
ಕೊಪ್ಪಳ: ದೇಶದ ಎಲ್ಲೆಡೆ ಅಂತರಜಾತಿ ವಿವಾಹದ ಹಿನ್ನೆಲೆ ಘಟನೆ ನಡೆದ ಕುಟುಂಬದ ಅಸಮಾಧಾನ ಪದೆ ಪದೆ ಹಿಂಸಾತ್ಮಕ ರೂಪ ಪಡೆದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಾಲೂಕಿನ ಹಂದ್ರಾಳ ಗ್ರಾಮದಲ್ಲಿ 4 ತಿಂಗಳ ಗರ್ಭಿಣಿಯಾಗಿರುವ ಮಹಿಳೆಯ ಮೇಲೆ ಸ್ವಂತ ಒಡಹುಟ್ಟಿದ ಸಹೋದರನೇ ಮನೆಯಲ್ಲಿಯೆ ಇದ್ದ ಕೊಡಲಿಯಿಂದ ಮಾರನಾಂತಿಕ ಹಲ್ಲೆ ನಡೆಸಿ ಸಾಯಿಸಲು ಪ್ರಯತ್ನಿಸಿದ ಘಟನೆ ಬುಧವಾರ (ಫೆಬ್ರವರಿ 18) ನಡೆದಿದೆ. ಅದೃಷ್ಟವಶಾತ್ ಸಂತ್ರಸ್ತ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡ ಮಹಿಳೆಯನ್ನು 23 ವರ್ಷದ ಮೀನಾಕ್ಷಿ ಎಂದು ಗುರುತಿಸಲಾಗಿದೆ. ಅವರು ಎರಡು ವರ್ಷಗಳ ಹಿಂದೆ ಮನೆಯವರವಿರೋಧವನ್ನು ಲೆಕ್ಕಿಸದೆ ಹಂದ್ರಾಳ ಗ್ರಾಮದ ಉದಯ ಎಂಬ ST ಸಮುದಾಯದ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದರು. ಮೀನಾಕ್ಷಿ ಮೂಲತಃ ಕುಕನೂರು ತಾಲೂಕಿನ ಚಿತ್ತಾಪುರ ಗ್ರಾಮದವರು. ವಿವಾಹದ ನಂತರ ದಂಪತಿ ಹಂದ್ರಾಳದಲ್ಲೇ ನೆಲೆಸಿದ್ದರು. ಸದ್ಯ ಮೀನಾಕ್ಷಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ.
ಕುಟುಂಬದವರು ಈ ವಿವಾಹವನ್ನು ಆರಂಭದಿಂದಲೇ ವಿರೋಧಿಸುತ್ತಿದ್ದರು ಎಂದು ತಿಳಿದುಬಂದಿದೆ. ವಿಶೇಷವಾಗಿ ಸಹೋದರ ಮಂಜುನಾಥ್ ಅಸಮಾಧಾನಗೊಂಡಿದ್ದು, ಇದನ್ನು ಕುಟುಂಬದ ಮರ್ಯಾದೆಗೆ ಧಕ್ಕೆ ಎಂದು ಭಾವಿಸಿದ್ದಾನೆ ಎನ್ನಲಾಗಿದೆ. ಘಟನೆ ನಡೆದ ದಿನ ಮೀನಾಕ್ಷಿ ತಮ್ಮ ಪತಿ ಉದಯನ ಸಹೋದರನ ಮದುವೆ ಕಾರ್ಯಕ್ರಮದ ನಿಮಿತ್ತ ಹಂದ್ರಾಳ ಗ್ರಾಮಕ್ಕೆ ಬಂದಿದ್ದರು. ಮದುವೆ ಸಮಾರಂಭದ ನಡುವೆ ಪರಿಸ್ಥಿತಿ ತೀವ್ರಗೊಂಡಿದೆ.
ಮದುವೆ ಕಾರ್ಯಕ್ರಮ ನಡೆಯುತ್ತಿರುವ ವೇಳೆ ಮೀನಾಕ್ಷಿ ಹಾಜರಿದ್ದುದನ್ನು ಗಮನಿಸಿದ ಮಂಜುನಾಥ್, ಸಿಟ್ಟಿನಲ್ಲೇ ಕೊಡಲಿಯನ್ನು ಹಿಡಿದುಕೊಂಡು ಆಕೆಯ ಮೇಲೆ ದಾಳಿ ನಡೆಸಿದ್ದಾನೆ ಎಂದು ಮೊದಲ ಹಂತದ ತನಿಖೆಯಿಂದ ತಿಳಿದುಬಂದಿದೆ. ಕೊಡಲಿ ಏಟಿನಿಂದ ಮೀನಾಕ್ಷಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸಮಾರಂಭದ ಸ್ಥಳದಲ್ಲಿದ್ದವರು ತಕ್ಷಣ ಮಧ್ಯಪ್ರವೇಶಿಸಿ ಮಂಜುನಾಥನ ದಾಳಿಯನ್ನು ತಡೆಯಲು ಯತ್ನಿಸಿದ್ದು, ಕೊಡಲಿ ಏಟಿನಿಂದ ಗಾಯಗೊಂಡ ಮೀನಾಕ್ಷಿಯನ್ನು ಕೂಡಲೇ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವೈದ್ಯರ ಪ್ರಕಾರ ಮೀನಾಕ್ಷಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿಗೆ ತಕ್ಷಣದ ಪ್ರಾಣಾಪಾಯ ಇಲ್ಲ ಎಂದು ತಿಳಿಸಿದ್ದಾರೆ. ಆದಾಗ್ಯೂ ಕೆಲವು ದಿನಗಳು ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಅಳವಂಡಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯಾದ ಮಂಜುನಾಥನನ್ನು ಬಂಧಿಸಿ ವಿಚಾರಣೆ ಆರಂಭಿಸಲಾಗಿದೆ. ಪೋಲಿಸರ ಪ್ರಾಥಮಿಕ ವಿಚಾರಣೆಯಲ್ಲಿ ಅಂತರಜಾತಿ ವಿವಾಹದ ವಿಷಯವೇ ದಾಳಿಗೆ ಕಾರಣ ಎಂಬುದು ಸದ್ಯಕ್ಕೆ ಕಂಡುಬಂದಿದೆ. ಈ ಪ್ರಕರಣ ಸಂಬಂಧ ಹಲ್ಲೆ ಹತ್ಯೆ ಯತ್ನದಡಿ ಪೋಲಿಸರು ಪ್ರಕರಣ ದಾಖಲಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಮರ್ಯಾದಾ ಹತ್ಯೆ ಹಾಗೂ ಹತ್ಯೆ ಯತ್ನ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಂತರಜಾತಿ ಮತ್ತು ಅಂತರಧರ್ಮ ವಿವಾಹಗಳ ಹಿನ್ನೆಲೆ ಕುಟುಂಬದ ಅಸಹನೆ ಹಿಂಸೆಗೆ ತಿರುಗುತ್ತಿರುವ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಚಿಂತೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಮರ್ಯಾದೆಗೇಡು ಹತ್ಯೆ ತಡೆಯಲು ಪ್ರತ್ಯೇಕ ಕಾನೂನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದು ಗಮನಾರ್ಹ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳು ಅಗತ್ಯವೆಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸದ್ಯ ಗಾಯಾಳು ಮೀನಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಪ್ರಕರಣದ ಸಂಪೂರ್ಣ ತನಿಖೆ ಕೈಗೊಂಡಿದ್ದಾರೆ.



