
ಮೈಸೂರು :- ಮಾಧ್ಯಮದಲ್ಲಿ ಮಹಿಳೆಯರಿಗಾಗಿ ರುವ ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ರೂಸಾ 2.0 ಇವರ ಸಹಯೋಗದಲ್ಲಿ ಎರಡು ದಿನದ ಕಾರ್ಯಗಾರ ಆಯೋಜಿಸಲಾಗಿತ್ತು. ಎರಡನೇ ದಿನದ ಕಾರ್ಯಗಾರದ ಕುರಿತು ಮಾತನಾಡಿದ ನಾರ್ತ್ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಬಿ. ಕೆ.ರವಿ ರವರು ಪ್ರಾರಂಭದದಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಕುರಿತು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ಪತ್ರಕರ್ತರಾದವರು ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿದಿರಬೇಕು ಹಾಗೂ ಮೆಂಟಲಿ ಪ್ರಿಪೇರ್ ಆಗಿರಬೇಕು. ಪ್ರತಿಭೆ ಹೊಂದಿರುವವನು ಮಾತ್ರ ಒಬ್ಬ ಉತ್ತಮ ಪತ್ರಕರ್ತ ನಾಗಲು ಸಾಧ್ಯ ಎಂದರು. ಕೆಲಸದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ, ನಡೆ, ಕಠಿಣ ಪರಿಶ್ರಮ ನಿಮ್ಮನ್ನು ದೊಡ್ಡ ವ್ಯಕ್ತಿಯನ್ನಾಗಿ ಗುರುತಿಸುತ್ತದೆ ಎಂದರು. ಸಮಾಜದಲ್ಲಿ ಹೆಣ್ಣುಮಕ್ಕಳು ಅವಕಾಶಗಳಿಂದ ವಂಚಿತರಾಗುತ್ತಿರುವುದರ ಕುರಿತು ಮಾತನಾಡಿದರು ಮತ್ತು ಮನರಂಜನೆ ಮಾದ್ಯಮದಲ್ಲಿ ದೊರೆತಕ್ಕಂತ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. AI ತಂತ್ರಜ್ಞಾನದ ಕುರಿತು ಮಾತನಾಡುತ್ತಾ AI ಮಾನವನ ಜ್ಞಾನಕ್ಕೆ ಸರಿಸಾಟಿಯಾಗುವುದಿಲ್ಲ ಎಂದರು. ಶೋಷಿತರ, ಬಡವರ, ಧ್ವನಿಯಿಲ್ಲದವರ ಧ್ವನಿಯಾಗುವುದೇ ಆರೋಗ್ಯಕರ ಮಾಧ್ಯಮ. ಈ ಮಾಧ್ಯಮ ಇಲ್ಲದಿದ್ದರೆ ಸಮಾಜ ನಾಶವಾಗುತ್ತದೆ ಆದ್ದರಿಂದ ಇದು ಅವಶ್ಯಕ. ಈ ಆರೋಗ್ಯಕರ ಮಾಧ್ಯಮದ ಮೂಲಕ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ ಎಂದರು.

ಈ ಕಾರ್ಯಾಗಾರದ ಕುರಿತು ಮಾತನಾಡಿದ ಪತ್ರಕರ್ತೆ ಹಾಗೂ ನಿರ್ದೇಶಕಿಯಾದ ಸುಮನಾ ಕಿತ್ತೂರ್ ಅವರು ಘಟನೆ ನಡೆದ ಸ್ಥಳಗಳಿಗೆ ಹೋಗಿ ಸುದ್ದಿ ತರುವುದೇ ಮಹಿಳೆಯರಿಗೆ ಒಂದು ದೊಡ್ಡ ಸವಾಲಾಗಿತ್ತು ಎಂದರು. ಪತ್ರಕರ್ತರು ಹಾಗೂ ನಿರ್ದೇಶಕರಾದವರು ಯಾವುದೇ ಒಂದು ವಿಷಯವನ್ನು ಒಂದೇ ನೋಟದಲ್ಲಿ ನೋಡಬಾರದು ಅದನ್ನು ಎಲ್ಲಾ ರೀತಿಯಲ್ಲಿಯೂ ಆಲೋಚಿಸಬೇಕು. ಹೆಣ್ಣಿಗೆ ಹೆಣ್ಣು ಬೆಂಬಲವಾಗಿ ನಿಂತರೆ ಒಂದು ಹೆಣ್ಣು ಏನು ಬೇಕಾದರೂ ಸಾಧಿಸಬಹು ಮತ್ತು ಯಾವ ಹಂತಕ್ಕಾದರೂ ತಲುಪಬಹುದು ಎಂಬುದನ್ನು ತೇಜಸ್ವಿಯವರ ಕೃತಿಯ ಮೂಲಕ ಮೆಲುಕು ಹಾಕಿದರು ಮತ್ತು ಸಿನಿಮಾ ರಂಗ ಹಾಗೂ ದೃಶ್ಯ ಮಾಧ್ಯಮಗಳಲ್ಲಿನ ತಾರತ್ಯಮಗಳ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕು ಮತ್ತು ನಮಗಿದ್ದ ಆಗಿನ ಸವಾಲುಗಳು ಈಗ ನಿಮಗಿಲ್ಲ ಇರುವುದು ಆಯ್ಕೆಗಳು ಮಾತ್ರ ಎಂದರು. ಪತ್ರಿಕೋದ್ಯಮ ನನ್ನ ಮೊದಲ ಆಯ್ಕೆ ಹಾಗೂ ಧ್ವನಿ ಇಲ್ಲದವರ ಧ್ವನಿಯಾಗಬೇಕೆಂದು ಕಲಿಸಿ ಕೊಟ್ಟಿದ್ದೆ ಪತ್ರಿಕೋದ್ಯಮ ಎಂದು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ಕಾರ್ಯಕ್ರಮ ಕುರಿತು ಮಾತನಾಡಿದ RTI ಕಮೀಷನರ್ ಆದ ಬಿ. ಆರ್.ಮಮತಾ ರವರು ತಮ್ಮ ಶೈಕ್ಷಣಿಕ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಮೆಲುಕು ಹಾಕಿದರು.ಕಟ್ಟಕಡೆಯ ವ್ಯಕ್ತಿಗೂ ಅವಕಾಶಗಳು ದೊರೆಯಬೇಕೆಂದರು ಮತ್ತು ಅವರಿಗೆ ದೊರೆತಂತಹ ಅವಕಾಶಗಳು ಹಾಗೂ ಕೆಲಸಗಳಲ್ಲಾದ ಅನುಭವಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ಪತ್ರಿಕೋದ್ಯಮ ಎನ್ನುವುದು ಒಂದಕ್ಕೆ ಸೀಮಿತವಾಗಿಲ್ಲ ಇದು ಹಲವಾರು ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ.ಪತ್ರಿಕೋದ್ಯಮದಲ್ಲಿ ತಮ್ಮದೇಯಾದ ಚಾಪು ಮೂಡಿಸಿದ ಮಹಿಳೆಯರ ಹಾಗೂ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದರು. ಪ್ರತಿಯೊಬ್ಬರು ಮಾಡುವ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಪುರುಷರು ಹುದ್ದೆಗಳಲ್ಲಿ ಹೆಣ್ಣು ಎನ್ನುವ ಕಾರಣಕ್ಕೆ ಅವರನ್ನು ತಿರಸ್ಕರಿಸದೆ ಅರ್ಹರಾದವರಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದರು.
ಈ ಕಾರ್ಯಾಗಾರದಲ್ಲಿ ವಿಭಾಗದ ಮುಖಸ್ಥರಾದ ಪ್ರೊ . ಎನ್. ಮಮತರವರು ಹಾಗೂ ಅತಿಥಿ ಉಪನ್ಯಾಸಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು, ವಿಭಾಗದ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.




