
ಛತ್ತೀಸ್‌ಗಢ, ಮಾ.4: ಹೋಳಿ ಹಬ್ಬದ ರಾತ್ರಿ ಕುಡಿದ ಮತ್ತಿನಲ್ಲಿ ಉಂಟಾದ ಕೌಟುಂಬಿಕ ಕಲಹ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಛತ್ತೀಸ್‌ಗಢದ ಅಂಬಿಕಾಪುರ ಪ್ರದೇಶದಲ್ಲಿ ನಡೆದಿದೆ. ಮಗನೊಬ್ಬ ತನ್ನ ತಂದೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿ ಬಳಿಕ ಶವವನ್ನು ಮನೆಯ ಪಕ್ಕದ ನೀರಿನ ಟ್ಯಾಂಕ್‌ಗೆ ಎಸೆದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೃತರನ್ನು ಪರಾಸ್ ಕರ್ಕೆಟ್ಟಾ ಎಂದು ಗುರುತಿಸಲಾಗಿದ್ದು, ಅವರ ಮಗ ಪ್ರಭಾತ್ ಅಲಿಯಾಸ್ ಲೆಡಾ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಂದೆ ಮತ್ತು ಮಗ ಇಬ್ಬರೂ ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದು, ಅವರ ಮನೆಗಳು ಕೆಲವೇ ಮೀಟರ್ ಅಂತರದಲ್ಲಿದ್ದವು. ಹೋಳಿ ಹಬ್ಬದ ಅಂಗವಾಗಿ ನಡೆದ ಹೋಳಿಕಾ ದಹನ್ ಕಾರ್ಯಕ್ರಮದ ನಂತರ ಪ್ರಭಾತ್ ಮದ್ಯಪಾನ ಮಾಡಿಕೊಂಡು ರಾತ್ರಿ ಸುಮಾರು 11 ಗಂಟೆ ವೇಳೆಗೆ ಮನೆಗೆ ಬಂದಿದ್ದಾನೆ.
ಈ ವೇಳೆ ಕುಡಿದು ಬಂದ ಮಗನನ್ನು ತಂದೆ ಪರಾಸ್ ಕರ್ಕೆಟ್ಟಾ ಗದರಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಮಾತಿನ ಚಕಮಕಿ ತೀವ್ರಗೊಂಡು ಜಗಳಕ್ಕೆ ತಿರುಗಿದ ವೇಳೆ ಕೋಪಗೊಂಡ ಪ್ರಭಾತ್ ಮನೆಯೊಳಗಿದ್ದ ಕೊಡಲಿಯನ್ನು ತೆಗೆದುಕೊಂಡು ತಂದೆಯ ಮೇಲೆ ದಾಳಿ ನಡೆಸಿದ್ದಾನೆ. ತಂದೆಯ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ಹಲವು ಬಾರಿ ಹೊಡೆದ ಪರಿಣಾಮ ಪರಾಸ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ ನಂತರ ಭಯಗೊಂಡ ಪ್ರಭಾತ್ ತನ್ನ ಕೃತ್ಯವನ್ನು ಮರೆಮಾಚಲು ಯತ್ನಿಸಿದ್ದಾನೆ. ತಂದೆಯ ಶವವನ್ನು ಎಳೆದುಕೊಂಡು ಹೋಗಿ ಮನೆಯ ಪಕ್ಕದಲ್ಲಿದ್ದ ಸಣ್ಣ ನೀರಿನ ಟ್ಯಾಂಕ್‌ಗೆ ಎಸೆದಿದ್ದಾನೆ. ಬಳಿಕ ಯಾವುದೇ ಆತಂಕ ತೋರಿಸದೇ ಸಮೀಪದ ಅಂಗಡಿಗೆ ತೆರಳಿ ಬಿರಿಯಾನಿ ಖರೀದಿಸಿ ಮನೆಗೆ ಬಂದು ಊಟ ಮಾಡಿ ಕಂಬಳಿ ಹೊದ್ದು ಮಲಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಬೆಳಗಿನ ಜಾವ ಸ್ಥಳೀಯರಿಗೆ ಅನುಮಾನ ಉಂಟಾಗಿ ಮಾಹಿತಿ ಪೊಲೀಸರಿಗೆ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ತನಿಖೆ ವೇಳೆ ಪ್ರಭಾತ್‌ನ ವರ್ತನೆ ಅನುಮಾನಾಸ್ಪದವಾಗಿದ್ದರಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕೋಪದ ಭರದಲ್ಲಿ ತಂದೆಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಘಟನಾ ಸ್ಥಳದಿಂದ ಕೊಡಲಿ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.
ಕುಡಿದ ಮತ್ತಿನಲ್ಲಿ ನಡೆದ ಕ್ಷಣಿಕ ಕೋಪವೇ ಈ ದಾರುಣ ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಅಂಬಿಕಾಪುರ ಪ್ರದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಗ್ರಾಮಸ್ಥರು ಆಘಾತ ವ್ಯಕ್ತಪಡಿಸಿದ್ದಾರೆ.





