HOMENews

ಪರಿಸರ ಸಂರಕ್ಷಿಸದಿದ್ದರೆ ಭೂಮಿಯ ವಿನಾಶ : ಭೇರ್ಯ ರಾಮಕುಮಾರ್ ಎಚ್ಚರಿಕೆ

ಕೆ.ಆರ್.ನಗರ:- ಭೂಮಿ ಮನುಷ್ಯನ ಏಕೈಕ ಆವಾಸ ತಾಣ. ಪರಿಸರ ನಾಶ ಮಾಡುತ್ತಾ ಹೋದರೆ ಭೂಮಿಯ ಜೊತೆಗೆ ಮಾನವ ಸಂತತಿಯೂ ವಿನಾಶ ಆಗುವುದು ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಪರಿಸರ ಚಿಂತಕ ಡಾ. ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆ ತಿಪ್ಪುರು ಗ್ರಾಮದ ಸರಕಾರಿ ಪ್ರೌಢ ಶಾಲೆಯ ಪರಿಸರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪರಿಸರ ಸಂರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರತಿ ಕ್ಷಣವೂ ಪರಿಸರ ನಾಶ ಮಾಡುತ್ತಿದ್ದಾನೆ. ಕಾಡಿನಲ್ಲಿ ಆಹಾರ, ನೀರು ದೊರೆಯದೆ ಆನೆ, ಚಿರತೆ, ಹುಲಿ ಮೊದಲಾದ ಕಾಡು ಪ್ರಾಣಿಗಳು ಆಹಾರಅರಸಿ ಗ್ರಾಮಗಳಿಗೆ ನುಗ್ಗುತ್ತಿವೆ. ಹಲವು ಕಡೆ ಕಾಡು ಪ್ರಾಣಿಗಳ ಆಕ್ರೋಶಕ್ಕೆ ಮನುಷ್ಯರ ದುರಂತ ಸಾವುಗಳು ಆಗುತ್ತಿವೆ. ಪರಿಸರ ವಿನಾಶದ ಕಾರಣದಿಂದಗಿ ಮನುಷ್ಯರಲ್ಲಿ ರೋಗ ನಿರೋದಕ ಶಕ್ತಿ ಕಡಿಮೆ ಆಗುತ್ತಿದೆ. ಜನರು ಶ್ವಾಸ ಕೋಶದ ಕಾಯಿಲೆ, ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಾನವನ ಬದುಕು ದುರಂತದತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮನುಷ್ಯ ಕೃಷಿ ಉದ್ದೇಶಕ್ಕಾಗಿ, ಮನೆ ನಿರ್ಮಾಣದ ಸಾಮಗ್ರಿಗಳಿಗಾಗಿ, ಉರುವಲಿಗಾಗಿ, ಅಭಿವೃದ್ಧಿಯ ಹೆಸರಿನಲ್ಲಿ ನಿರಂತರ ವಾಗಿ ಪರಿಸರ ನಾಶ ಮಾಡುತ್ತಿದ್ದಾನೆ. ಇದರಿಂದಾಗಿ ಪರಿಶುದ್ಧ ಗಾಳಿ, ನೀರು, ಪರಿಸರ ಕನಸಾಗಿದೆ. ಕರೋನ, ಮೆದಳು ತಿನ್ನುವ ಪರವಲಂಬಿ ಸೂಕ್ಷ್ಮ ಜೀವಿಗಳಂತಹ ಕಾಯಿಲೆಗಳು ಮಾನವ ಜನಾಂಗಕ್ಕೆ ವಿನಾಶಕಾರಿಯಾಗಿ ಪರಿಣಮಿಸಿವೆ. ನಮ್ಮ ವಿಕೃತಿಯಿಂದ ಭೂಮಿ ವಿನಾಶಗೊಳ್ಳುವ ಮೊದಲು ಮಾನವ ಜನಾಂಗ ಎಚ್ಚೆತ್ತು ಕೊಳ್ಳಬೇಕಿದೆ
ಎಂದವರು ಕಿವಿಮಾತು ನುಡಿದರು.

ಪರಿಸರ ವಿನಾಶ, ಕಾರ್ಖಾನೆಗಳ ರಾಸಾಯನಿಕ ಗಳ ಹೊಗೆ, ಹವಾಮಾನ ವೈಫರೀತ್ಯಗಳಿಂದ ಸೂರ್ಯನ ಶಾಖದಿಂದ ಭೂಮಿಯನ್ನು ರಕ್ಷಿಸುತ್ತಿರುವ ಒಜೋನ್ ಪದರ ನಾಶದತ್ತ ಸಾಗಿದೆ. ಒಂದು ವೇಳೆ ಒಜೋನ್ ಪದರ ಛಿದ್ರಗೊಂಡರೆ ವಿಪರೀತ ಶಾಖದಿಂದ ಭೂಮಿ ವಿನಾಶ ಉಂಟಾಗುವುದು ಖಚಿತ..ಈಗಲೂ ಕಾಲ ಮಿಂಚಿಲ್ಲ. ಮನುಷ್ಯ ಎಚ್ಚೆತ್ತು ಕೊಳ್ಳಬೇಕು. ಪರಿಸರ ನಾಶ ನಿಲ್ಲಿಸಬೇಕು ಎಂದವರು ನುಡಿದರು.

ಪ್ರತಿಯೊಬ್ಬರು ತಮ್ಮ ಜನ್ಮದಿನದಂದು, ತಮ್ಮ ತಂದೆ ತಾಯಿಯರ ಜನ್ಮದಿನದಂದು, ತಮ್ಮ ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿ ನೆಡಬೇಕು.ತಮ್ಮ ಊರಿನ ಜಾತ್ರೇಗೆ, ಮನೆ ಹಬ್ಬಗಳಿಗೆ ಬರುವ ನೆಂಟರುಗಳಿಗೆ
ಸಸಿಗಳನ್ನು ನೀಡಬೇಕು.. ಪರಿಸರ ಸಂರಕ್ಷಣೆಯನ್ನು ತಮ್ಮ ಕೌಟುಂಬಿಕ ಕಾರ್ಯಕ್ರಮವಾಗಿ ಮಾಡಬೇಕು. ಆಗ ಮಾತ್ರ ಪರಿಸರ ಸಂರಕ್ಷಣೆ, ಭೂಮಿಯ ಉಳಿವು ಸಾಧ್ಯ ಎಂದು ಭೇರ್ಯ ರಾಮಕುಮಾರ್ ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿ ಪ್ರತಿಜ್ಞೆಯನ್ನು ಭೇರ್ಯ ರಾಮಕುಮಾರ್ ಭೋದಿಸಿದರು. ಪರಿಸರ ಜಾಗೃತಿ ಘೋಷಣೆಗಳನ್ನು ಮಕ್ಕಳು ಮಾಡಿದರು.

ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಕೆ. ಎಸ್. ಸುಜಾತಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಇನ್ನು ಮುಂದೆ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಹುಟ್ಟು ಹಬ್ಬದಂದು ಶಾಲೆಯ ಆವರಣದಲ್ಲಿ ಕಡ್ಡಾಯವಾಗಿ ಒಂದೊಂದು ಸಸಿ ನೆಡಬೇಕು.ಆ ಮೂಲಕ ಪರಿಸರ ಸಂರಕ್ಷಣಾ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.. ವಿಜ್ಞಾನ ಶಿಕ್ಷಕರಾದ ಶ್ರೀಮತಿ ಶಾಂತ ಕುಮಾರಿ ಸ್ವಾಗತಿಸಿ, ಪ್ರಸ್ತಾ ವಿಕ ಭಾಷಣ ಮಾಡಿದರು.ಶಿಕ್ಷಕರಾದ ಮಮತಾ, ಶೋಭಾ, ರಾಘವೇಂದ್ರ, ಕಾಳ ಸ್ವಾಮಿ, ತಿಮ್ಮಪ್ಪ, ಇವರುಗಳು, ಪರಿಸರ ಸಂಘದ ಪದಾಧಿಕಾರಿಗಳಾದ ಮನೋಜ್, ನಿರಂಜನ್, ಸೃಜನ್, ಗೌತಮ್, ಸುಕ್ಷಿತ್, ಜೀವನ್ ಗೌಡ, ಧನುಷ್, ಅಶ್ವಿನಿ, ವರ್ಷಿಣಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾಹಿತಿ, ಪರಿಸರ ಚಿಂತಕ ಭೇರ್ಯ ರಾಮ ಕುಮಾರ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯ್ತು. ಜೊತೆಗೆ ಅವರಿಂದ ಶಾಲಾ ಅವರಣದಲ್ಲಿ ಸಸಿ ನೆಡಿಸಲಾಯ್ತು.

Leave a Reply