

ಮಂಡ್ಯ.ಜ.26. ಪ್ರತಿಯೊಬ್ಬ ಭಾರತೀಯರಿಗೂ ಮಹತ್ವವಾದ ಮತ್ತು ಪವಿತ್ರವಾದ ದಿನ ಎಲ್ಲಾ ಭಾರತೀಯರನ್ನು ಭಾವನಾತ್ಮಕವಾಗಿ, ಭಾಷಿಕವಾಗಿ, ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಬೆಸುಗೆ ಹಾಕಿದ ದಿನ ಮತ್ತು ನಮ್ಮ ದೇಶದ ಶ್ರೇಷ್ಠ ಸಂವಿಧಾನವನ್ನು ಮನಃಪೂರ್ವಕವಾಗಿ ಅಂತಃಕರಣದಿಂದ ಒಪ್ಪಿ ಸಂತಸಪಟ್ಟ ದಿನ ಎಂದು ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 77 ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅನೇಕ ಮಹನೀಯರುಗಳು, ಮಹಾತ್ಮ ಗಾಂಧೀಜಿ, ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಲಾಲ ಲಜಪತರಾಯ್, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಮುಂತಾದವರ ನೇತೃತ್ವದಲ್ಲಿ ನಡೆಸಿದ ಸ್ವಾತಂತ್ರ್ಯ ಹೋರಾಟಗಾರರ, ತ್ಯಾಗ-ಬಲಿದಾನ ಫಲವಾಗಿ 1947 ಆಗಸ್ಟ್ 15 ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು ಎಂದು ಹೇಳಿದರ ಸ್ವಾತಂತ್ರ್ಯಗೊಂಡ ನಂತರ, ಇಡೀ ದೇಶವನ್ನು ಭೌಗೋಳಿಕವಾಗಿ, ಭಾಷಿಕವಾಗಿ ಒಗ್ಗೂಡಿಸುವ ಅನಿವಾರ್ಯತೆ ಉದ್ಭವಿಸಿತು. ಜೊತೆಗೆ ಏಕರೂಪದ ಕಾನೂನು ಹಾಗೂ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ದೇಶದ ಏಕತೆಯನ್ನು ಬಲಪಡಿಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ “ಭಾರತ ಸಂವಿಧಾನ ಕರಡು ರಚನಾ ಸಮಿತಿ”ಯನ್ನು ರಚಿಸಲಾಯಿತು ಎಂದು ಹೇಳಿದರು

ಎರಡು ವರ್ಷಗಳ ಸುಧೀರ್ಘ ಅವಲೋಕನ ಮತ್ತು ಚರ್ಚೆಯ ನಂತರ, ಅಂತಿಮವಾಗಿ 26 ನವೆಂಬರ್ 1949 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಡಾ||ಬಿ.ಆರ್. ಅಂಬೇಡ್ಕರ್ರವರು ರಚಿಸಿದ ಸಂವಿಧಾನವನ್ನು ದೇಶಾದ್ಯಂತ 26ನೇ ಜನವರಿ 1950 ರಿಂದ ಜಾರಿಗೆ ತರಲಾಯಿತು. ಅದಕ್ಕಾಗಿಯೇ ನಾವು ಈ ದಿನವನ್ನು ಸಂವಿಧಾನ ದಿನವನ್ನಾಗಿ ಹಾಗೂ ಗಣರಾಜ್ಯೋತ್ಸವ ಎಂದು ಆಚರಿಸುತ್ತೇವೆ ಎಂದು ತಿಳಿಸಿದರು.
ಸ್ವತಂತ್ರ ಭಾರತಕ್ಕೊಂದು ಸದೃಢ ಸಂವಿಧಾನ ಕೊಟ್ಟಿದ್ದು ಡಾ.ಬಿ.ಆರ್.ಅಂಬೇಡ್ಕರ್. ಅವರ ಅವಿರತ ಪ್ರಯತ್ನ ಹಾಗೂ ಪಾಂಡಿತ್ಯದಿಂದಾಗಿ ನಮಗೆ ವಿಶ್ವದಲ್ಲಿಯೇ ಅತ್ಯಂತ ಸುದೀರ್ಘವಾದ, ಉತ್ತಮವಾದ ಲಿಖಿತ ಸಂವಿಧಾನ ದೊರೆತಿದೆ. ಹಾಗಾಗಿ ಸಂವಿಧಾನ ರಚನೆಗೆ ಕಾರಣರಾದವರೆಲ್ಲರನ್ನು ನಾವು ಸ್ಮರಿಸಬೇಕಿದೆ. ಸಂವಿಧಾನ ರೂಪಿಸಿಕೊಟ್ಟ ಒಕ್ಕೂಟ ವ್ಯವಸ್ಥೆಯಡಿ, ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದು ಅಭಿವೃದ್ಧಿಯನ್ನೇ ಮೂಲಮಂತ್ರ ವನ್ನಾಗಿಸಿಕೊಂಡು ಸಾಗುತ್ತಿರುವ ನಮ್ಮ ರಾಜ್ಯದ ಸಾಧನೆ ಇಂದು ದೇಶದ ಅನೇಕ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು
ನಮ್ಮ ಸರ್ಕಾರದ ಮೂಲ ಧೈಯ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಅದರಲ್ಲೂ ಜನ ಸಾಮಾನ್ಯರ ಮತ್ತು ಹಿಂದುಳಿದ ವರ್ಗದವರ ಕನಿಷ್ಟ ಅವಶ್ಯಕತೆಗಳನ್ನು ಪೂರೈಸುವ ಆಶಯವನ್ನು ನಮ್ಮ ಸರ್ಕಾರ ಹೊಂದಿದೆ. ಆರ್ಥಿಕ ಸಬಲೀಕರಣ, ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಅನೇಕ ಜನಪರ ಯೋಜನೆಗಳನ್ನುಅನುಷ್ಠಾನಗೊಳಿಸುತ್ತಿದ್ದು, ಅದರಲ್ಲಿ ಮಹಾತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂಬ ಹೆಗ್ಗಳಿಕೆ ನಮ್ಮ ಸರ್ಕಾರಕ್ಕಿದೆ ಎಂದು ಹೇಳಿದರು.

ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ನಮ್ಮ ಸರ್ಕಾರವು ‘ಶಕ್ತಿ ಯೋಜನೆ ಯನ್ನು ಜಾರಿಗೆ ತಂದಿದ್ದು. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 18.64 ಕೋಟಿ ಟಿಕೆಟ್‌ಗಳನ್ನು ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ನೀಡಿ ಒಟ್ಟು ರೂ.511 ಕೋಟಿ ವೆಚ್ಚ ಭರಿಸಲಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಆಹಾರದ ಕೊರತೆ ನೀಗಿಸುವ ಉದ್ದೇಶದಿಂದ ನಮ್ಮ ಸರ್ಕಾರ ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಹಾಗೂ ಇತರ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದ್ದು, ಈವರೆಗೆ ಒಟ್ಟು 430208 ಫಲಾನುಭವಿಗಳಿಗೆ “ಅನ್ನಭಾಗ್ಯ ಯೋಜನೆ”ಯಡಿ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಡಿ, 5,02,889 ಗ್ರಾಹಕರು ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಡಿಸೆಂಬರ್ ಅಂತ್ಯಕ್ಕೆ ವಿದ್ಯುತ್ ಅನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸಿ ರೂ. 278.48 ಕೋಟಿಗಳನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.

ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ನಮ್ಮ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೆ 4,64,960 ಮಹಿಳೆಯರಿಗೆ ತಲಾ ರೂ.2,000 ಗಳಂತೆ ಸೆಪ್ಟೆಂಬರ್ 2025ರ ಅಂತ್ಯಕ್ಕೆ ಒಟ್ಟು ರೂ.2231 ಕೋಟಿಗಳನ್ನು ಪಾವತಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ 6,730 ಅಭ್ಯರ್ಥಿಗಳಿಗೆ “ಯುವನಿಧಿ” ಯೋಜನೆಯಡಿ ರೂ.18.73 ಕೋಟಿ ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಶಿವಪುರ ಧ್ವಜ ಸತ್ಯಾಗ್ರಹ ಸೌಧವು ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಸ್ಮಾರಕವಾಗಿದೆ. ಹಾಗೂ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಿದ್ದು, ಐತಿಹಾಸಿಕ ಪರಂಪರೆಯನ್ನು ಪ್ರತಿಬಿಂಬಿಸುವ ಸ್ಥಳವಾಗಿದೆ. ಈ ನಿಟ್ಟಿನಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ ಹಾಗೂ ಸರ್ಕಾರದಿಂದ ಈಗಾಗಲೇ ರೂ.2.00ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣ ಮತ್ತು ಯಶಸ್ವಿಯಾಗಿ ಆಯೋಜನೆ ಮಾಡಿದ ಸವಿನೆನಪಿಗಾಗಿ ಸಮ್ಮೇಳನದಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ಹಣದ ಉಳಿತಾಯ ರೂ.2.50ಕೋಟಿ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ರೂ.3.00 ಕೋಟಿ ಒಟ್ಟು ರೂ.5.50 ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣ ಸಂಬಂಧ ಕಟ್ಟಡ ಕಾಮಗಾರಿಗೆ ಇದೇ ಜನವರಿ 30 ರಂದು ಶಂಕುಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮಂಡ್ಯದಲ್ಲಿ ನೂತನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವನ್ನು ನಮ್ಮ ಸರ್ಕಾರ ಸ್ಥಾಪಿಸಿದ್ದು, ವಿ.ಸಿ. ಫಾರಂ, ಮಂಡ್ಯದಲ್ಲಿ ತಕ್ಷಣದ ಮೂಲಸೌಕರ್ಯ ಅಭಿವೃದ್ಧಿಗೆ ರೂ. 23 ಕೋಟಿ ಹಾಗೂ ವಿಶ್ವವಿದ್ಯಾಲಯದ ಆಡಳಿತ ಭವನ ನಿರ್ಮಾಣಕ್ಕೆ ರೂ. 70.70 ಕೋಟಿಯನ್ನು ರಾಜ್ಯ ಸಚಿವ ಸಂಪುಟವು ಅನುಮೋದಿಸಿ ಬಿಡುಗಡೆ ಮಾಡಿರುತ್ತದೆ. ಈ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಆರಂಭಿಸಿದ ಆರು ತಿಂಗಳೊಳಗೆ ಯುಜಿಸಿ ಮಾನ್ಯತೆ ದೊರೆತಿದ್ದು, ಇದು ಹೊಸ ಕೃಷಿ ವಿಶ್ವವಿದ್ಯಾಲಯದ ಅಪರೂಪದ ಸಾಧನೆಯಾಗಿದೆ ಎಂದು ಹೇಳಿದರು.
ಮಂಡ್ಯ ಕೃಷಿ ವಿಜ್ಞಾನ ವಿಶ್ವವಿದ್ಯಾಲವನ್ನು ಹೈಟೆಕ್ ಕೃಷಿ ಸಂಶೋಧನೆ ಮತ್ತು ನಾವೀನ್ಯತಾ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಕರ್ನಾಟಕದ ಹವಾಮಾನಕ್ಕೆ ಹೊಂದುವ ರೋಗನಿರೋಧಕ ಅಕ್ಕಿ ತಳಿಗಳ ಅಭಿವೃದ್ಧಿಗೆ ಫಿಲಿಪೈನ್ಸ್ ನ ಅಂತರರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (IRRI) ಜೊತೆ ಸಹಕಾರ ಹೊಂದಲಾಗಿದೆ. ಇದು ಸಣ್ಣ ಮತ್ತು ಮಧ್ಯಮ ಹಿಡುವಳಿ ರೈತರ ಉತ್ಪಾದಕತೆ ಹಾಗೂ ಆದಾಯ ವೃದ್ಧಿಗೆ ವಿಶ್ವವಿದ್ಯಾಲಯ ನೀಡುತ್ತಿರುವ ಒತ್ತನ್ನು ಸ್ಪಷ್ಟಪಡಿಸುತ್ತದೆ ಎಂದು ತಿಳಿಸಿದರು.

ಮುಖ್ಯ ಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಪ್ರತೀ ವಿಧಾನ ಸಭಾ ಕ್ಷೇತ್ರದ ಶಾಸಕರುಗಳಿಗೆ ತಲಾ ರೂ.50.00ಕೋಟಿಗಳಂತೆ ಒಟ್ಟು ರೂ. 325.00 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿರುತ್ತದೆ. ನಾಗಮಂಗಲ ವಿಧಾನ ಸಭಾ ವ್ಯಾಪ್ತಿಯಲ್ಲಿ ಬರುವ ಅತಿ ಹೆಚ್ಚು ಕೃಷಿಕರು ವ್ಯವಸಾಯ ಚಟುವಟಿಕೆಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದು., ಕೃಷಿ ಜಮೀನುಗಳಿಗೆ ಸರಾಗವಾಗಿ ನೀರು ಪೂರೈಸುವ ಸಲುವಾಗಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಕಾಲುವೆಗಳ ನಿರ್ಮಾಣ ದುರಸ್ತಿ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲು ರೂ. 560.00ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಹುದಿನಗಳಿಂದ ಮಂಡ್ಯ ನಗರದಲ್ಲಿ ನ್ಯಾಯಾಲಯ ಸಂಕೀರ್ಣಕ್ಕೆ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಸರ್ಕಾರಿ ಜಾಗವನ್ನು ಹಾಲಿ ಇರುವ ನ್ಯಾಯಾಲಯ ಸಮುಚ್ಚಯದ ಬಳಿ ಮಂಜೂರು ಮಾಡಿದ್ದು, ರೂ 25.00 ಕೋಟಿ ಕಾಮಗಾರಿಗೆ ನೀಲ ನಕಾಶೆ ತಯಾರಿಸಲಾಗಿದೆ ಹಾಗೂ ಮದ್ದೂರು ತಾಲ್ಲೂಕಿನ ನ್ಯಾಯಾಂಗ ಸಮುಚ್ಚಯ ನಿರ್ಮಾಣ ಸಂಬಂಧ ರೂ.28.25 ಕೋಟಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿಗೆ ನೀಲ ನಕಾಶೆ ತಯಾರಿಸಲಾಗಿದೆ ಎಂದು ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ವ್ಯಾಪ್ತಿಯ ಸಿ.ಡಿ.ಎಸ್. ನಾಲೆಯಡಿಯಲ್ಲಿ ಬರುವ ಪಿಕಪ್ ನಾಲೆಗಳು ಮತ್ತು ತೂಬಿನ ನಾಲೆಗಳ ಅಭಿವೃದ್ಧಿ ಕಾಮಗಾರಿಯನ್ನು ರೂ.50.00 ಕೋಟಿಗಳ ಅಂದಾಜಿನಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮಂಡ್ಯ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧ ರಸ್ತೆಗಳ ಅಭಿವೃದ್ಧಿ, ನಾಲೆಗಳ ಅಭಿವೃದ್ಧಿ, ಪಿಕಪ್ ನಾಲೆಗಳ ಅಭಿವೃದ್ಧಿ ಮತ್ತು ರಕ್ಷಣಾತ್ಮಕ ಗೋಡೆಗಳ ನಿರ್ಮಾಣದಂತಹ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟಾರೆಯಾಗಿ ರೂ. 92 ಕೋಟಿಗಳ ಅಂದಾಜಿನಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಮಳವಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ವಿಶ್ವೇಶ್ವರಯ್ಯ ನಾಲಾ ಜಾಲದಡಿಯಲ್ಲಿ ಬರುವ (Phase-2, Balancing length) ಬರುವ ಹೆಬ್ಬಕವಾಡಿ ಶಾಖಾ ಕಾಲುವೆಗಳ ಹಾಗೂ ಪಿಕಪ್ ನಾಲೆಗಳ ಸಮಗ್ರ ಆಧುನೀಕರಣ ಕಾಮಗಾರಿಯನ್ನು ರೂ.292 ಕೋಟಿಗಳ ಅಂದಾಜಿನಲ್ಲಿ ಕೈಗೆತ್ತಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ವತಿಯಿಂದ ದರಕಾಸು ಪೋಡಿ, ಭೂ ಸುರಕ್ಷಾ ಯೋಜನೆ, ಈ ಪೌತಿ ಖಾತೆ, ಲ್ಯಾಂಡ್ ಬೀಟ್ ಮುಂತಾದ ವಿನೂತನ ಯೋಜನೆಗಳಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕಳೆದ ಎರಡೂವರೆ ವರ್ಷಗಳಲ್ಲಿ ಕಂದಾಯ ಇಲಾಖೆಯ ಕಂದಾಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 21 ಸಾವಿರ ನ್ಯಾಯಾಲಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಕಂದಾಯ ಇಲಾಖೆಯಿಂದ ಗಣನೀಯ ಆಡಳಿತಾತ್ಮಕ ಸುಧಾರಣೆಗಳಾಗಿದ್ದು, ಸುಮಾರು 18 ಲಕ್ಷ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗಿರುತ್ತದೆ. ಹಾಗೂ 116 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಅಧಿಸೂಚನೆ ಹೊರಡಿಸಿದ್ದು. ಈಗಾಗಲೇ 3367 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಆಧಾರ್ ಜೋಡಣೆ ಸಂದರ್ಭದಲ್ಲಿ ಮೃತ ಭೂ ಮಾಲೀಕರ ವಿವರವನ್ನು ನಮೂದು ಮಾಡಲಾಗಿದ್ದು, ಸ್ವಯಂ ಪ್ರೇರಿತವಾಗಿ ಪೌತಿ ಖಾತೆ ಆದೋಂಲನವನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ. ಈ ಆಂದೋಲನದಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದ್ದು, ಶೀಘ್ರದಲ್ಲೇ ಪೌತಿಖಾತೆಗಳನ್ನು ಪೂರ್ಣಗೊಳಿಸಲಾಗುವುದು. ಸೇವೆಯಲ್ಲಿದ್ದಾಗಲೇ ಮರಣ ಹೊಂದಿದ 18 ಗ್ರಾಮ ಪಂಚಾಯಿತಿ ನೌಕರರ ಅವಲಂಬಿತರಿಗೆ ಡಿಸೆಂಬರ್ 2025 ರಲ್ಲಿ ಮುಖ್ಯ ಮಂತ್ರಿಗಳು ಆದೇಶ ಪ್ರತಿಗಳನ್ನು ವಿತರಿಸಿರುತ್ತಾರೆ ಎಂದು ಹೇಳಿದರು.

ಅಕ್ಟೋಬರ್ 2017 ರ ಪೂರ್ವದಲ್ಲಿ ಗ್ರಾಮ ಪಂಚಾಯಿತಿಯಿಂದ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಹತೆ ಇಲ್ಲದ ಕಾರಣಕ್ಕೆ ಅನುಮೋದನೆಯಾಗಿಲ್ಲದ 590 ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಇಂದು ಅನುಮೋದನೆ ಆದೇಶವನ್ನು ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಬಿಲ್ ಕಲೆಕ್ಟರ್ ಮತ್ತು ಡಾಟಾ ಎಂಟ್ರಿ ಆಪರೇಟರ್ ಗಳಿಗೂ ಮಾರ್ಚ್-2026ರ ಅಂತ್ಯದೊಳಗಾಗಿ ಅನುಮೋದನೆ ನೀಡಲು ಕ್ರಮವಹಿಸಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ದಾಖಲೆಗಳನ್ನು ಸಂರಕ್ಷಣೆ ಮಾಡಲು ವ್ಯವಸ್ಥಿತವಾದ ರೆಕಾರ್ಡ್ ರೂಂ ಅನ್ನು ಪ್ರಾರಂಭಿಸಲಾಗಿದ್ದು, ಇದರಿಂದ ಸಮರ್ಪಕ ಇ-ಸ್ವತ್ತು ನಿರ್ವಹಣೆ ಮಾಡಲು ಮತ್ತು ಸಾರ್ವಜನಿಕರಿಗೆ ನಿಗಧಿತ ಅವಧಿಯಲ್ಲಿ ಅಗತ್ಯ ಮಾಹಿತಿಯನ್ನು ನೀಡಲು ಸಹಕಾರಿಯಾಗಲಿದೆ ಎಂದರು.
ಸ್ವಂತ ಸಂಪನ್ಮೂಲ ಸಂಗ್ರಹದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳು ಉತ್ತಮ ಸಾಧನೆ ಮಾಡಿದ್ದು, ಪ್ರಸಕ್ತ ಸಾಲಿನ ಬೇಡಿಕೆಗೆ ಅನುಗುಣವಾಗಿ ಶೇಕಡ 80 ರಷ್ಟು ಪ್ರಗತಿ ಸಾಧಿಸಿ ಜಿಲ್ಲೆಯು ರಾಜ್ಯದಲ್ಲಿಯೇ 5ನೇ ಸ್ಥಾನದಲ್ಲಿದೆ. ಮಹಾತ್ಮ ಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿ 19.00 ಲಕ್ಷ ಮಾನವ ದಿನಗಳ ಗುರಿಗೆ ಅನುಗುಣವಾಗಿ 15.38 ಲಕ್ಷಗಳ ಮಾನವ ದಿನಗಳನ್ನು ಸೃಜಿಸಿ ಶೇಕಡ 80.91 ರಷ್ಟು ಸಾಧನೆ 70.74 ಕೋಟಿಯಷ್ಟು ಅನುದಾನವನ್ನು ವೆಚ್ಚ ಭರಿಸಲಾಗಿದೆ ಎಂದು ಹೇಳಿದರು.
ನರೇಗಾ ಯೋಜನೆಯಡಿ ವೈಯುಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಅನುಷ್ಠಾನ ಸೇರಿದಂತೆ ಕುರಿ-ದನದದೊಡ್ಡಿ, ಶಾಲಾ ಅಭಿವೃದ್ಧಿ ಕಾಮಗಾರಿಗಳು, ಸ್ಮಶಾನ ಅಭಿವೃದ್ಧಿ, ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳಾದ ಕಟ್ಟೆ, ನಾಲಾ ಹೂಳೆತ್ತುವುದು, ಕೆರೆ ಕಲ್ಯಾಣಿ ಅಭಿವೃದ್ಧಿ ಕಾಮಗಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಕೊಳ್ಳಲಾಗಿದೆ. ರೈತರಿಗೆ ಉಪಯೋಗವಾಗುವಂತ ಬದು ನಿರ್ಮಾಣ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಮಹಿಳೆಯರ ಭಾಗವಹಿಸುವಿಕೆಯಲ್ಲಿ ರಾಜ್ಯದಲ್ಲೇ ಮಂಡ್ಯ ಜಿಲ್ಲೆ 2 ನೇ ಸ್ಥಾನ ದೊರಕಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯ ಗ್ರಾಮೀಣಾ ಮಹಿಳೆಯರಿಗೆ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಕೈಗೊಳ್ಳಲು ಅನುವಾಗುವಂತೆ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗಳು ನೀಡಿ, ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಹಿಳೆಯರು ಸ್ವಾವಲಂಭಿಗಳಾಗಿ ತಮ್ಮದೇ ಆದ ಉದ್ದಿಮೆಗಳನ್ನು ಪ್ರಾರಂಭಿಸಲು ಪ್ರೇರೇಪಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಸ್ವ-ಸಹಾಯ ಸಂಘಗಳು ಕೃಷಿ ಮೇಳ ಹಾಗೂ ಜೆ.ಎಸ್.ಎಸ್ ಜಯಂತೋತ್ಸವ ಮತ್ತು ಸುತ್ತೂರು ಕೃಷಿ ಜಾತ್ರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸುಮಾರು ರೂ.35.00 ಲಕ್ಷಗಳಷ್ಟು ಆರ್ಥಿಕ ವಹಿವಾಟು ನಡೆಸಿರುತ್ತಾರೆ. ಇದರಿಂದಾಗಿ ಜಿಲ್ಲೆಯ ಸ್ವ-ಸಹಾಯ ಸಂಘದ ಮಹಿಳೆಯರನ್ನು ಉದ್ಯಮಿಗಳಾಗಿ ರೂಪಿಸುವಲ್ಲಿ ಧೃಢವಾದ ಹೆಜ್ಜೆಗಳನ್ನು ಇಡಲಾಗುತ್ತಿದೆ. ಎನ್.ಆರ್.ಎಲ್.ಎಂ. ಯೋಜನೆಯಡಿಯಲ್ಲಿ ತರಬೇತಿ ಪಡೆದ ಮಹಿಳೆಯರು ಚನ್ನಪಟ್ಟಣ ಬೊಂಬೆಗಳು ಹಾಗೂ ಕೈಯಿಗಳಿಂದ ತಯಾರಿಸಿದ ಪ್ಯಾನ್ಸಿ ವಸ್ತು ಮಳಿಗೆಗಳು ವಿವಿಧ ಮೇಳಗಳಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ತೆಗೆದುಕೊಂಡಿರುವುದು ನಮ್ಮ ಜಿಲ್ಲೆಯ ಮಹಿಳೆಯರ ಪ್ರತಿಭೆಗೆ ದೊರೆತ ಗೌರವವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ, ಪೊಲೀಸ್ ಅಧೀಕ್ಷಕಿ ಶೋಭಾರಾಣಿ ವಿ ಜೆ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮುಡಾ ಅಧ್ಯಕ್ಷ ಬಿ.ಪಿ ಪ್ರಕಾಶ್, ಮೈಶುಗರ್ ಅಧ್ಯಕ್ಷ ಸಿ ಡಿ ಗಂಗಾಧರ್,ಉಪವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್ ನಗರಸಭೆಯ ಆಯುಕ್ತೆ ಪಂಪಾಶ್ರೀ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


