HOMENews

ಸರ್ಕಾರದ ಯೋಜನೆಗಳು ಬುಡಕಟ್ಟು ಜನರಿಗೆ ನೇರವಾಗಿ ತಲುಪಬೇಕು : ಪ್ರೊ. ಡಿ. ಆನಂದ್

ಮೈಸೂರು, ಮಾ.೦3:- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬುಡಕಟ್ಟು ಜನರ ಅಭಿವೃದ್ಧಿಗೆ ಮಾಡುವ ಯೋಜನೆಗಳು ನೇರವಾಗಿ ಫಲಾನುಭವಿಗೆ ತಲುಪುವಂತೆ ಮಾಡಿದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಪ್ರಾಧ್ಯಾಪಕರಾದ ಪ್ರೊ. ಡಿ. ಆನಂದ್ ತಿಳಿಸಿದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಕರ್ನಾಟಕ ರಾಜ್ಯ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ನಡೆದ ಕರ್ನಾಟಕದ ನೆರೆಯ ರಾಜ್ಯಗಳಲ್ಲಿ ಬುಡಕಟ್ಟು ಜನರ ಕಲ್ಯಾಣ ಕಾರ್ಯಕ್ರಮಗಳ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇರಳ, ಆಂದ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ಬುಡಕಟ್ಟು ಜನರಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿವೆ. ರಾಜ್ಯ ಸರ್ಕಾರ SEP, TSP  ಯೋಜನೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ ಎಲ್ಲಾ ರಾಜ್ಯಗಳು ಒಟ್ಟಿಗೆ ಸೇರಿ ಯೋಜನೆಗಳನ್ನು ರೂಪಿಸಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿಯೂ ಬುಡಕಟ್ಟು ಜನರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರು. ಕೇರಳ ಬಡತನ ನಿರ್ಮೂಲನೆ, ಸಾಕ್ಷರತೆಯಲ್ಲಿ ನಂ.1ರಾಜ್ಯವಾಗಿದೆ. ಬುಡಕಟ್ಟು ಜನರ ಸಬಲೀಕರಣಕ್ಕೆ ಶಿಕ್ಷಣ, ಆರೋಗ್ಯ, ಆರ್ಥಿಕತೆ, ಸಾಮಾಜಿಕ ಯೋಜನೆಗಳನ್ನು ರೂಪಿಸಬೇಕು. ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರ ಪ್ರಗತಿ ಹಾಗೂ ಸ್ವಾವಲಂಬನೆಗೆ ಅನುಕೂಲ ಮಾಡಿಕೊಟ್ಟಿದೆ. ಪ್ರಗತಿಯ ಹೆಸರಿನಲ್ಲಿ ಬುಡಕಟ್ಟು ಜನರ ಶೋಷಣೆ ಆಗಬಾರದು. ಬುಡಕಟ್ಟು ಜನರನ್ನು ನೋಡುವ ದೃಷ್ಠಿಕೋನ ಬದಲಾಗಬೇಕು ಎಂದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಶೋಧನಾಧಿಕಾರಿ ಶಿವಕುಮಾರ್ ಸಿ. ಮಾತನಾಡಿ ಕರ್ನಾಟಕದಲ್ಲಿ ಬುಡಕಟ್ಟು ಜನರ ಅಭಿವೃದ್ಧಿಗೆ SEP, TSP ಯೋಜನೆಗಳು ಅದ್ಭುತವಾದ ಮೈಲಿಗಲ್ಲಾಗಿವೆ. ರಾಜ್ಯದಲ್ಲಿ 12 ಏಕಲವ್ಯ ವಸತಿ ಶಾಲೆಗಳಿವೆ. ಅದಲ್ಲದೇ ಮೊರಾರ್ಜಿ ವಸತಿ ಶಾಲೆ, ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಗಳಿವೆ. ತಾಲ್ಲೂಕಿಗೊಂದು ಆದಿವಾಸಿ ಭವನಗಳಿವೆ. ಆದಿವಾಸಿ ಯುವಕರಿಗೆ ಉದ್ಯೋಗ ನೀಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಹಾಡಿಗಳಲ್ಲಿ ಮದ್ಯಪಾನ ನಿಷೇಧಿಸಬೇಕು. ಬುಡಕಟ್ಟು ಮಕ್ಕಳನ್ನು ನೇರವಾಗಿ ಶಾಲಾ ಕಾಲೇಜಿಗೆ ದಾಖಲಿಸಬೇಕು. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ವಿದ್ಯಾವಂತ ಬುಡಕಟ್ಟು ಜನರು ಸರ್ಕಾರದ ಯೋಜನೆಗಳನ್ನು ತಿಳಿದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಹೆಚ್.ಎಸ್. ಗಿರಿಜಾಂಬ ಮಾತನಾಡಿ ಸಂಶೋಧಕರು ಸರ್ಕಾರದ ಯೋಜನೆಗಳು ಬುಡಕಟ್ಟು ಸಮುದಾಯಕ್ಕೆ ತಲುಪುತ್ತಿದೆಯಾ ಎಂಬುದರ ಬಗ್ಗೆ ಅಧ್ಯಯನ ಮಾಡಬೇಕು. ನಮ್ಮ ಸಂಶೋಧನಾ ಸಂಸ್ಥೆಯಿಂದಲೂ ಕೇರಳ ರಾಜ್ಯಕ್ಕೆ ಅಧ್ಯಯನಕ್ಕೆ ಹೋಗಿದ್ದೆವು. ಬೇರೆ ರಾಜ್ಯದ ಕಲ್ಯಾಣ ಯೋಜನೆಗಳನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆಯೇ? ಎಂಬ ಬಗ್ಗೆ ಚರ್ಚೆ ಆಗಬೇಕು. ನಮ್ಮ ಬುಡಕಟ್ಟು ಜನರಿಗೆ ಬೇರೆ ರಾಜ್ಯದ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿ ಅವರ ಅಭಿಪ್ರಾಯಗಳನ್ನು ತಿಳಿಸಬೇಕು ಎಂದರು.

ವಿಚಾರ ಸಂಕಿರಣದಲ್ಲಿ ಡಾ. ಮೋಹನ್‌ಕುಮಾರ್, ಡಾ. ಕಲಾವತಿ, ಪ್ರಸನ್ನಕುಮಾರ್, ರವಿಕುಮಾರ್, ಬಿ.ಆರ್. ಮಂಜುನಾಥ್, ರಮೇಶ್ ಕೆ., ಲೆಕ್ಕಾಧಿಕಾರಿ ಬಿ.ಆರ್. ಭವ್ಯ, ಅಧೀಕ್ಷಕಿ ಎಂ.ವಿ. ನಾಗರತ್ನ, ನಾಗೇಂದ್ರ ಹೆಬ್ಬಾರ್, ವಿಜಯ್‌ಕುಮಾರ್ ಹಾಗೂ ಕಛೇರಿ ಸಿಬ್ಬಂದಿ ಹಾಜರಿದ್ದರು.

Leave a Reply