HOMENews

ರಾಗಿ ಖರೀದಿ ಕೇಂದ್ರಕ್ಕೆ ಮಾಜಿ ಶಾಸಕ ಕೆ.ಮಹದೇವ್ ಭೇಟಿ

ವರದಿ:ರವಿಚಂದ್ರ ಬೂದಿತಿಟ್ಟು

 ಬೆಟ್ಟದಪುರ : ಇಲ್ಲಿನ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಪ್ರತಿ ಕ್ವಿಂಟಲ್ ಗೆ  4 ಕೆ.ಜಿ ಹೆಚ್ಚುವರಿ ಕಡಿತ ಮಾಡುತ್ತಿರುವ  ಹಿನ್ನೆಲೆಯಲ್ಲಿ, ಮಾಜಿ ಶಾಸಕ ಕೆ.ಮಹದೇವ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಹೆಚ್ಚುವರಿ ಕಡಿತವನ್ನು ಕಡಿಮೆ ಮಾಡಿ ಕ್ವಿಂಟಾಲಿಗೆ 2 ಕೆ.ಜಿಗೆ ಅಂತಿಮಗೊಳಿಸುವಂತೆ ಖರೀದಿ ಅಧಿಕಾರಿಗಳಿಗೆ  ಸೂಚನೆ ನೀಡಿದರು.

ಎಪಿಎಂಸಿ ಆವರಣದಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು,ಮುಂದಿನ ಬಾರಿ ರಾಗಿ ಖರೀದಿ ಕೇಂದ್ರ ಆರಂಭಕ್ಕೂ ಮೊದಲು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೂಲಿ ಕಾರ್ಮಿಕರಿಗೆ ಇನ್ನೂ ಕೂಲಿ ಹಣ ಪಾವತಿ ಆಗದೇ ಇರುವ ಬಗ್ಗೆ ಗಮನಕ್ಕೆ ಬಂದಿದೆ, ಸಂಬಂಧಪಟ್ಟ ಗುತ್ತಿಗೆದಾರರು ತಕ್ಷಣವೇ ಬಾಕಿ ಹಣ ಪಾವತಿಸುವಂತೆ  ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಒದಗಿಸುವುದರ ಜೊತೆಗೆ  ಶೀಘ್ರವೇ ಕೂಲಿ ಹಣ ಪಾವತಿ ಮಾಡಿಸುವ  ಭರವಸೆ ನೀಡಿದರು.

ಈ ವೇಳೆ ರೈತ ಹನುಮಂತು  ಮಾತನಾಡಿ, ಈಗಾಗಲೇ ಶೇಕಡಾ 80ರಷ್ಟು ರೈತರು ತಮ್ಮ ರಾಗಿಯನ್ನು ಕೇಂದ್ರಕ್ಕೆ ಬಿಟ್ಟಿರುತ್ತಾರೆ, ಪ್ರತಿ ಕ್ವಿಂಟಾಲ್ ಗೆ  ನಾಲ್ಕು ಕೆಜಿ ಕಡಿತ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ಕೆ. ಮಹದೇವ್ ಈ ವಿಚಾರ ನನ್ನ ಗಮನಕ್ಕೆ ಮೊದಲೇ ಬಂದಿದ್ದರೆ ತಕ್ಷಣ ಕ್ರಮ ಕೈಗೊಳ್ಳುತ್ತಿದ್ದೆ. ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 4 ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಿದ್ದು,  ರೈತರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಇಂತಹ ಅವ್ಯವಹಾರಗಳನ್ನು ಕಡಿಮೆ ಮಾಡಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಈ ಸಮಸ್ಯೆಯನ್ನು ಸಂಬಂಧಪಟ್ಟ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದರು.

ಮುಖಂಡರಾದ ಗಗನ್, ಗಿರಿಗೌಡ, ಹರೀಶ್, ಉದಯಕುಮಾರ್, ಚಂದ್ರಣ್ಣ, ಗಿರೀಶ್, ಗ್ರಾಮದ ಮುಖಂಡರು ಹಾಗೂ ಹಮಾಲಿಗಳು ಉಪಸ್ಥಿತರಿದ್ದರು.

Leave a Reply