
ವರದಿ :-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಮಾ. 31:-ವಯಸ್ಕರು, ವಯೋವೃದ್ಧರು ಹಾಗೂ ಯುವಜನತೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗಿ ಆರೋಗ್ಯ ಕಾಪಾಡಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಮುಂದಾಗುವಂತೆ ಶಿಕ್ಷಕ ಹಂಪಾಮರ ತುಳಸಿರಾಮನಾಯಕ ಹೇಳಿದರು.
ಕೆ.ಆರ್.ನಗರ ತಾಲೂಕಿನ ಹಂಪಾಪುರ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ಯುವಕರ ಸಂಘ, ವಿಸ್ಮಯ ಆಸ್ಪತ್ರೆ, ಎಎಸ್‌ಜಿ ಕಣ್ಣಿನ ಆಸ್ಪತ್ರೆ ಮತ್ತು ಲಯನ್ಸ್ ಜೀವಧಾರ ರಕ್ತನಿಧಿ ಇವರ ಸಹಯೋಗದಲ್ಲಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಸಕ್ಕರೆ ಕಾಯಿಲೆ, ರಕ್ತದೊತ್ತಡ ಎಂಬುದು ಸಾಮಾನ್ಯವಾಗಿದ್ದು, ಕಾಲಕಾಲಕ್ಕೆ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯುವುದಲ್ಲದೆ ಇವೆರಡು ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.
ಎಲ್ಲಾರು ಆರೋಗ್ಯದ ಕಡೆ ಗಮನ ಹರಿಸಿದ್ದಲ್ಲಿ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಂಡಲ್ಲಿ ದೇಹದಲ್ಲಿ ಕಂಡು ಬರುವ ಬದಲಾವಣೆಗಳಿಗೆ ತಕ್ಕಂತೆ ಚಿಕಿತ್ಸೆ ಔಷಧಿಗಳನ್ನು ವೈದ್ಯರ ಸಲಹೆಯಂತೆ ಪಡೆದುಕೊಂಡರೆ ಸರಿರೆಕ್ಕೆ ರೋಗಗಳು ಹರಡದಂತೆ ಮತ್ತು ಮನುಷ್ಯ ಆರೋಗ್ಯವಾಗಿ ಇರಬಹುದಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲಾ ವರ್ಗದ ಜನರಲ್ಲಿಯು ಹೃದಯಾಘಾತ ಎಂಬುದು ಹೆಚ್ಚಾಗಿದ್ದು, ಹದಿಹರೆಯದ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಪ್ರತಿಯೊಬ್ಬ ಯುವಕರು ಹೃದಯಕ್ಕೆ ಸಂಬಂಧಿಸಿದ ತಪಾಸಣೆ ಮಾಡಿಕೊಂಡು ಅದಕ್ಕೆ ತಕ್ಕಂತೆ ಚಿಕಿತ್ಸೆಯೊಂದಿಗೆ ಉತ್ತಮ ಜೀವನಶೈಲಿ ಅಳವಡಿಸಿಕೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಮಾನವನ ಎಂದಿನ ಜೀವನಶೈಲಿಯಲ್ಲಿ ಉತ್ತಮ ಆಹಾರ ಸೇವನೆ, ಕಾಲಕಾಲಕ್ಕೆ ಚಿಕಿತ್ಸೆ, ರೋಗಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ವ್ಯಾಯಾಮ ರೂಢಿಸಿಕೊಂಡು ಆರೋಗ್ಯ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್.ಕೆ.ಆರ್.ನಗರ ತಾಲೂಕು ನಾಯಕ ಸಮಾಜದ ಅಧ್ಯಕ್ಷ ಸುಬ್ಬಕೃಷ್ಣ ಪ್ರಧಾನ ಕಾರ್ಯದರ್ಶಿ ಸಾತಿಗ್ರಾಮ ಗಣೇಶ್, ಗ್ರಾಮದ ಲಕ್ಷ್ಮೀನಾರಾಯಣಸ್ವಾಮಿ ಯುವಕರ ಸಂಘದ ಪದಾಧಿಕಾರಿಗಳಾದ ರಾಜು, ಪ್ರದೀಪ್, ಕಿಶೋರ್, ಮನು, ಲೋಕೇಶ್ ಗೌಡ, ವಿವೇಕ್, ವಿನೋದ್‌ರಾಜ್ ಮತ್ತಿತರರು ಪಾಲ್ಗೊಂಡಿದ್ದರು.
ಆರೋಗ್ಯ ತಪಾಸಣ ಶಿಬಿರದಲ್ಲಿ ಡಾ. ರಘು , ಡಾ. ಅರುಣ್ ಮತ್ತು ಸಿಬ್ಬಂದಿ ನೂರಾರು ರೋಗಿಗಳಿಗೆ ಹೃದಯ ತಪಾಸಣೆ, ಕೀಲು ಮತ್ತು ಮೂಳೆ ತಪಾಸಣೆ, ರಕ್ತದಾನ, ಇಎನ್ಟಿ, ಕಣ್ಣಿನ ತಪಾಸಣೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಸಾಮಾನ್ಯ ಕಾಯಿಲೆಗಳ ತಪಾಸಣೆ ನಡೆಸಿ ಚಿಕಿತ್ಸೆಯೊಂದಿಗೆ ಉಚಿತವಾಗಿ ಔಷಧಿ ನೀಡಿದರು.





