾಗೂ ಬಿಸ್ಕತ್ ಬಾಕ್ಸ್‌ಗಳಲ್ಲಿ ಸುಮಾರು ಒಂದೂವರೆ ಕೆ.ಜಿ. ಹೈಡ್ರೋಗಾಂಜಾವನ್ನು ಬಚ್ಚಿಟ್ಟಿರುವುದು ಪತ್ತೆಯಾಯಿತು. ಈ ಮಾದಕವಸ್ತುಗಳ ಮೌಲ್ಯ ಸುಮಾರು ₹1.5 ಕೋಟಿ ಎಂದು ಅಂದಾಜಿಸಲಾಗಿದೆ. ಈ ಪಾರ್ಸೆಲ್ ಅನ್ನು ಯಾರಿಗೆ ಕಳುಹಿಸಲಾಗಿತ್ತು ಮತ್ತು ಇದರ ಹಿಂದೆ ಯಾರು ಇದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮೂರನೇ ಪ್ರಕರಣದಲ್ಲಿ ವೈಟ್‌ಫೀಲ್ಡ್ ಪೊಲೀಸರು ಲಿಂಗರಾಜ್ ದಾಸ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯು ಕಡಿಮೆ ಬೆಲೆಗೆ ಮಾದಕವಸ್ತುಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ.

ಬಂಧಿತನಿಂದ ಸುಮಾರು ₹55 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಸುಮಾರು 27 ಕೆ.ಜಿ. ಗಾಂಜಾ ಹಾಗೂ 3.2 ಕೆ.ಜಿ. ಹ್ಯಾಸಿಸ್ ಆಯಿಲ್ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಈ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ₹17 ಕೋಟಿ ಮೌಲ್ಯದ ವಿವಿಧ ಮಾದಕವಸ್ತುಗಳನ್ನು ವಶಕ್ಕೆ ಪಡೆದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ವಿದೇಶಗಳಿಂದ ಮಾದಕವಸ್ತುಗಳನ್ನು ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಈ ಕುರಿತು ಮಾಹಿತಿ ನೀಡಿ, ಮಾದಕವಸ್ತು ಜಾಲವನ್ನು ಸಂಪೂರ್ಣವಾಗಿ ಪತ್ತೆಹಚ್ಚುವ ಉದ್ದೇಶದಿಂದ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿಗಳು ಯಾರಿಂದ ಮಾದಕವಸ್ತುಗಳನ್ನು ತರಿಸಿಕೊಂಡಿದ್ದರು ಮತ್ತು ಯಾರಿಗೆ ಸರಬರಾಜು ಮಾಡಲು ಮುಂದಾಗಿದ್ದರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ಮಾದಕವಸ್ತು ಮಾರಾಟ ಮತ್ತು ಸಾಗಣೆ ವಿರುದ್ಧ ಕಠಿಣ ಕ್ರಮ ಮುಂದುವರಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Leave a Reply