
ಕಾಡಿನ ನಾಶವೇ ಮಾನವ ಬದುಕಿಗೆ ಅತಿದೊಡ್ಡ ಅಪಾಯ: ಕೆ.ಆರ್.ನಗರದಲ್ಲಿ ಭೇರ್ಯ ರಾಮಕುಮಾರ್ ಅಭಿಪ್ರಾಯ

ಕೆ.ಆರ್.ನಗರ:- ಪರಿಸರವನ್ನು ರಕ್ಷಿಸದೆ ಮುಂದುವರಿದರೆ ಮಾನವಕುಲದ ಭವಿಷ್ಯವೇ ಅಂಧಕಾರದಲ್ಲಿ ಮುಳುಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಭೇರ್ಯ ರಾಮಕುಮಾರ್ ಅವರು ಗಂಭೀರ ಎಚ್ಚರಿಕೆ ನೀಡಿದರು.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಆಂಜನೇಯ ಬ್ಲಾಕ್ ಸರ್ಕಾರಿ ಪ್ರೌಢಶಾಲೆಯಲ್ಲಿರುವ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮನಮುಟ್ಟುವಂತೆ ವಿವರಿಸಿದರು.
ಮಾನವ ಜೀವನ ಮತ್ತು ಪ್ರಕೃತಿ ನಡುವಿನ ಅತೀ ಅವಿಭಾಜ್ಯ ಸಂಬಂಧವನ್ನು ಉಲ್ಲೇಖಿಸಿದ ರಾಮಕುಮಾರ್, ನಮ್ಮ ಹಿರಿಯರು ಮುಂದಿನ ಪೀಳಿಗೆಯ ಬಗ್ಗೆ ದೂರದೃಷ್ಟಿಯಿಂದ ಯೋಚಿಸಿದ ಕಾರಣವೇ ಇಂದು ನಮಗೆ ಹಸಿರು ಕಾಡುಗಳು, ಶುದ್ಧ ನೀರು, ಸ್ವಚ್ಛ ಗಾಳಿ ಲಭಿಸಿದೆ. ಆದರೆ ಇಂದಿನ ತಲೆಮಾರು ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶಪಡಿಸುತ್ತಿದೆ. ಈ ದುರಂತ ಮುಂದುವರಿದರೆ ಭವಿಷ್ಯದ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಅಭಿವೃದ್ಧಿ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಅತಿರೇಕದ ಚಟುವಟಿಕೆಗಳತ್ತ ಗಮನ ಸೆಳೆದ ಅವರು, ಹೆದ್ದಾರಿ ನಿರ್ಮಾಣ, ಐಷಾರಾಮಿ ರೆಸಾರ್ಟ್‌ಗಳು, ವಾಣಿಜ್ಯ ಕಟ್ಟಡಗಳು, ಕೃಷಿ ವಿಸ್ತರಣೆ ಹಾಗೂ ಗೃಹೋಪಯೋಗಿ ವಸ್ತುಗಳ ತಯಾರಿಕೆಗಾಗಿ ಪ್ರತಿದಿನ ಸಾವಿರಾರು ಮರಗಳನ್ನು ಕಡಿದು ಹಾಕಲಾಗುತ್ತಿದೆ. ಇದರ ಪರಿಣಾಮವಾಗಿ ಪ್ರಕೃತಿಯ ಸಮತೋಲನ ಸಂಪೂರ್ಣವಾಗಿ ಹದಗೆಡುತ್ತಿದೆ ಎಂದರು.
ಮರಗಳ ಹನನದಿಂದಾಗಿ ಶುದ್ಧ ಗಾಳಿ ಮತ್ತು ಶುದ್ಧ ನೀರಿನ ಕೊರತೆ ಉಂಟಾಗುತ್ತಿದೆ. ಇದರ ಪರಿಣಾಮವಾಗಿ ಮಾನವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶದ ಸಮಸ್ಯೆಗಳು, ಅಲರ್ಜಿಗಳು ಮತ್ತು ವಿವಿಧ ಸೋಂಕು ರೋಗಗಳು ಹೆಚ್ಚುತ್ತಿವೆ. ಮನುಷ್ಯನ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕುಸಿಯುತ್ತಿದ್ದು, ಅಕಾಲಿಕ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದರು.
ಪರಿಸರ ನಾಶದ ಪರಿಣಾಮ ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಲ್ಲ ಎಂದು ವಿವರಿಸಿದ ಸಾಹಿತಿ, ಕಾಡುಗಳ ವಿನಾಶದಿಂದಾಗಿ ಕಾಡುಪ್ರಾಣಿಗಳಿಗೆ ಆಹಾರ ಹಾಗೂ ವಾಸಸ್ಥಳಗಳ ಕೊರತೆ ಉಂಟಾಗಿದೆ. ಇದರಿಂದ ಆನೆಗಳು ಕೃಷಿಭೂಮಿಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಚಿರತೆಗಳು ಮತ್ತು ಇತರೆ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸಿ ಸಾಕುಪ್ರಾಣಿಗಳ ಮೇಲೆ ಹಾಗೂ ಕೆಲವೊಮ್ಮೆ ಮಾನವರ ಮೇಲೂ ದಾಳಿ ನಡೆಸುತ್ತಿರುವುದು ಹೆಚ್ಚಾಗಿದೆ. ಈ ಎಲ್ಲಾ ಸಮಸ್ಯೆಗಳ ಮೂಲ ಕಾರಣ ಮನುಷ್ಯನ ಅತಿರೇಕದ ಸ್ವಾರ್ಥವೇ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಅತಿವೃಷ್ಟಿ, ಅನಾವೃಷ್ಟಿ, ಭೂಕುಸಿತ, ಪ್ರವಾಹ ಹಾಗೂ ಬರಗಾಲದಂತಹ ಪ್ರಕೃತಿ ವಿಕೋಪಗಳಿಗೂ ಕಾಡಿನ ನಾಶವೇ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳು ಗಂಭೀರವಾಗಿ ತೊಂದರೆಗೆ ಸಿಲುಕುತ್ತಿದ್ದು, ರೈತ ಸಮುದಾಯದ ಬದುಕು ಸಂಕಷ್ಟದಲ್ಲಿದೆ. ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಪರಿಸರ ಸಂರಕ್ಷಣೆ ಎಂಬುದು ಕೇವಲ ಸರ್ಕಾರ ಅಥವಾ ಸಂಘ ಸಂಸ್ಥೆಗಳ ಹೊಣೆಗಾರಿಕೆ ಅಲ್ಲ. ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಒತ್ತಿ ಹೇಳಿದರು. ಸಣ್ಣ ಸಣ್ಣ ಕಾರ್ಯಗಳಿಂದಲೂ ದೊಡ್ಡ ಬದಲಾವಣೆ ಸಾಧ್ಯ ಎಂದು ತಿಳಿಸಿದ ಅವರು, ಪ್ರತಿಯೊಬ್ಬರೂ ತಮ್ಮ ಜನ್ಮದಿನ, ತಮ್ಮ ತಂದೆ-ತಾಯಿಯ ಜನ್ಮದಿನ, ಹಿರಿಯರ ಸ್ಮರಣಾರ್ಥ ಹಾಗೂ ಹಬ್ಬ-ಜಾತ್ರೆಗಳ ಸಂದರ್ಭದಲ್ಲಿ ಕನಿಷ್ಠ ಒಂದೊಂದು ಸಸಿಯನ್ನು ನೆಟ್ಟು ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿದರೆ ಭವಿಷ್ಯ ಸುರಕ್ಷಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟ ರಾಮಕುಮಾರ್, ಶಾಲಾ ಹಂತದಲ್ಲೇ ಪರಿಸರ ಶಿಕ್ಷಣ ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ವೇಳೆ ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಬೋಧಿಸಿ, ಪ್ರಕೃತಿಯ ರಕ್ಷಣೆಗೆ ಸದಾ ಬದ್ಧರಾಗುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಆಂಜನೇಯ ಬ್ಲಾಕ್ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾ ಎ.ಎಸ್. ಅವರು ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಶಾಲಾ ಇಕೋ ಕ್ಲಬ್‌ಗಳ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಪಡೆದ ಜ್ಞಾನವನ್ನು ತಮ್ಮ ಮನೆ ಹಾಗೂ ಸಮಾಜದವರೆಗೆ ಕೊಂಡೊಯ್ಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಕರೂ ಆಗಿರುವ ಹಾಗೂ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್‌ನ ಮುಖ್ಯಸ್ಥರಾದ ಉದಯ ಗೌಡ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ನಿರಂತರ ಜಾಗೃತಿ ಮೂಡಿಸಲು ಇಕೋ ಕ್ಲಬ್ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್‌ನ ಪದಾಧಿಕಾರಿಗಳಾದ ಹರಿಪ್ರಸಾದ್, ಪ್ರಣತಿ, ಲಿಖಿತ್, ಧನುಷ್, ನಿಖಿತಾ ಸೇರಿದಂತೆ ಕ್ಲಬ್ ಸದಸ್ಯರಾದ ಅನೇಕ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಪರಿಸರ ಸಂರಕ್ಷಣೆಯ ಕುರಿತಂತೆ ವಿದ್ಯಾರ್ಥಿಗಳಿಂದ ಘೋಷಣೆಗಳು, ಚರ್ಚೆಗಳು ಹಾಗೂ ಪ್ರತಿಜ್ಞಾ ವಾಚನ ನಡೆಯಿತು.
ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಹೊಣೆ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.





