HOMENews

ಎರಡನೇ ದಿನಕ್ಕೂ ಮುಂದುವರೆದ ರೈತ ಸಂಘದ ಧರಣಿ – ಪರಿಹಾರ ಮತ್ತು ಉದ್ಯೋಗಕ್ಕೆ ಆಗ್ರಹ

ಮೈಸೂರು, ಫೆ.27: ನಂಜನಗೂಡು ತಾಲೂಕು ಇಮ್ಮಾವು ಗ್ರಾಮದ ಸರ್ವೆ ನಂ. 390ರಿಂದ 430ರವರೆಗೆ ಇರುವ ಜಮೀನಿನ ಗೇಣಿದಾರ
ರೈತರಿಗೆ ಪರಿಹಾರ ಪಾವತಿಸುವಂತೆ ಹಾಗೂ ಕಾನೂನುಬಾಹಿರವಾಗಿ ಪರಿಹಾರ ಪಡೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನಕ್ಕೂ ಮುಂದುವರಿಯಿತು.

ಧರಣಿಯಲ್ಲಿ ಭಾಗವಹಿಸಿದ ರೈತರು ಸರ್ಕಾರ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿ,
ಭೂಮಿ ಕಳೆದುಕೊಂಡ ನೈಜ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಚಿತ್ರನಗರಿ ಯೋಜನೆಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ
ವೇಳೆ ಹಲವು ಗೇಣಿದಾರ ರೈತರಿಗೆ ಪರಿಹಾರ ದೊರೆಯದೇ ಅನ್ಯಾಯವಾಗಿದ್ದು, ನೈಜ ಹಕ್ಕುದಾರರನ್ನು ಗುರುತಿಸಿ ತಕ್ಷಣ ಪರಿಹಾರ ಪಾವತಿಸಬೇಕು ಎಂದು ರೈತರು ಆಗ್ರಹಿಸಿದರು.

ಪ್ರತಿಭಟನಾಕಾರರು ಮಾತನಾಡಿ, ಕೆಲವು ಮಂದಿ ಕಾನೂನುಬಾಹಿರವಾಗಿ ಪರಿಹಾರ ಪಡೆದುಕೊಂಡಿರುವ ಬಗ್ಗೆ ಅನುಮಾನಗಳಿದ್ದು,
ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅನೇಕ ವರ್ಷಗಳಿಂದ
ಜಮೀನನ್ನು ಕೃಷಿ ಮಾಡುತ್ತಿರುವ ಗೇಣಿದಾರ ರೈತರು ಇಂದಿಗೂ ಪರಿಹಾರಕ್ಕಾಗಿ ಅಲೆದಾಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ಗಾಲ್ಫ್ ಕಂಪನಿ ಯೋಜನೆಗಾಗಿ ಭೂಮಿ ಕಳೆದುಕೊಂಡ ಕೋಚನಹಳ್ಳಿ ಗ್ರಾಮದ ರೈತರಿಗೆ ಉದ್ಯೋಗ ಹಾಗೂ ನಿವೇಶನ ಒದಗಿಸಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದರು. ಭೂಮಿ ಕಳೆದುಕೊಂಡ ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಪುನರ್ವಸತಿ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಧರಣಿ ಸ್ಥಳದಲ್ಲಿ ರೈತರು ಘೋಷಣೆಗಳನ್ನು ಕೂಗಿ ಸರ್ಕಾರ ಮತ್ತು ಕೆಐಎಡಿಬಿ ವಿರುದ್ಧ ಪ್ರತಿಭಟನೆ ನಡೆಸಿದರು.
ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಹಿಡಿಯದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

Leave a Reply