HOMENews

ಗುಂಡ್ಲುಪೇಟೆ ಗಡಿಯಲ್ಲಿ ಭೀತಿಯ ಛಾಯೆ: ಚಿನ್ನದ ಉದ್ಯಮಿಗಳನ್ನೇ ಗುರಿಯಾಗಿಸಿಕೊಂಡ ಕೇರಳ ಮಲ್ಲು ದರೋಡೆ ಗ್ಯಾಂಗ್

ಕರ್ನಾಟಕ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ ಕೇರಳಿಯನ್ ಮಲ್ಲು ದರೋಡೆ ಗ್ಯಾಂಗ್ : ಗುಂಡ್ಲುಪೇಟೆ ಗಡಿ ಭಾಗದಲ್ಲಿ ಚಿನ್ನದ ಉದ್ಯಮಿಗಳೇ ಟಾರ್ಗೆಟ್; ಹೊಸ ಚೆಕ್‌ಪೋಸ್ಟ್ ಮೂಲಕ ಖಾಕಿ ಕಣ್ಣಿಟ್ಟಿದೆ

ಚಾಮರಾಜನಗರ ಫೆಬ್ರವರಿ 01:- ಕರ್ನಾಟಕ–ಕೇರಳ ಗಡಿಭಾಗದಲ್ಲಿ ಕಾರ್ಯಾಚರಿಸುತ್ತಿರುವ ಕೇರಳ ಮೂಲದ ಸಂಘಟಿತ ದರೋಡೆ ಗ್ಯಾಂಗ್ ಇದೀಗ ರಾಜ್ಯ ಪೊಲೀಸರಿಗೆ ಗಂಭೀರ ತಲೆನೋವಾಗಿಯೇ ಪರಿಣಮಿಸಿದೆ. ವಿಶೇಷವಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ಮೂಲಕ ಕೇರಳಕ್ಕೆ ಸಂಚರಿಸುವ ಚಿನ್ನದ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸರಣಿ ದರೋಡೆ ಪ್ರಕರಣಗಳು ಆತಂಕ ಮೂಡಿಸಿವೆ.

ಚಾಮರಾಜನಗರ ಜಿಲ್ಲೆ ತಮಿಳುನಾಡು ಹಾಗೂ ಕರ್ನಾಟಕದ ಗಡಿಯನ್ನು ಹಂಚಿಕೊಂಡಿದ್ದರೂ, ಗುಂಡ್ಲುಪೇಟೆ ಪ್ರದೇಶವು ಕೇರಳ ಗಡಿಯಿಗೂ ಸಮೀಪದಲ್ಲಿರುವ ಕಾರಣ ಅಪರಾಧಿಗಳಿಗೆ ಇದು ಸುಲಭ ಮಾರ್ಗವಾಗಿ ಪರಿಣಮಿಸಿದೆ. ದಟ್ಟ ಕಾಡು, ಮೊಬೈಲ್ ನೆಟ್‌ವರ್ಕ್ ಕೊರತೆ ಮತ್ತು ರಾತ್ರಿ ವೇಳೆ ವಾಹನ ಸಂಚಾರ ಕಡಿಮೆ ಇರುವುದೇ ದರೋಡೆಕೋರರಿಗೆ ಅನುಕೂಲಕರ ವಾತಾವರಣ ಒದಗಿಸುತ್ತಿದೆ.

ಚಿನ್ನದ ಉದ್ಯಮಿಗಳೇ ಮುಖ್ಯ ಗುರಿ

ಪೊಲೀಸ್ ಮೂಲಗಳ ಪ್ರಕಾರ, ಈ ಕೇರಳಿಯನ್ ಮಲ್ಲು ಗ್ಯಾಂಗ್ ಸಾಮಾನ್ಯ ಪ್ರಯಾಣಿಕರನ್ನು ಅಲ್ಲದೆ, ಚಿನ್ನದ ವ್ಯವಹಾರ ನಡೆಸುವ ಉದ್ಯಮಿಗಳನ್ನೇ ವ್ಯವಸ್ಥಿತವಾಗಿ ಟಾರ್ಗೆಟ್ ಮಾಡುತ್ತಿದೆ. ಕೇರಳದಿಂದ ಗುಂಡ್ಲುಪೇಟೆ ಮಾರ್ಗವಾಗಿ ಕರ್ನಾಟಕದ ವಿವಿಧ ಪಟ್ಟಣಗಳಿಗೆ ಬಂದು ಚಿನ್ನ ಮಾರಾಟ ಮಾಡಿ, ನಗದು ಅಥವಾ ಚಿನ್ನದೊಂದಿಗೆ ವಾಪಸ್ ತೆರಳುವವರ ಚಲನವಲನವನ್ನು ಮುಂಚಿತವಾಗಿ ಗಮನಿಸಿ ದಾಳಿ ನಡೆಸಲಾಗುತ್ತಿದೆ.

ಇತ್ತೀಚಿನ ತಿಂಗಳಲ್ಲಿ ಮಾತ್ರವೇ ಎರಡು ದೊಡ್ಡ ದರೋಡೆ ಪ್ರಕರಣಗಳು ದಾಖಲಾಗಿದ್ದು, ಪೊಲೀಸರಿಗೂ ಈ ಗ್ಯಾಂಗ್ ಕಾರ್ಯವೈಖರಿ ಬಗ್ಗೆ ಗಂಭೀರ ಎಚ್ಚರಿಕೆ ಮೂಡಿಸಿದೆ.

ಈ ರಸ್ತೆಯ ಗಡಿಯಲ್ಲಿ ಅರ್ಧ ಕಿಲೋ ಚಿನ್ನ ದರೋಡೆ ಪ್ರಕರಣ

ಸುಮಾರು ಎರಡು ತಿಂಗಳ ಹಿಂದೆ ನಡೆದ ಪ್ರಕರಣದಲ್ಲಿ, ಕೇರಳ ಮೂಲದ ಚಿನ್ನದ ಉದ್ಯಮಿಯೊಬ್ಬರು ಊಟಿ ಮಾರ್ಗವಾಗಿ ಸಾಗುತ್ತಿದ್ದ ವೇಳೆ, ಅರ್ಧ ಕಿಲೋಗ್ರಾಂ ಚಿನ್ನವನ್ನು ದರೋಡೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ದರೋಡೆ ಗ್ಯಾಂಗ್‌ನ ಕಿಂಗ್‌ಪಿನ್‌ಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ಪ್ರಕರಣ ಇನ್ನೂ ತಣ್ಣಗಾಗುವ ಮುನ್ನವೇ ಮತ್ತೊಂದು ಗಂಭೀರ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ಗಡಿ ಭಾಗದಲ್ಲಿ ಅಪರಾಧಿಗಳ ಧೈರ್ಯವನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.

ಸುಮಾರು 10 ಲಕ್ಷ ನಗದು ದರೋಡೆ: ಮತ್ತೊಂದು ಆತಂಕಕಾರಿ ಘಟನೆ

ಜನವರಿ 10ರಂದು ಕೇರಳ ಮೂಲದ ಚಿನ್ನದ ಉದ್ಯಮಿಗಳಾದ ಜಮ್ಸಿದ್ ಮತ್ತು ಫೈಸಲ್ ಎಂಬವರು ಕರ್ನಾಟಕಕ್ಕೆ ಬಂದು ತಮ್ಮ ಚಿನ್ನವನ್ನು ಮಾರಾಟ ಮಾಡಿ ಸುಮಾರು 10 ಲಕ್ಷ ರೂ. ನಗದು ಪಡೆದುಕೊಂಡು ಕೇರಳಕ್ಕೆ ವಾಪಸ್ ತೆರಳುತ್ತಿದ್ದರು. ಗುಂಡ್ಲುಪೇಟೆ–ಕೇರಳ ಗಡಿ ಮಧ್ಯೆ ಬರುವ ಅರಣ್ಯ ಪ್ರದೇಶದಲ್ಲಿ, ಇನೋವಾ ಕಾರಿನಲ್ಲಿ ಬಂದ ದರೋಡೆಕೋರರು ಅವರ ವಾಹನವನ್ನು ಅಡ್ಡಗಟ್ಟಿದ್ದಾರೆ.

ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ ಆರೋಪಿಗಳು, ನಗದು ದೋಚಿ ಕ್ಷಣಾರ್ಧದಲ್ಲಿ ಕಾಡಿನೊಳಗೆ ನಾಪತ್ತೆಯಾಗಿದ್ದಾರೆ. ವಿಶೇಷವೆಂದರೆ, ದರೋಡೆ ನಡೆದ ಸ್ಥಳದಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಈ ನೆಟ್‌ವರ್ಕ್ ಕೊರತೆಯನ್ನೇ ದರೋಡೆಕೋರರು ತಮ್ಮ ಪ್ರಮುಖ ಆಯುಧವಾಗಿ ಬಳಸಿಕೊಂಡಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.

ಈ ಪ್ರಕರಣ ತಡವಾದ ಹಿನ್ನೆಲೆಯಲ್ಲಿ ದೂರು, ಪೊಲೀಸರಲ್ಲಿ ಸಂಶಯ

ಈ ಪ್ರಕರಣದಲ್ಲಿ ಮತ್ತೊಂದು ಸಂಶಯಾಸ್ಪದ ಅಂಶವೂ ಬೆಳಕಿಗೆ ಬಂದಿದೆ. ದರೋಡೆ ನಡೆದಿದ್ದು ಜನವರಿ 10ರಂದು. ಆದರೆ, ದೂರು ದಾಖಲಾಗಿದ್ದು ಜನವರಿ 27ರಂದು. ಸುಮಾರು 17 ದಿನಗಳ ಬಳಿಕ ದೂರು ನೀಡಿರುವುದೇಕೆ ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ.

ದರೋಡೆ ಮಾಡಿದವರು ದೂರುದಾರರಿಗೆ ಪರಿಚಯಸ್ಥರಾಗಿರಬಹುದೆಂಬ ಅನುಮಾನವೂ ವ್ಯಕ್ತವಾಗಿದ್ದು, ಈ ಎಲ್ಲ ಅಂಶಗಳನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ದೂರುದಾರರ ಚಲನವಲನ, ಹಣದ ಮೂಲ, ಪ್ರಯಾಣ ಮಾರ್ಗ ಸೇರಿದಂತೆ ಎಲ್ಲಾ ಮಾಹಿತಿಯನ್ನೂ ಖಾಕಿ ತೀವ್ರವಾಗಿ ತನಿಖೆ ಮಾಡುತ್ತಿದೆ.

ಕರ್ನಾಟಕ ಹಾಗೂ ಕೇರಳದ ರಸ್ತೆಯಲ್ಲಿ ಹೊಸ ಚೆಕ್‌ಪೋಸ್ಟ್, ಹದ್ದಿನ ಕಣ್ಣು

ಸರಣಿ ದರೋಡೆ ಪ್ರಕರಣಗಳ ಹಿನ್ನೆಲೆ, ಕೇರಳ ಮಲ್ಲು ಗ್ಯಾಂಗ್ ಹಾವಳಿಗೆ ಕಡಿವಾಣ ಹಾಕಲು ಚಾಮರಾಜನಗರ ಜಿಲ್ಲಾ ಪೊಲೀಸರು ಹೊಸ ಕಾರ್ಯತಂತ್ರ ರೂಪಿಸಿದ್ದಾರೆ. ಮದ್ದೂರು ಚೆಕ್‌ಪೋಸ್ಟ್ ಟೋಲ್‌ಗೇಟ್ ಜೊತೆಗೆ, ಗಡಿ ಭಾಗದಲ್ಲಿ ಮತ್ತೊಂದು ಹೊಸ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಕರ್ನಾಟಕದಿಂದ ಕೇರಳಕ್ಕೆ ಹಾಗೂ ಕೇರಳದಿಂದ ಕರ್ನಾಟಕಕ್ಕೆ ಸಂಚರಿಸುವ ಪ್ರತಿಯೊಂದು ಶಂಕಿತ ವಾಹನದ ಮೇಲೂ ತೀವ್ರ ನಿಗಾ ವಹಿಸಲಾಗಿದೆ. ವಿಶೇಷ ತಂಡಗಳನ್ನು ರಚಿಸಿ ರಾತ್ರಿ ಪಾಳಿಗಳಲ್ಲಿ ಪೆಟ್ರೋಲಿಂಗ್ ಹೆಚ್ಚಿಸಲಾಗಿದೆ. ಗಡಿ ಅರಣ್ಯ ಪ್ರದೇಶಗಳಲ್ಲಿ ಡ್ರೋನ್ ಮತ್ತು ಗುಪ್ತಚರ ಜಾಲದ ಮೂಲಕ ನಿಗಾವಹಿಸುವ ಪ್ರಯತ್ನವೂ ನಡೆಯುತ್ತಿದೆ.

ಕೇರಳ ಗಡಿ ಅಪರಾಧಕ್ಕೆ ತಡೆಗಟ್ಟುವ ಸವಾಲು

ಗಡಿ ಭಾಗಗಳಲ್ಲಿ ನಡೆಯುವ ಅಪರಾಧಗಳನ್ನು ನಿಯಂತ್ರಿಸುವುದು ಯಾವತ್ತೂ ಪೊಲೀಸರಿಗೆ ದೊಡ್ಡ ಸವಾಲು. ಒಂದು ರಾಜ್ಯದಲ್ಲಿ ಅಪರಾಧ ಎಸಗಿ ಮತ್ತೊಂದು ರಾಜ್ಯಕ್ಕೆ ಪರಾರಿಯಾಗುವ ದರೋಡೆಕೋರರು, ಕಾನೂನು ಕ್ರಮಗಳನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕ ಮತ್ತು ಕೇರಳ ಪೊಲೀಸರ ನಡುವೆ ಸಮನ್ವಯ ಸಭೆಗಳನ್ನೂ ನಡೆಸಲಾಗುತ್ತಿದೆ.

ಪೊಲೀಸರು ಎಚ್ಚರಿಕೆ ವಹಿಸಿದ್ದರೂ, ಗುಂಡ್ಲುಪೇಟೆ ಮಾರ್ಗವಾಗಿ ಸಂಚರಿಸುವ ಚಿನ್ನದ ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ. ಗುಂಡ್ಲುಪೇಟೆ ಗಡಿ ಭಾಗದಲ್ಲಿ ನಡೆಯುತ್ತಿರುವ ಈ ಸರಣಿ ದರೋಡೆ ಪ್ರಕರಣಗಳು ಕೇವಲ ಅಪರಾಧದ ಕಥೆಯಲ್ಲ, ಗಡಿ ಭದ್ರತೆ ಮತ್ತು ಸಂಘಟಿತ ಅಪರಾಧದ ವಿರುದ್ಧದ ಹೋರಾಟದ ಪ್ರತಿಬಿಂಬವಾಗಿದೆ. ಕೇರಳಿಯನ್ ಮಲ್ಲು ಗ್ಯಾಂಗ್‌ನ ಹಾವಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕೈಗೊಂಡಿರುವ ಹೊಸ ಕ್ರಮಗಳು ಮುಂದಿನ ದಿನಗಳಲ್ಲಿ ಫಲ ನೀಡುತ್ತವೆಯೇ ಎಂಬುದು ಕಾದು ನೋಡಬೇಕಿದೆ.

ಒಟ್ಟಿನಲ್ಲಿ, ಗಡಿ ಪ್ರದೇಶದಲ್ಲಿ ಕಾನೂನು ಮತ್ತು ಅಪರಾಧಿಗಳ ನಡುವೆ ನಡೆಯುತ್ತಿರುವ ಈ ನಿಶ್ಶಬ್ದ ಯುದ್ಧ ಇದೀಗ ತೀವ್ರ ಹಂತ ತಲುಪಿದೆ.