
ಉತ್ತಮ ನಡತೆಯಿಂದ ಸಮಾಜಮುಖಿ ಜೀವನ ನಡೆಸಬೇಕು: ಡಿಜಿಪಿ ಅಲೋಕ್ ಕುಮಾರ್ ಸಲಹೆ
ಮೈಸೂರು, ಮಾ.05: ಸಜಾ ಬಂಧಿಗಳು ಕಾರಾಗೃಹದಿಂದ ಬಿಡುಗಡೆಯಾದ ನಂತರ ಉತ್ತಮ ನಡತೆಯನ್ನು ಅನುಸರಿಸಿ ಸಮಾಜಮುಖಿ ಜೀವನ ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್ ಸಲಹೆ ನೀಡಿದರು.
ನಗರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ವಿವಿಧ ವ್ಯವಸ್ಥೆಗಳನ್ನು ಪರಿಶೀಲಿಸಿದ ಬಳಿಕ ಬಂಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕಾರಾಗೃಹದಲ್ಲಿ ಇರುವ ಅವಧಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡು ತಮ್ಮ ಜೀವನವನ್ನು ಸುಧಾರಿಸಿಕೊಳ್ಳುವ ಅವಕಾಶವೆಂದು ನೋಡಬೇಕು ಎಂದು ಹೇಳಿದರು.
ಬಂಧಿಗಳು ಶಿಕ್ಷೆಯನ್ನು ಅನುಭವಿಸುವ ಅವಧಿಯಲ್ಲಿ ಉತ್ತಮ ನಡತೆಯನ್ನು ತೋರಿಸಿ ಸಮಾಜದಲ್ಲಿ ಪುನಃ ಗೌರವಯುತ ಜೀವನ ನಡೆಸುವತ್ತ ಗಮನ ಹರಿಸಬೇಕು. ಸರ್ಕಾರದ ವತಿಯಿಂದ ಶಿಕ్షಿತ ಬಂಧಿಗಳಿಗೆ ದೊರೆಯಬಹುದಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾರಾಗೃಹದಲ್ಲಿ ಉತ್ತಮ ನಡತೆಯನ್ನು ತೋರಿದ ಶಿಕ್ಷಿತ ಬಂಧಿಗಳು ಹಾಗೂ ವಿಚಾರಣಾಧೀನ ಬಂಧಿಗಳಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು. ಬಂಧಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ವೇಳೆ 2025ನೇ ಸಾಲಿನಲ್ಲಿ ಕಾರಾಗೃಹದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಜೊತೆಗೆ 2026ನೇ ಸಾಲಿನ ಟೇಬಲ್ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ದಕ್ಷಿಣ ವಲಯದ ಉಪ ಮಹಾನಿರೀಕ್ಷಕರಾದ ಕೆ.ಸಿ. ದಿವ್ಯಶ್ರೀ, ಕೆಎಸ್ಐಎಸ್ಎಫ್ ಕಮಾಂಡೆಂಟ್ ಕೆ.ಎಂ. ಮಹದೇವ ಪ್ರಸಾದ್, ಕೇಂದ್ರ ಕಾರಾಗೃಹದ ಮುಖ್ಯ ಅಧಿಕ್ಷಕರಾದ ವಿ. ಶೇಷುಮೂರ್ತಿ, ಅಧಿಕ್ಷಕ ಎಂ.ಎಚ್. ಆಶೇಖಾನ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರಾಗೃಹದಲ್ಲಿ ಕೈದಿಗಳ ಪುನರ್ವಸತಿ ಮತ್ತು ವ್ಯಕ್ತಿತ್ವ ಅಭಿವೃದ್ಧಿಗೆ ಸರ್ಕಾರ ಹಾಗೂ ಕಾರಾಗೃಹ ಇಲಾಖೆ ಕೈಗೊಂಡಿರುವ ಕ್ರಮಗಳು ಕೈದಿಗಳಿಗೆ ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





