HOMENews

ಅಕ್ರಮ ಸಂಬಂಧ ಇಟ್ಟುಕೊಂಡಿದ್ದ  ಆರೋಪಕ್ಕೆ ಮಹಿಳೆ ಮೇಲೆ ಆಸಿಡ್ ಎರಚಿದ ಪತ್ನಿ

ಅಕ್ರಮ ಸಂಬಂಧ ಆರೋಪ: ರಾಜಿ ಪಂಚಾಯ್ತಿ ಮಧ್ಯೆ ಮಹಿಳೆ ಮೇಲೆ ಆಸಿಡ್ ದಾಳಿ  ಕೋಲಾರದಲ್ಲಿ ಭೀಕರ ಘಟನೆ

ಕೋಲಾರ, ಏಪ್ರಿಲ್ 2: ಅಕ್ರಮ ಸಂಬಂಧದ ಆರೋಪದ ಹಿನ್ನೆಲೆ ನಡೆದ ರಾಜಿ ಪಂಚಾಯ್ತಿ ರಕ್ತರಂಜಿತ ಘಟನೆಯಾಗಿ ಮಾರ್ಪಟ್ಟಿರುವ ದಾರುಣ ಘಟನೆ ಕೋಲಾರ ನಗರದಲ್ಲಿ ಬೆಳಕಿಗೆ ಬಂದಿದೆ. ಆಜಾದ್ ನಗರದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಈ ಪ್ರಕರಣದಲ್ಲಿ, ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಮಹಿಳೆಯೊಬ್ಬಳು ಮತ್ತೊಬ್ಬ ಮಹಿಳೆಯ ಮೇಲೆ ಆಸಿಡ್ ಎರಚಿರುವುದು ಆತಂಕ ಮೂಡಿಸಿದೆ.

ಗಾಯಾಳು ಮಹಿಳೆಯನ್ನು ಮುಸ್ಕಾನ್ ಎಂದು ಗುರುತಿಸಲಾಗಿದ್ದು, ತೀವ್ರ ಗಾಯಗಳೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯಾಗಿರುವ ಆಯೇಷಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆಯೇಷಾಳ ಪತಿ ಶಾಬಾಜ್ ಅಹಮದ್ ಹಾಗೂ ಮುಸ್ಕಾನ್ ನಡುವೆ ಅನೈತಿಕ ಸಂಬಂಧ ಬೆಳೆದಿದ್ದ ಎಂಬ ಅನುಮಾನದಿಂದ ಕುಟುಂಬದಲ್ಲಿ ಸಾಕಷ್ಟು ದಿನಗಳಿಂದ ಗಲಾಟೆಗಳು ನಡೆಯುತ್ತಿದವು. ಮುಸ್ಕಾನ್, ಶಾಬಾಜ್ ಅಹಮದ್ನ ತಮ್ಮನ ಪತ್ನಿಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆಯನ್ನು ತಂದಿದೆ. ಮುಸ್ಕಾನ್ ಪತಿ ಮದ್ಯಪಾನ ವ್ಯಸನಿಯಾಗಿದ್ದು, ಕುಟುಂಬದ ಹೊಣೆಗಾರಿಕೆ ನಿರ್ವಹಣೆಯಲ್ಲಿ ವಿಫಲರಾಗಿದ್ದ ಹಿನ್ನೆಲೆಯಲ್ಲಿ, ಶಾಬಾಜ್ ಆಕೆಗೆ ಹಣಕಾಸಿನ ನೆರವು ನೀಡುತ್ತಿದ್ದ ಎನ್ನಲಾಗಿದೆ. ಇದೇ ಪರಿಚಯವು ಬಳಿಕ ಸಂಬಂಧವಾಗಿ ಬೆಳೆದಿತ್ತು ಎಂಬ ಆರೋಪ ಕೇಳಿಬಂದಿದೆ.

ಮೂರು ತಿಂಗಳ ಹಿಂದೆ ಶಾಬಾಜ್ ಮತ್ತು ಮುಸ್ಕಾನ್ ಮನೆ ಬಿಟ್ಟು ತೆರಳಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಸಂಬಂಧಿಕರು ಇವರನ್ನು ಪತ್ತೆಹಚ್ಚಿ ಕೋಲಾರಕ್ಕೆ ಕರೆತಂದು, ಕುಟುಂಬದ ಸಮಸ್ಯೆಯನ್ನು ಬಗೆಹರಿಸಲು ರಾಜಿ ಸಂಧಾನ ನಡೆಸಲು ನಿರ್ಧರಿಸಿದ್ದರು.

ಬುಧವಾರ ರಾತ್ರಿ ಸಂಬಂಧಿಕರ ಮನೆಯೊಂದರಲ್ಲಿ ನಡೆದ ಸಭೆಯಲ್ಲಿ ಮಾತಿನ ಚಕಮಕಿ ತೀವ್ರಗೊಂಡಿದೆ. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆಯೇ, ಆಯೇಷಾ ಆಕ್ರೋಶಗೊಂಡು, ಪೂರ್ವಸಿದ್ಧತೆಯೊಂದಿಗೆ ತಂದಿದ್ದ ಬಾತ್ರೂಂ ಕ್ಲೀನಿಂಗ್ ಆಸಿಡ್ ಅನ್ನು ಮುಸ್ಕಾನ್ ಮುಖದ ಮೇಲೆ ಎರಚಿದ್ದಾಳೆ. ಘಟನೆಯ ನಂತರ ಆಯೇಷಾ ಸ್ಥಳದಿಂದ ಪರಾರಿಯಾಗಿದ್ದಳು.

ಗಂಭೀರವಾಗಿ ಗಾಯಗೊಂಡ ಮುಸ್ಕಾನ್ ನರಳುತ್ತಿರುವ ಮಾಹಿತಿ ತಿಳಿದ ಕೂಡಲೇ ಗಲ್ ಪೇಟೆ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ತಮ್ಮ ವಾಹನದಲ್ಲೇ ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮುಸ್ಕಾನ್ ಅವರ ಸ್ಥಿತಿ ಗಂಭೀರವಾಗಿದ್ದು, ಮುಂದಿನ ಚಿಕಿತ್ಸೆಗಾಗಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯ ಗಂಭೀರತೆಯನ್ನು ಗಮನಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿದ್ದ ಆಯೇಷಾಳನ್ನು ನಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆ ಕುಟುಂಬ ಕಲಹಗಳು ಮತ್ತು ಅಕ್ರಮ ಸಂಬಂಧಗಳ ಪರಿಣಾಮ ಎಷ್ಟು ಭೀಕರವಾಗಿರಬಹುದು ಎಂಬುದಕ್ಕೆ ಕಳವಳಕಾರಿ ಉದಾಹರಣೆಯಾಗಿ ಪರಿಣಮಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Leave a Reply