HOMENews

ಕೆಎಸ್‌ಐಸಿ ಕಾರ್ಖಾನೆ ಉಳಿವಿಗಾಗಿ ರೈತರ ಬಾರ್ಕೋಲ್ ಚಳುವಳಿ: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಮೈಸೂರು, ಮಾ.05: ಟಿ. ನರಸೀಪುರದಲ್ಲಿರುವ ಕೆಎಸ್‌ಐಸಿ (ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಷನ್) ಕಾರ್ಖಾನೆಯ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಬಳಸುವ ಯೋಜನೆ ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರು ಬಾರ್ಕೋಲ್ ಚಳುವಳಿ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. “ಉಳಿಸಿ ಉಳಿಸಿ ಕೆಎಸ್‌ಐಸಿ ಉಳಿಸಿ”, “ರಕ್ಷಿಸಿ ರಕ್ಷಿಸಿ ರೇಷ್ಮೆ ಬೆಳೆಗಾರರನ್ನು ರಕ್ಷಿಸಿ” ಎಂಬ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಿದರು. ಚುನಾಯಿತ ಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಸರ್ಕಾರದ ಕ್ರಮವನ್ನು ಖಂಡಿಸಿದರು.

ಪ್ರತಿಭಟನೆಗೆ ನೇತೃತ್ವ ವಹಿಸಿ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು, ಟಿ. ನರಸೀಪುರದ ಕೆಎಸ್‌ಐಸಿ ಕಾರ್ಖಾನೆಗೆ ಶತಮಾನಕ್ಕೂ ಅಧಿಕ ಇತಿಹಾಸವಿದೆ ಎಂದು ಹೇಳಿದರು. 1912ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಕಾರ್ಖಾನೆಯನ್ನು ಸ್ಥಾಪಿಸಿದ್ದರು. ಈ ಕಾರ್ಖಾನೆಯ ಉದ್ದೇಶ ಈ ಭಾಗದ ರೈತರ ಹಿತ ರಕ್ಷಣೆ, ಉದ್ಯೋಗ ಸೃಷ್ಟಿ ಹಾಗೂ ಮೈಸೂರು ರೇಷ್ಮೆ ಪರಂಪರೆಯನ್ನು ಉಳಿಸುವುದಾಗಿತ್ತು ಎಂದು ಅವರು ತಿಳಿಸಿದರು.

ಈ ಕಾರ್ಖಾನೆ ರೈತರಿಗೆ ಆರ್ಥಿಕ ಬಲ ನೀಡುವ ಪ್ರಮುಖ ಕೇಂದ್ರವಾಗಿದ್ದು, ಹಲವು ಪೀಳಿಗೆಗಳಿಂದ ರೈತರು ರೇಷ್ಮೆ ಬೆಳೆದು ತಮ್ಮ ಜೀವನ ನಡೆಸುತ್ತಿದ್ದಾರೆ. ಆದರೆ ಇಂತಹ ಐತಿಹಾಸಿಕ ಮತ್ತು ರೈತರ ಜೀವನಾಧಾರವಾಗಿರುವ ಕಾರ್ಖಾನೆಯ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಬಳಸಲು ಮುಂದಾಗಿರುವುದು ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕ್ರಮವಾಗಿದೆ ಎಂದು ಅವರು ಆರೋಪಿಸಿದರು.

ಮೈಸೂರು ಸಿಲ್ಕ್ ಎಂಬುದು ಕೇವಲ ಒಂದು ಉತ್ಪನ್ನವಲ್ಲ, ಅದು ನಮ್ಮ ನಾಡಿನ ಪರಂಪರೆ ಮತ್ತು ಗೌರವದ ಸಂಕೇತವಾಗಿದೆ. ಈ ಪರಂಪರೆಯನ್ನು ಉಳಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಕಾರ್ಖಾನೆಯ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಲು ಮುಂದಾಗಿರುವುದು ಈ ಪರಂಪರೆಯ ಅಳಿವಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸಾವಿರಾರು ಕುಟುಂಬಗಳು ತಲೆಮಾರಿನಿಂದ ರೇಷ್ಮೆ ಬೆಳೆದು ಜೀವನ ಸಾಗಿಸುತ್ತಿವೆ. ರೇಷ್ಮೆ ಬೆಳೆಗಾರರು ತಮ್ಮ ಕುಟುಂಬದ ಅಗತ್ಯಗಳನ್ನು ಈ ಉದ್ಯಮದ ಆದಾಯದಿಂದಲೇ ಪೂರೈಸಿಕೊಂಡಿದ್ದಾರೆ. ಶಿಕ್ಷಣ, ಉದ್ಯೋಗ, ಕುಟುಂಬ ನಿರ್ವಹಣೆ ಸೇರಿದಂತೆ ಅನೇಕ ಅಗತ್ಯಗಳಿಗೆ ಈ ರೇಷ್ಮೆ ಉದ್ಯಮವೇ ಮೂಲವಾಗಿದೆ ಎಂದು ಅವರು ಹೇಳಿದರು.

“ನಮ್ಮ ತಾತಂದಿರು ಸಹ ರೇಷ್ಮೆ ಗೂಡು ಮಾರಾಟ ಮಾಡಿ ಬಂದ ಹಣದಿಂದ ಕುಟುಂಬವನ್ನು ಸಾಗಿಸಿದ್ದಾರೆ. ಅಂಥ ಅನ್ನ ನೀಡಿದ ಕಾರ್ಖಾನೆಯನ್ನು ಮುಚ್ಚಲು ಮುಂದಾಗಿರುವುದು ಸಮಂಜಸವಲ್ಲ” ಎಂದು ಅವರು ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು.

ಸರ್ಕಾರ ಕಾರ್ಖಾನೆಯನ್ನು ಮುಚ್ಚುವ ಬದಲು ಅದನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು. ರಾಜ್ಯ ಬಜೆಟ್‌ನಲ್ಲಿ ಹೆಚ್ಚುವರಿ 100 ಕೋಟಿ ರೂಪಾಯಿ ಅನುದಾನ ನೀಡಿ ಹೊಸ ಯಂತ್ರೋಪಕರಣಗಳನ್ನು ಅಳವಡಿಸಿ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಕೃತಿಯ ವೈವಿಧ್ಯತೆ ಇರುವುದನ್ನೂ ಅವರು ಉಲ್ಲೇಖಿಸಿದರು. ಸುಮಾರು ಹಲವು ಜಾತಿಯ ಪಕ್ಷಿಗಳು ಹಾಗೂ 550ಕ್ಕೂ ಹೆಚ್ಚು ಗಿಡಮರಗಳು ಈ ಪ್ರದೇಶದಲ್ಲಿ ಇದ್ದು, ಕ್ರೀಡಾಂಗಣ ನಿರ್ಮಾಣವಾದರೆ ಈ ಪರಿಸರ ವ್ಯವಸ್ಥೆಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಇನ್ನೂ ಕ್ರೀಡಾ ಇಲಾಖೆಯು ಸುಮಾರು 5 ಎಕರೆ ಜಾಗದಲ್ಲಿ 200 ಮೀಟರ್ ಅಥ್ಲೆಟಿಕ್ಸ್ ಟ್ರ್ಯಾಕ್, ಬ್ಯಾಡ್ಮಿಂಟನ್ ಹಾಗೂ ಕೋ-ಕೋ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಆದರೆ ಈ ಜಾಗವು ಸೂಕ್ತ ಸ್ಥಳವಲ್ಲ ಎಂದು ಅವರು ಹೇಳಿದರು.

ಟಿ. ನರಸೀಪುರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್ ಸಹ ಈ ಪ್ರದೇಶದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಸಾಧ್ಯತೆ ಇದೆ. ಆದ್ದರಿಂದ ಈ ಯೋಜನೆಯಿಂದ ಸಾರ್ವಜನಿಕರಿಗೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿರುವ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟು ಕ್ರೀಡಾಂಗಣ ನಿರ್ಮಾಣಕ್ಕೆ ಪ್ರತ್ಯೇಕ ಸ್ಥಳವನ್ನು ಗುರುತಿಸಬೇಕು ಎಂದು ಅವರು ಆಗ್ರಹಿಸಿದರು.

ಸರ್ಕಾರ ಮತ್ತು ಜಿಲ್ಲಾಡಳಿತ ಈ ವಿಚಾರದಲ್ಲಿ ಹಠಮಾರಿ ಧೋರಣೆ ತೋರಿಸಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾದರೆ ಚಳುವಳಿಯನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು. ಅಗತ್ಯವಿದ್ದರೆ ಟಿ. ನರಸೀಪುರದಿಂದ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸಿ ಜನಜಾಗೃತಿ ಮೂಡಿಸುವ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರತಿಭಟನೆಯ ಬಳಿಕ ರೈತ ಮುಖಂಡರು ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿ, ಕೆಎಸ್‌ಐಸಿ ಕಾರ್ಖಾನೆಯನ್ನು ಉಳಿಸಲು ಹಾಗೂ ರೇಷ್ಮೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ರಾಜ್ಯ ಖಜಾಂಚಿ ಕೆರೆಹುಂಡಿ ರಾಜಣ್ಣ, ರಾಜ್ಯ ಸಂಚಾಲಕ ಎಚ್. ಹನುಮಯ್ಯ, ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಮೈಸೂರು ಜಿಲ್ಲಾಧ್ಯಕ್ಷ ಒಳಗೆರೆ ಗಣೇಶ್, ಎಚ್. ಗುಂಡ್ಲಾ ಚಿದಂಬರ, ಪ್ರಕಾಶ್, ಗಾಂಧಿ, ದೇವಿರಮ್ಮನಳ್ಳಿ ಹುಂಡಿ ಮನು, ಪ್ರಭುಸ್ವಾಮಿ, ಪುಟ್ಟಸ್ವಾಮಿ, ಶ್ರೀಕಂಠ, ಹೊನ್ನೇಗೌಡನಳ್ಳಿ ಮಹೇಶ್, ವೈಟ್ ನವೀನ್, ಹೆಗ್ಗಡಳ್ಳಿ ಮನು, ಮುದ್ದಳ್ಳಿ ಪ್ರಕಾಶ್, ಜಗದೀಶ್ ಪ್ರಸಾದ್, ದಯಾನಂದ, ಗಣೇಶ್, ಕಿಳ್ಳಿಪುರ ಶ್ರೀಕಂಠ, ನರಸಿಮಂಗಲ ನಾಗು, ಚಂದ್ರಶೇಖರ್, ಊರ್ದಳ್ಳಿ ರಾಮಣ್ಣ, ಸ್ಯಾಂಡರಳ್ಳಿ ಬಸವರಾಜು, ನಾಗರಾಜು, ಮಾದನಹಳ್ಳಿ ಶಿವಣ್ಣ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಎಸ್‌ಐಸಿ ಕಾರ್ಖಾನೆ ಉಳಿವಿನ ಕುರಿತು ಸರ್ಕಾರ ಹಾಗೂ ಜಿಲ್ಲಾಡಳಿತ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದು ಗಮನ ಸೆಳೆಯುತ್ತಿದೆ.

Leave a Reply