
ಗ್ರಾಹಕನಿಗೆ ಕಿಮ್ಮತ್ತಿಲ್ಲದ ಹಾಸನದ ಓಲಾ ಶೋರೂಂ ಈಗ ನೊಂದ ಜೀವಗಳ ರಣಾಂಗಣ: ಸರ್ವಿಸ್ ಹೆಸರಲ್ಲಿ ಬಿಡಿಭಾಗಗಳ ಕಳ್ಳಾಟ? ಬಯಲಾಗುತ್ತಿದೆ ಈ ಕಂಪನಿಯ ಅಸಲಿಯತ್ತು.
ವರದಿ : : ರಘುನಂದನ್
ಹಾಸನ :- “ಅದು ಸ್ಕೂಟರ್ ಅಲ್ಲ, ಮುಗ್ಧ ಗ್ರಾಹಕನ ಪಾಲಿನ ‘ನಂಬಿಕೆ ದ್ರೋಹದ ಸಂಕೇತ’ ಹಗಲಿರುಳು ದುಡಿಯುವ ಕಾರ್ಮಿಕನ ಹೊಟ್ಟೆ ಮೇಲೆ ಹೊಡೆದು, ಅನ್ನದಾತನ ಬೆವರಿನ ಹಣಕ್ಕೆ ಕನ್ನ ಹಾಕಿ, ನೂರಾರು ಮುಗ್ಧ ಸಾರ್ವಜನಿಕರ ಬದುಕನ್ನೇ ಅತಂತ್ರಗೊಳಿಸಿದೆ ಈ ಓಲಾ ಸಂಸ್ಥೆ. 10×10 ಅಡಿಯ ಶೆಡ್ನಲ್ಲಿ ‘ದರೋಡೆ’ ನಡೆಸುತ್ತಿರುವ ಓಲಾ ಸಂಸ್ಥೆಯ ಅಟ್ಟಹಾಸಕ್ಕೆ ಈಗ ಹಾಸನವೇ ರಣಾಂಗಣ. ಲಕ್ಷ ಸುರಿದು ಕೊಂಡ ಗಾಡಿ ಈಗ ‘ಗುಜರಿ’ಯಾಗಿದೆ; ಸಾಲದ ಕಂತು ಕಟ್ಟಲಾಗದೆ ಶ್ರಮಜೀವಿಗಳ ಬದುಕು ಅಯೋಮಯವಾಗಿದೆ. ಇದು ಅಕ್ರಮದ ಪರಮಾವಧಿಯಲ್ಲವೇ? ನ್ಯಾಯ ಸಿಗದಿದ್ದರೆ ಗ್ರಾಹಕರ ಆಕ್ರೋಶದ ಕಟ್ಟೆ ಒಡೆಯುವುದು ಖಚಿತ ”

ಹಾಸನ ಪೆಟ್ರೋಲ್ ಬೆಲೆ ಏರಿಕೆಯ ಬಿಸಿಯಿಂದ ಬಚಾವಾಗಲು ‘ಪರಿಸರ ಸ್ನೇಹಿ’ ಎಂಬ ಬಣ್ಣದ ಮಾತಿಗೆ ಮರುಳಾಗಿ ಓಲಾ (Ola) ಸ್ಕೂಟರ್ ಖರೀದಿಸಿದ ಹಾಸನದ ಗ್ರಾಹಕರು ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಬಿ.ಎಂ. ರಸ್ತೆಯಲ್ಲಿರುವ ಓಲಾ ಶೋರೂಂ ಈಗ ವ್ಯವಹಾರದ ಕೇಂದ್ರವಾಗಿ ಉಳಿದಿಲ್ಲ, ಬದಲಿಗೆ ವಂಚನೆಗೆ ಒಳಗಾದ ನೊಂದ ಗ್ರಾಹಕರ ಆಕ್ರೋಶದ ಆಖಾಡವಾಗಿ ಮಾರ್ಪಟ್ಟಿದೆ.
ಶೆಡ್ನಲ್ಲಿ ಸರ್ವಿಸ್, ರಸ್ತೆಯಲ್ಲಿ ಶೋರೂಂ: ಕೋಟ್ಯಾಂತರ ರೂಪಾಯಿ ಐಪಿಒ (IPO) ಮೂಲಕ ಸಾರ್ವಜನಿಕರ ಹಣ ಗುಡ್ಡೆ ಹಾಕಿದ ಓಲಾ ಕಂಪನಿ, ಹಾಸನದ ಜನತೆಗೆ ನೀಡುತ್ತಿರೋದು ಕೇವಲ 10×10 ಅಡಿಯ ಒಂದು ಸಣ್ಣ ಶೆಡ್ ಸರ್ವಿಸ್ ಸೆಂಟರ್. ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ, ಸುಸಜ್ಜಿತ ವರ್ಕ್ಶಾಪ್ ಸಹ ಹೊಂದಿರದ ಇಂತಹ ‘ಡಬ್ಬಾ’ ಕೇಂದ್ರಗಳಿಗೆ ಸಾರಿಗೆ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದ್ದಾದರೂ ಹೇಗೆ? ಇಲ್ಲಿ ಗ್ರಾಹಕರಿಗೆ ಕುಳಿತುಕೊಳ್ಳಲು ಒಂದು ಕುರ್ಚಿಯಿಲ್ಲ, ಕುಡಿಯಲು ನೀರಿಲ್ಲ. ಬದಲಿಗೆ ಶೋರೂಂ ಮುಂದೆ ಧೂಳು ತಿನ್ನುತ್ತಾ ನಿಂತಿರುವ ನೂರಾರು ಸ್ಕೂಟರ್ಗಳ ದರ್ಶನ ಮಾತ್ರ ಸಿಗುತ್ತಿದೆ.
ಅನ್ನದಾತರು ಹಾಗೂ ಗೀಗ್ ಕಾರ್ಮಿಕರ ಬದುಕು ಅಯೋಮಯ : ಹಾಸನದಲ್ಲಿ ಓಲಾ ಕಂಪನಿಯ ಬಣ್ಣದ ಮಾತಿಗೆ ಮರುಳಾದ ಡೆಲಿವರಿ ಬಾಯ್ಸ್ ಹಾಗೂ ಮುಗ್ಧ ರೈತರು ಈಗ ಬೀದಿಗೆ ಬಿದ್ದಿದ್ದಾರೆ. ಪೆಟ್ರೋಲ್ ಉಳಿಸಲು ಹೋದ ಗೀಗ್ ಕಾರ್ಮಿಕರ ಗಾಡಿಗಳು ತಿಂಗಳುಗಟ್ಟಲೆ ಸರ್ವಿಸ್ ಸೆಂಟರ್ನಲ್ಲೇ ಧೂಳು ತಿನ್ನುತ್ತಿದ್ದು, ಕೈಯಲ್ಲಿ ಕೆಲಸವಿಲ್ಲದೆ, ಸಾಲದ ಕಂತು ಕಟ್ಟಲಾಗದೆ ಕಣ್ಣೀರಿಡುತ್ತಿದ್ದಾರೆ. ಹಳ್ಳಿಗಾಡಿನ ರೈತರನ್ನೇ ಟಾರ್ಗೆಟ್ ಮಾಡಿ ಪಂಗನಾಮ ಹಾಕುತ್ತಿದೆ ಈ ಕಂಪನಿ. ಲಕ್ಷ ಸುರಿದು ಕೊಂಡ ಗಾಡಿ ಈಗ ಈ ಶ್ರಮಿಕ ವರ್ಗಕ್ಕೆ ಹೊರೆಯಾಗಿ ಪರಿಣಮಿಸಿರುವುದು ದುರಂತ.
ಗೋವಾ ಟೂ ಹಾಸನ:
ಓಲಾ ಕಂಪನಿಯ ಈ ‘ಕಳಪೆ ಸೇವೆ’ಯ ಕಿಚ್ಚು ಕೇವಲ ಹಾಸನಕ್ಕೆ ಸೀಮಿತವಾಗಿಲ್ಲ. ಇತ್ತೀಚೆಗೆ ಗೋವಾದಲ್ಲಿ ಗ್ರಾಹಕರೊಬ್ಬರು ತಮ್ಮ ಸ್ಕೂಟರ್ ಸರ್ವಿಸ್ ಆಗದಿದ್ದಕ್ಕೆ ರೊಚ್ಚಿಗೆದ್ದು ಶೋರೂಂಗೆ ಬೆಂಕಿ ಹಚ್ಚಲು ಮುಂದಾದ ಘಟನೆ ಇಡೀ ದೇಶದ ಗಮನ ಸೆಳೆದಿತ್ತು. ಅಷ್ಟೇ ಅಲ್ಲ, ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ರಕ್ಷಣಾ ಪ್ರಾಧಿಕಾರ (CCPA) ಕೂಡ 10 ಸಾವಿರಕ್ಕೂ ಅಧಿಕ ದೂರುಗಳ ಹಿನ್ನೆಲೆಯಲ್ಲಿ ಓಲಾಗೆ ನೋಟಿಸ್ ಜಾರಿ ಮಾಡಿದೆ. ಆದರೂ ಈ ಕಂಪನಿಯ ದರ್ಪ ಮಾತ್ರ ಕಡಿಮೆಯಾಗಿಲ್ಲ.
ಬಿಡಿಭಾಗಗಳ ‘ಕಳ್ಳಾಟ’ದ ಗಂಭೀರ ಆರೋಪ: ಹಾಸನದಲ್ಲಿ ಕೇಳಿಬರುತ್ತಿರುವ ಮತ್ತೊಂದು ಆತಂಕಕಾರಿ ಸುದ್ದಿ ಎಂದರೆ ಇಲ್ಲಿನ ಅನಧಿಕೃತ ಸಿಬ್ಬಂದಿ ನಡೆಸುತ್ತಿರುವ ಬಿಡಿಭಾಗಗಳ ಅದಲು-ಬದಲು. ಹೊಸ ಗಾಡಿಯನ್ನು ಸರ್ವಿಸ್ಗೆ ತಂದಾಗ ಅದರಲ್ಲಿರುವ ಒರಿಜಿನಲ್ ಬ್ಯಾಟರಿ ಅಥವಾ ಸಾಫ್ಟ್ವೇರ್ ಸಂಬಂಧಿತ ಭಾಗಗಳನ್ನು ಕಿತ್ತು, ಅದಕ್ಕೆ ಹಳೆಯ ಭಾಗಗಳನ್ನು ಜೋಡಿಸಿ ಗ್ರಾಹಕರಿಗೆ ವಂಚಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದು ಕೇವಲ ಕಳಪೆ ಸರ್ವಿಸ್ ಅಲ್ಲ, ಇದೊಂದು ಸಂಘಟಿತ ‘ಕ್ರಿಮಿನಲ್ ಸ್ಕ್ಯಾಮ್’ ಎಂಬ ಸಂಶಯ ದಟ್ಟವಾಗಿದೆ.
ಉಡಾಫೆ ಸಿಬ್ಬಂದಿ – ಹೈರಾಣಾದ ಹಳ್ಳಿ ಜನ:

ಹತ್ತಾರು ಕಿಲೋಮೀಟರ್ ದೂರದಿಂದ ಬಾಡಿಗೆ ಆಟೋಗಳಲ್ಲಿ ಸ್ಕೂಟರ್ ಹೊತ್ತು ತರುವ ಮುಗ್ಧ ರೈತರಿಗೆ ಇಲ್ಲಿ ಸಿಗುತ್ತಿರೋದು ಕೇವಲ ಉಡಾಫೆ ಉತ್ತರಗಳು ಮಾತ್ರ. “ನಾವೇನು ಮಾಡಕ್ಕಾಗಲ್ಲ, ಬೇಕಿದ್ರೆ ಕಾನ್ಸ್ಯುಮರ್ ಕೋರ್ಟಿಗೆ ಹೋಗಿ” ಎಂದು ದರ್ಪ ತೋರಿಸುವ ಸಿಬ್ಬಂದಿಯ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಸಾಲ ಮಾಡಿ ಗಾಡಿ ಕೊಂಡವನು ಈಗ ಕೋರ್ಟು-ಕಚೇರಿ ಅಲೆಯಬೇಕಾ?
ಓಲಾ ‘ದರೋಡೆ’ ತಡೆಯದಿದ್ದರೆ ಬೀದಿಗಿಳಿಯಲಿದ್ದಾರೆ ಅನ್ನದಾತರು ಹಾಗೂ ಕಾರ್ಮಿಕರು
ಹಾಸನ ಜಿಲ್ಲಾಡಳಿತ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ಜಿಲ್ಲಾಧಿಕಾರಿಗಳು, ಸಾರಿಗೆ ಇಲಾಖೆ (RTO) ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಈ ಕೂಡಲೇ ಬಿ.ಎಂ. ರಸ್ತೆಯಲ್ಲಿರುವ ಓಲಾ ಶೋರೂಂ ಮತ್ತು ಅದರ ಕಪಟ ಸರ್ವಿಸ್ ಸೆಂಟರ್ ಮೇಲೆ ದಾಳಿ ನಡೆಸಬೇಕು. ಈ ಕೇಂದ್ರದ ಅಧಿಕೃತತೆ ಏನು? ಇಲ್ಲಿ ಕೆಲಸ ಮಾಡುತ್ತಿರುವವರು ಓಲಾ ಕಂಪನಿಯ ವೇತನ ಪಡೆಯುವ ನೌಕರರೇ ಅಥವಾ ಬೀದಿ ಬದಿಯ ಅನನುಭವಿ ಮೆಕ್ಯಾನಿಕ್ಗಳೇ? ಎಂಬುದು ಮೊದಲು ತನಿಖೆಯಾಗಬೇಕು. ಸಾರ್ವಜನಿಕರ ಜೇಬಿಗೆ ಕನ್ನ ಹಾಕುತ್ತಿರುವ ಈ ಸಂಸ್ಥೆಯ ಪರವಾನಗಿಯನ್ನು ತಕ್ಷಣವೇ ಅಮಾನತ್ತಿನಲ್ಲಿಡಬೇಕು.

ಕಾರ್ಮಿಕ ಇಲಾಖೆಯು ಇಲ್ಲಿನ ನೌಕರರ ಹಿನ್ನೆಲೆಯನ್ನು ಪರಿಶೀಲಿಸಬೇಕು. ಹೊಸ ಗಾಡಿಗಳ ಬಿಡಿಭಾಗಗಳನ್ನು ಕದ್ದು ಹಳೇಯವುಗಳನ್ನು ಜೋಡಿಸುವ ‘ಪಾರ್ಟ್ಸ್ ಸ್ಕ್ಯಾಮ್’ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಹತ್ತಾರು ಕಿಲೋಮೀಟರ್ ದೂರದಿಂದ ಬಾಡಿಗೆ ವಾಹನಗಳಲ್ಲಿ ಸ್ಕೂಟರ್ ಹೊತ್ತು ತರುವ ರೈತರಿಗೆ ಆಗುತ್ತಿರುವ ಆರ್ಥಿಕ ನಷ್ಟಕ್ಕೆ ಕಂಪನಿಯಿಂದಲೇ ನೇರ ಪರಿಹಾರ ಕೊಡಿಸಬೇಕು.
ನೊಂದ ಗ್ರಾಹಕರಿಗೆ ನ್ಯಾಯ ಸಿಗುವವರೆಗೆ ಈ ಶೋರೂಂ ವಶಕ್ಕೆ ಪಡೆಯಬೇಕು. ಬಣ್ಣದ ಜಾಹೀರಾತು ನೀಡಿ ಮುಗ್ಧ ಜನರನ್ನು ಬಲೆಗೆ ಬೀಳಿಸುತ್ತಿರುವ ಇಂತಹ ಕಾರ್ಪೊರೇಟ್ ಕಂಪನಿಗಳ ವಿರುದ್ಧ ಗ್ರಾಹಕ ವೇದಿಕೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು. ಒಂದು ವೇಳೆ ಜಿಲ್ಲಾಡಳಿತ ಮೌನಕ್ಕೆ ಶರಣಾದರೆ, ನೊಂದ ಗ್ರಾಹಕರು ಮತ್ತು ರೈತ ಸಂಘಟನೆಗಳು ಒಗ್ಗೂಡಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ನೊಂದ ಗ್ರಾಹಕರು ಸಜ್ಜಾಗುತ್ತಿದ್ದಾರೆ.





