HOMEFilm News

ಫೆಬ್ರುವರಿ 30 ಸಿನಿಮಾ ಬಿಡುಗಡೆಗೆ ಉತ್ತಮ ಸ್ಪಂದನೆ: ನಿರ್ದೇಶಕ ಎಂ.ಎಲ್. ಪ್ರಶಾಂತ್

ಮೈಸೂರು :- ತಮ್ಮ ನಿರ್ದೇಶನದಲ್ಲಿ ಹಾಗೂ ಜೋಸೆಫ್ ಬೇಬಿ ನಿರ್ಮಾಣದಲ್ಲಿ ಮೂಡಿಬಂದಿರುವ “ಫೆಬ್ರುವರಿ 30” ಹೆಸರಿನ ಸುಮಾರು 93 ನಿಮಿಷಗಳ ಕನ್ನಡ ಚಲನಚಿತ್ರ ಈಗಾಗಲೇ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಉತ್ತಮ ಸ್ಪಂದನೆ ದೊರೆತಿದೆ ಎಂದು ನಿರ್ದೇಶಕ ಎಂ.ಎಲ್. ಪ್ರಶಾಂತ್ ತಿಳಿಸಿದ್ದಾರೆ. ಚಿತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಅವರು ಚಲನಚಿತ್ರ ಪ್ರೇಮಿಗಳಿಗೆ ಮನವಿ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಫೆಬ್ರುವರಿ 30” ಚಿತ್ರವು ರೋಚಕ ಹಾಗೂ ರಹಸ್ಯಮಯ ಕಥಾವಸ್ತುವಿನ ಮೇಲೆ ಆಧಾರಿತವಾಗಿದ್ದು, ಯುವಕರಿಗೆ ಹೊಸ ರೀತಿಯ ಅನುಭವ ನೀಡುವ ಉದ್ದೇಶದಿಂದ ನಿರ್ಮಿಸಲಾಗಿದೆ. ಸಸ್ಪೆನ್ಸ್, ಭಯಾನಕತೆ ಹಾಗೂ ಸ್ನೇಹದ ಮೌಲ್ಯಗಳನ್ನು ಒಟ್ಟುಗೂಡಿಸಿಕೊಂಡ ಕಥೆಯನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಮೂಡಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು.

ಚಿತ್ರದ ಕಥೆಯು ದಾರಿ ತಪ್ಪಿ ನಿರ್ಜನ ಪ್ರದೇಶಕ್ಕೆ ತಲುಪುವ ಐವರು ಗೆಳೆಯರ ಸುತ್ತ ಸಾಗಿದೆ. ಅವರು ಆಶ್ರಯಕ್ಕಾಗಿ ಒಂದು ಪಾಳು ಮನೆಯನ್ನು ಸೇರಿ ಅಲ್ಲೇ ರಾತ್ರಿ ಕಳೆಯಲು ನಿರ್ಧರಿಸುತ್ತಾರೆ. ಆ ಮನೆಯಲ್ಲಿ ಅವರಿಗೆ ಒಂದು ಪ್ರಾಚೀನ ಪೆಟ್ಟಿಗೆ ಸಿಕ್ಕುತ್ತದೆ. ಅದರಲ್ಲಿ ನಿಧಿ ಇರಬಹುದು ಎಂಬ ಆಶೆಯಿಂದ ಪೆಟ್ಟಿಗೆಯನ್ನು ತೆರೆದಾಗ ಅನಿರೀಕ್ಷಿತವಾಗಿ ಒಂದು ಪಿಶಾಚಿ ಮುಕ್ತವಾಗುತ್ತದೆ. ನಂತರ ಭಯಭೀತರಾದ ಗೆಳೆಯರು ಆ ಸ್ಥಳದಿಂದ ಸುರಕ್ಷಿತವಾಗಿ ತಪ್ಪಿಸಿಕೊಳ್ಳಲು ನಡೆಸುವ ಹೋರಾಟವೇ ಚಿತ್ರದ ಮುಖ್ಯ ಎಳೆಯಾಗಿದೆ. ಪ್ರೇಕ್ಷಕರನ್ನು ಕುತೂಹಲದಿಂದ ಹಿಡಿದುಕೊಳ್ಳುವಂತೆ ಕಥೆಯನ್ನು ರೂಪಿಸಲಾಗಿದೆ ಎಂದು ನಿರ್ದೇಶಕರು ವಿವರಿಸಿದರು.                                                                                                                                                                                                                                                                                                                                                               ಚಿತ್ರದ ಸಂಗೀತವನ್ನು ಲಿಜಿನ್ಬಾಂಬಿನೋ ನೀಡಿದ್ದು, ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಕಥೆಯ ಭಾವನೆಯನ್ನು ಮತ್ತಷ್ಟು ಗಾಢಗೊಳಿಸುತ್ತವೆ. ಪಿ.ಎಂ. ಉನ್ನಿಕೃಷ್ಣನ್ ಅವರ ಛಾಯಾಗ್ರಹಣ ಚಿತ್ರಕ್ಕೆ ವಿಶಿಷ್ಟತೆ ತಂದಿದ್ದು, ನಿರ್ಜನ ಪ್ರದೇಶಗಳು ಹಾಗೂ ಪಾಳು ಮನೆಯನ್ನು ನೈಜವಾಗಿ ತೆರೆದಿಟ್ಟಿರುವ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆಯುತ್ತವೆ ಎಂದು ಅವರು ಹೇಳಿದರು.

ಚಿತ್ರದಲ್ಲಿ ಅಭಿಷೇಕ್, ಶ್ರೀಕಾಂತ್, ಅಕ್ಷಯ್ ಮನೋಜ, ಛಾಯಾರ್ಶರೀ, ಸಾಹಿತ್ಯ ಶೆಟ್ಟಿ ಹಾಗೂ ತಾಂಡವರಾಮ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಹೊಸ ಕಲಾವಿದರಿಗೆ ಅವಕಾಶ ನೀಡುವ ಉದ್ದೇಶದಿಂದ ಚಿತ್ರವನ್ನು ರೂಪಿಸಲಾಗಿದ್ದು, ಎಲ್ಲರೂ ತಮ್ಮ ಪಾತ್ರಗಳನ್ನು ನೈಜವಾಗಿ ನಿರ್ವಹಿಸಿದ್ದಾರೆ ಎಂದು ನಿರ್ದೇಶಕರು ತಿಳಿಸಿದರು.

ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿತ್ರವನ್ನು ನಿರ್ಮಿಸಲು ತಂಡ ಶ್ರಮಿಸಿದ್ದು, ತಾಂತ್ರಿಕವಾಗಿ ಉತ್ತಮ ಮಟ್ಟದ ಚಿತ್ರವನ್ನು ಪ್ರೇಕ್ಷಕರಿಗೆ ನೀಡಲು ಪ್ರಯತ್ನಿಸಲಾಗಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರಕ್ಕೆ ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮನೋಜ, ಶಿವಕುಮಾರ್, ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು. ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳನ್ನು ಪ್ರೇಕ್ಷಕರು ಬೆಂಬಲಿಸಿದರೆ ಇನ್ನಷ್ಟು ಉತ್ತಮ ಚಿತ್ರಗಳನ್ನು ನಿರ್ಮಿಸಲು ಪ್ರೇರಣೆ ದೊರೆಯುತ್ತದೆ ಎಂದು ನಿರ್ದೇಶಕ ಎಂ.ಎಲ್. ಪ್ರಶಾಂತ್ ಅಭಿಪ್ರಾಯಪಟ್ಟರು.

Leave a Reply