ಆರ್ಥಿಕವಾಗಿ ಸದೃಢರಾಗಿ ಸಮಾಜದಲ್ಲಿ ಗೌರವದಿಂದ ಜೀವನ ನಡೆಸಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ: ಕೆ. ಹರೀಶ್ ಗೌಡ

ಮೈಸೂರು,ಫೆ.01:- ಆರ್ಥಿಕವಾಗಿ ಸದೃಢರಾಗಿ ಸಮಾಜದಲ್ಲಿ ಗೌರವದಿಂದ ಜೀವನ ನಡೆಸಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಹೆಣ್ಣು ಮಕ್ಕಳು ಶಿಕ್ಷಣ ಪಡೆದುಕೊಳ್ಳುವಂತೆ ಪೋಷಕರು ನೋಡಿ ಕೊಳ್ಳಬೇಕು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ , ಕನ್ನಡ ಮತ್ತು ಸಂಸ್ಕೃತ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ವಚನಗಳು ಜೀವನದಲ್ಲಿ ನೈತಿಕ ಮೌಲ್ಯದ ಶಿಕ್ಷಣ, ಹೆಣ್ಣು ಮಕ್ಕಳು, ಹಿರಿಯರನ್ನು ಗೌರವಿಸಬೇಕು ಎಂಬ ಪಾಠವನ್ನು ಕಲಿಸುವುದರ ಜೊತೆಗೆ ಜೀವನ ಕಟ್ಟಿಕೊಡುತ್ತದೆ ಎಂದರು.
ಪ್ರತಿದಿನ ಮಾಚಿದೇವರು ಸೇರಿದಂತೆ ಎಲ್ಲಾ ಶ್ರೇಷ್ಠ ವಚನಕಾರರನ್ನು ಸ್ಮರಿಸಬೇಕು. ಅವರ ವಚನಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳ ಮೂಲಕ ಸಮಾಜದ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಡಿವಾಳ ಸಮುದಾಯದವರು ಸಲ್ಲಿಸಿರುವ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ಶೇಷಾದ್ರಿ ಪುರಂ ಸರ್ಕಲ್ ಗೆ ಮಡಿವಾಳ ಮಾಚಯ್ಯ ಹೆಸರು ಇಡಲು ಚರ್ಚೆ ನಡೆಸುತ್ತೇನೆ ಎಂದರು.
ವಿಧಾನ ಪರಿಷತ್ ಶಾಸಕ ಡಾ: ಡಿ ತಿಮ್ಮಯ್ಯ ಅವರು ಮಾತನಾಡಿ 12 ನೇ ಶತಮಾನದಲ್ಲಿ ಬಸವಣ್ಣ ಅವರ ಅನುಭವ ಮಂಟಪದಲ್ಲಿ ಯಾವುದೇ ಜಾತಿ, ಮೇಲು ಕೀಳು ಎಂಬ ಬೇಧ ಭಾವವಿಲ್ಲದೆ ಎಲ್ಲಾ ವರ್ಗದ ವಚನಕಾರರು ಒಗ್ಗೂಡಿ ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸುತ್ತಿದ್ದರು ಹಾಗೂ ಚರ್ಚೆಗಳನ್ನು ನಡೆಸುತ್ತಿದ್ದರು ಎಂದರು.
ಅನುಭವ ಮಂಟಪದಲ್ಲಿ ಮಡಿವಾಳ ಮಾಚಯ್ಯ,ಅಂಬಿಗರ ಚೌಡಯ್ಯ, ಹರಳಯ್ಯ,ದೋಹಾರ ಕಕ್ಕಯ್ಯ ಸೇರಿದಂತೆ ಎಲ್ಲಾ ವಚನಕಾರರು ದುಡಿಮೆಯ ದೇವರು, ಕಾಯಕದ ಮೂಲಕ ಕೈಲಾಸ ನೋಡಿ ಹಾಗೂ ಪ್ರತಿಯೊಂದು ಕಾಯಕವನ್ನು ಗೌರವಿಸಿ ಸಮ ಸಮಾಜ ನಿರ್ಮಾಣ ಮಾಡಿ ಎಂಬ ಸಂದೇಶವನ್ನು ವಚನಗಳ ಮೂಲಕ ತಿಳಿಸಿದರು ಎಂದರು.

ಕೊಳೆ ಬಟ್ಟೆ ತೊಳೆದು ಶುದ್ಧ ಮೂಡುವಂತೆ ಮನಸ್ಸಿನಲ್ಲಿ ಮೇಲು ಕೀಳು ಎಂಬ ಕಲ್ಮಶವಿದ್ದರೆ ಜನಸಮಾನ್ಯರು ಮೊದಲು ಅದನ್ನು ತೊಳದು ಶುದ್ಧ ಮಾಡಿಕೊಳ್ಳವೇಕು. ಜನರು ತನು ಮನ ವನ್ನು ಶುದ್ಧ ಮಾಡಿಕೊಳ್ಳಬೇಕು ಎಲ್ಲರು ವಿದ್ಯಾವಂತರಾಗ ಬೇಕು ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರು ಮಾತನಾಡಿ ಜಯಂತಿಯನ್ನು ಮಾಡುವ ಶ್ರೇಷ್ಠರ ತತ್ವ ಹಾಗೂ ಆದರ್ಶವನ್ನು ಅನುಸರಿಸಲು. ಜಯಂತಿ ಆಚರಣೆ ಸಂದರ್ಭದಲ್ಲಿ ಮಹಾನ್ ವ್ಯಕ್ತಿಯ ಹುಟ್ಟಿನ ನೆಲೆ ಮತ್ತು ಬದುಕಿನ ಬೆಲೆ ತಿಳಿಸುತ್ತದೆ. ಮಾಚಯ್ಯ ಅವರ ಕಾಯಕ ಮತ್ತು ನಡತೆ ಯಿಂದ ಮಾಚಿದೇವ ಎಂಬ ಹೆಸರು ಪಡೆದುಕೊಂಡರು, ಮಾನವ ಕೂಡ ದೇವರಾಗ ಬಹುದು ಎಂದು ತೋರಿಸಿಕೊಟ್ಟವರು ಮಡಿವಾಳ ಮಾಚಿದೇವರು ಎಂದರು.
ಕಾಯಕ ತತ್ವ, ಭಕ್ತಿಯ ತತ್ವ, ಜ್ಞಾನ ದ ಪ್ರಭುತ್ವ, ಈ ಮೂರು ತತ್ವದ ಮೂಲಕ ವಚನಕಾರರು ಸಮಾಜ ಸುಧಾರಣೆ ಮಾಡಲು ಮುಂದಾದರು ಎಂದು ಹೇಳಿದರು.
ಶರಣ ಪ್ರವಾಚನಕಾರದಾರ ಯಡಿಯೂರು ಮೂಡಲಗಿರಿ ಅವರು ಮಾತನಾಡಿ ಮಡಿವಾಳ ಮಾಚಯ್ಯ ಅವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರ ಇಪ್ಪರಿಗೆಯಲ್ಲಿ ಜನಿಸಿದರು.ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಅವರು ಬಸವಣ್ಣ ಅವರನ್ನು ಅನುಸರಿಸಿದರು ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷರಾದ ಅರುಣ್, ಗಣ್ಯರಾದ ಮಹಮದ್ ರಫಿ, ಮಂಜುನಾಥ್, ಚನ್ನಕೇಶವ ,ಬಿ ಜಿ ಕೇಶವ, ರವಿನಂದನ್,ಮಂಜು ಶೆಟ್ಟಿ, ಸಿದ್ದಪಾಜಿ ಇನ್ನಿತರೆ ಮುಖಂಡರು ಉಪಸ್ಥಿತರಿದ್ದರು.





