HOMENews

ರಾಜ್ಯ ಬಜೆಟ್ ಕುರಿತು ರೈತ ಸಂಘಟನೆಗಳ ಒಕ್ಕೂಟದ ಪ್ರತಿಕ್ರಿಯೆ: ರೈತರ ಸಮಸ್ಯೆಗಳಿಗೆ ಸಮಗ್ರ ಪರಿಹಾರ ಕಾಣದ ಬಜೆಟ್ – ಕುರುಬೂರು ಶಾಂತಕುಮಾರ್

ಮೈಸೂರು: ರಾಜ್ಯ ಸರ್ಕಾರ ಮಂಡಿಸಿರುವ ಇತ್ತೀಚಿನ ಬಜೆಟ್ ಕುರಿತು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ರೈತರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಸಮರ್ಪಕ ಯೋಜನೆಗಳು ಕಾಣದಿರುವುದು ನಿರಾಸೆ ತಂದಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳ ಪ್ರಮಾಣ ಗಂಭೀರ ಮಟ್ಟದಲ್ಲಿದ್ದು, ದೇಶದಲ್ಲೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇಂತಹ ದುಸ್ಥಿತಿಯನ್ನು ತಡೆಗಟ್ಟಲು ಸರ್ಕಾರವು ಬಜೆಟ್‌ನಲ್ಲಿ ವಿಶೇಷ ಮತ್ತು ಪರಿಣಾಮಕಾರಿ ಯೋಜನೆಗಳನ್ನು ಘೋಷಿಸಬೇಕಾಗಿತ್ತು. ಆದರೆ, ರೈತರ ಬದುಕಿಗೆ ನೇರವಾಗಿ ಸಹಾಯವಾಗುವ ಹೊಸ ಕಾರ್ಯಕ್ರಮಗಳು ಬಜೆಟ್‌ನಲ್ಲಿ ಕಾಣುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನೂ ಒಂದು ದೊಡ್ಡ ಸಮಸ್ಯೆಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ರೈತರ ಮಕ್ಕಳ ಕೃಷಿ ಕ್ಷೇತ್ರದ ಮೇಲಿನ ಆಸಕ್ತಿ ಕುಗ್ಗುತ್ತಿರುವುದು. ಕೃಷಿಯಲ್ಲಿ ಸ್ಥಿರ ಆದಾಯ ಇಲ್ಲದಿರುವುದರಿಂದ ಯುವಕರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ ಗ್ರಾಮೀಣ ಸಮಾಜದ ರಚನೆಯೇ ಬದಲಾಗುತ್ತಿದೆ. ಹಲವಾರು ರೈತ ಕುಟುಂಬಗಳಲ್ಲಿ ಮದುವೆ ಮಾಡಲು ಹೆಣ್ಣು ಮಕ್ಕಳು ಸಿಗದಿರುವುದು ಸಹ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಶಾಂತಕುಮಾರ್ ಅವರು ಆತಂಕ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರವನ್ನು ಬಲಪಡಿಸಲು ಮತ್ತು ಯುವಕರನ್ನು ಕೃಷಿಯತ್ತ ಆಕರ್ಷಿಸಲು ವಿಶೇಷ ಯೋಜನೆಗಳನ್ನು ರೂಪಿಸಬೇಕಾಗಿತ್ತು. ಆದರೆ ಈ ದಿಕ್ಕಿನಲ್ಲಿ ಬಜೆಟ್‌ನಲ್ಲಿ ಸ್ಪಷ್ಟ ಕ್ರಮಗಳು ಕಾಣುತ್ತಿಲ್ಲ ಎಂದು ಅವರು ಹೇಳಿದರು.

ಆದಾಗ್ಯೂ, ಕೆಲವು ಘೋಷಣೆಗಳು ಸ್ವಾಗತಾರ್ಹವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ತೋಟಗಾರಿಕೆ ಉತ್ಪನ್ನಗಳ ದಾಸ್ತಾನು ಮತ್ತು ಸಂರಕ್ಷಣೆಗೆ ದಾವಣಗೆರೆ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ತಿತಲೀಕರಣ ಘಟಕಗಳನ್ನು ಸ್ಥಾಪಿಸುವ ಯೋಜನೆ ಉತ್ತಮ ಹೆಜ್ಜೆಯಾಗಿದೆ. ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳನ್ನು ಹೆಚ್ಚು ಕಾಲ ಸಂಗ್ರಹಿಸಿ ಉತ್ತಮ ಬೆಲೆಗೆ ಮಾರಾಟ ಮಾಡುವ ಅವಕಾಶ ಸಿಗಲಿದೆ ಎಂದು ಹೇಳಿದರು.

ರೇಷ್ಮೆ ಉದ್ಯಮಕ್ಕೆ ಸರ್ಕಾರ ಒತ್ತು ನೀಡಿರುವುದು ಸಹ ಗಮನಾರ್ಹವಾಗಿದೆ. ರೇಷ್ಮೆ ಗೂಡು ಸಾಗಾಣಿಕೆ ವೆಚ್ಚವನ್ನು 20 ರೂಪಾಯಿಗಳಷ್ಟು ಹೆಚ್ಚಿಸಿರುವುದು ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಕ್ರಮವಾಗಿದೆ ಎಂದು ಅವರು ತಿಳಿಸಿದರು.

ಇದಲ್ಲದೆ, ಶೂನ್ಯ ಬಡ್ಡಿದರದಲ್ಲಿ 38 ಲಕ್ಷ ರೈತರಿಗೆ ಸುಮಾರು 30 ಸಾವಿರ ಕೋಟಿ ರೂಪಾಯಿ ಸಾಲ ನೀಡುವ ಯೋಜನೆ ಕುರಿತು ಮಾತನಾಡಿದ ಅವರು, ಇದು ಹೊಸ ಯೋಜನೆ ಅಲ್ಲ. ಇದುವರೆಗೂ ಜಾರಿಯಲ್ಲಿದ್ದ ಯೋಜನೆಯ ಮುಂದುವರಿಕೆಯಷ್ಟೇ ಆಗಿದ್ದು, ಇದರಲ್ಲಿ ವಿಶೇಷವಾದ ಹೊಸ ಪ್ರಯೋಜನ ಕಾಣುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹಸು ಹಾಗೂ ಎಮ್ಮೆ ಖರೀದಿಸಲು ಶೇಕಡಾ 25 ರಷ್ಟು ಪ್ರೋತ್ಸಾಹಧನ ನೀಡುವ ಯೋಜನೆ ಘೋಷಿಸಿರುವುದು ಸ್ವಲ್ಪ ಮಟ್ಟಿಗೆ ರೈತರಿಗೆ ಸಹಾಯಕವಾಗಬಹುದು ಎಂದು ಹೇಳಿದರು.

ಇನ್ನೊಂದೆಡೆ, 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಲು ಸರ್ಕಾರ ಮುಂದಾಗಿರುವ ಕ್ರಮವನ್ನು ಅವರು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರವೆಂದು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಕೆ ಮಾಡುವುದರ ಮೂಲಕ ಕೃಷಿ ಅಭಿವೃದ್ಧಿಗೆ ಪೂರಕವಾದ ಹೊಸ ಮಾರ್ಗಗಳನ್ನು ಹುಡುಕಲು ಸರ್ಕಾರ ಮುಂದಾಗಿರುವುದು ಸಹ ಉತ್ತಮ ಚಿಂತನೆ ಎಂದು ಅವರು ಅಭಿಪ್ರಾಯಪಟ್ಟರು.

ಅದೇ ವೇಳೆ ಮೈಸೂರಿನಲ್ಲಿ ಜಯದೇವ ಹೃದಯರೋಗ ಆಸ್ಪತ್ರೆಯನ್ನು ಉನ್ನತೀಕರಿಸಲು 180 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿರುವುದನ್ನು ಅವರು ಸ್ವಾಗತಿಸಿದರು. ಇದರಿಂದ ಮೈಸೂರು ಭಾಗದ ಜನರಿಗೆ ಉತ್ತಮ ಹೃದಯ ಚಿಕಿತ್ಸಾ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.

ಒಟ್ಟಿನಲ್ಲಿ ಈ ಬಜೆಟ್‌ನಲ್ಲಿ ಕೆಲವು ಉತ್ತಮ ಘೋಷಣೆಗಳಿದ್ದರೂ, ರೈತರ ಸಂಕಷ್ಟಗಳಿಗೆ ಸಮಗ್ರ ಪರಿಹಾರ ನೀಡುವ ದೃಢವಾದ ಯೋಜನೆಗಳು ಕಾಣದಿರುವುದು ನಿರಾಸೆ ತಂದಿದೆ. ಕೃಷಿ ಕ್ಷೇತ್ರವನ್ನು ಬಲಪಡಿಸಲು ಮತ್ತು ರೈತರ ಬದುಕು ಸುಧಾರಿಸಲು ಮುಂದಿನ ದಿನಗಳಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಆಗ್ರಹಿಸಿದರು.

Leave a Reply