
ಮೊತ್ತಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ರಾಜ್ಯ ಬಜೆಟ್ ನೇರ ಪ್ರಸಾರ

ಬೆಂಗಳೂರು, ಮಾ.05: ಮುಖ್ಯಮಂತ್ರಿ ಹಾಗೂ ಆರ್ಥಿಕ ಸಚಿವರಾದ ಸಿದ್ದರಾಮಯ್ಯ ಅವರು ಮಾರ್ಚ್ 6 ರಂದು ವಿಧಾನಸೌಧದಲ್ಲಿ ಮಂಡಿಸಲಿರುವ 2026–27ನೇ ಸಾಲಿನ ರಾಜ್ಯ ಬಜೆಟ್ ಭಾಷಣವನ್ನು ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ ಮಾಡುವ ವಿಶೇಷ ವ್ಯವಸ್ಥೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೈಗೊಂಡಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಎಲ್‌ಇಡಿ ಮತ್ತು ಟಿವಿ ಪರದೆಗಳ ಮೂಲಕ ಬಜೆಟ್ ಭಾಷಣವನ್ನು ನೇರವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಾಮಾನ್ಯ ಜನರು ಕೂಡ ಬಸ್ ನಿಲ್ದಾಣಗಳಲ್ಲಿಯೇ ಸರ್ಕಾರದ ಮಹತ್ವದ ಕಾರ್ಯಕ್ರಮವನ್ನು ಗಮನಿಸುವ ಅವಕಾಶ ಪಡೆಯಲಿದ್ದಾರೆ.
ಈ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ (ಐಪಿಎಸ್) ಪ್ರಕಟಣೆ ಹೊರಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಾರಿ ರಾಜ್ಯ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮಹತ್ವದ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರು ಮೂಲದ ವೃತ್ತಿ ಮೀಡಿಯಾ ಸಲ್ಯೂಷನ್ಸ್ ಸಂಸ್ಥೆಯ ಸಹಯೋಗದಲ್ಲಿ ಈ ವ್ಯವಸ್ಥೆಯನ್ನು ರೂಪಿಸಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಸುಮಾರು 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಡಿಜಿಟಲ್ ಡಿಸ್ಪ್ಲೇ (ಎಲ್‌ಇಡಿ) ಹಾಗೂ ಟಿವಿ ಪರದೆಗಳ ಮೂಲಕ ಮಾರ್ಚ್ 6 ರಂದು ಬೆಳಿಗ್ಗೆ 10.15 ಗಂಟೆಯಿಂದ ಬಜೆಟ್ ಮಂಡನೆಯ ನೇರ ಪ್ರಸಾರ ನಡೆಯಲಿದೆ.
ವಿಧಾನಸೌಧದಲ್ಲಿ ನಡೆಯುವ ಬಜೆಟ್ ಭಾಷಣದ ಜೊತೆಗೆ ನಂತರ ನಡೆಯಲಿರುವ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯನ್ನೂ ಇದೇ ಪರದೆಗಳ ಮೂಲಕ ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗುತ್ತದೆ.
ಈ ವ್ಯವಸ್ಥೆಯಿಂದ ಪ್ರಯಾಣಿಕರು ಮತ್ತು ಸಾರ್ವಜನಿಕರು ಬಸ್ ನಿಲ್ದಾಣದಲ್ಲಿಯೇ ರಾಜ್ಯದ ಆರ್ಥಿಕ ಸ್ಥಿತಿ, ಸರ್ಕಾರದ ಯೋಜನೆಗಳು ಹಾಗೂ ಹೊಸ ಘೋಷಣೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮನವಿ ಮಾಡಿದೆ.





