HOMENews

ನಿರ್ಗತಿಕ ವೃದ್ಧೆ ಜಯಮ್ಮಳಿಗೆ ಬೆಳಕು ಸೇವಾ ಸಂಸ್ಥೆಯ ನೆರವು: ಆಹಾರ ಕಿಟ್ ವಿತರಣೆ, ದಾಖಲೆ ಸೌಲಭ್ಯ ಕಲ್ಪನೆ

 

ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ವಾಸವಿರುವ ನಿರ್ಗತಿಕ ವೃದ್ಧ ಮಹಿಳೆ ಜಯಮ್ಮ (70) ಅವರಿಗೆ ಬೆಳಕು ಸೇವಾ ಸಂಸ್ಥೆಯ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಬುಧವಾರ (ಫೆಬ್ರವರಿ 18, 2026) ಸಂಸ್ಥೆಯ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಕ್ಕಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಕಿಟ್ ನೀಡುವ ಮೂಲಕ ವೃದ್ಧೆಯ ಹಸಿದ ಬದುಕಿಗೆ ನೆರವು ಒದಗಿಸಲಾಯಿತು.

ಜಯಮ್ಮ ಕಳೆದ ಹಲವು ವರ್ಷಗಳಿಂದ ಕಟ್ಟೆಮಳಲವಾಡಿ ಗ್ರಾಮದ ಲಕ್ಷ್ಮಣತೀರ್ಥ ನದಿಯ ದಂಡೆಯ ಬಳಿ ಸಣ್ಣ ಗುಡಿಸಲು ನಿರ್ಮಿಸಿಕೊಂಡು ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿದ್ದರು. ಅವರೊಂದಿಗಿದ್ದ ಏಕೈಕ ಮಗ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಅದೇ ಗುಡಿಸಲಿನಲ್ಲಿ ಮೃತಪಟ್ಟಿದ್ದಾನೆ. ಮಗನ ಸಾವಿನಿಂದ ಮಾನಸಿಕವಾಗಿ ಕುಗ್ಗಿದ್ದ ಜಯಮ್ಮ, ಜೀವನದ ಸಂಕಷ್ಟದ ಮಧ್ಯೆಯೇ ದಿನಚರಿಯನ್ನು ಮುಂದುವರಿಸುತ್ತಿದ್ದರು.

ಇದರ ನಡುವೆ ಕೆಲವು ದಿನಗಳ ಹಿಂದೆ ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನವು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಸಂಭವಿಸಿತು. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿತ್ತು. ಅಪಘಾತದಲ್ಲಿ ಜಯಮ್ಮಳ ಕಾಲು ಮುರಿದಿದ್ದು, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿ ಹಲವು ದಿನಗಳ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ನಂತರ ಅವರು ಗುಣಮುಖರಾದರೂ, ಅಪಘಾತಕ್ಕೀಡಾದ ವಾಹನ ಪತ್ತೆಯಾಗದ ಕಾರಣ ಯಾವುದೇ ಪರಿಹಾರ ಸಿಗದೆ ಪ್ರಕರಣ ಮುಕ್ತಾಯಗೊಂಡಿತು.

ಅಪಘಾತದ ನಂತರ ನಡೆಯಲು ಅಸಮರ್ಥಳಾದ ಜಯಮ್ಮ ಕುಂಟುತ್ತಾ, ಕೆಲವೊಮ್ಮೆ ತೆವೆಯುತ್ತಲೇ ಜನರಿಂದ ದೊರೆಯುವ ಬಿಡಿಗಾಸುಗಳ ಮೂಲಕ ಒಂದೊತ್ತಿನ ಊಟಕ್ಕೆ ಹಣ ಸಂಗ್ರಹಿಸುತ್ತಿದ್ದರು. ಈ ಪರಿಸ್ಥಿತಿಯನ್ನು ಗಮನಿಸಿದ ಬೆಳಕು ಸೇವಾ ಸಂಸ್ಥೆ ಅವರ ನೆರವಿಗೆ ಮುಂದಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ನಿಂಗರಾಜ್ ಮಲ್ಲಾಡಿ, “ಜಯಮ್ಮಳಿಗೆ ಯಾವುದೇ ಗುರುತಿನ ದಾಖಲೆಗಳಿರಲಿಲ್ಲ. ದಾಖಲೆಗಳಿಲ್ಲದೆ ಸರ್ಕಾರದ ಸೌಲಭ್ಯಗಳು ಸಿಗುತ್ತಿರಲಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಾಡಿಸಿ ವೃದ್ಧಾಪ್ಯ ವೇತನ ಮಂಜೂರು ಮಾಡಿಸಲಾಯಿತು” ಎಂದು ತಿಳಿಸಿದರು.

ಇತ್ತೀಚೆಗೆ ಜಯಮ್ಮ ಆಧಾರ್ ಕಾರ್ಡ್ ಕಳೆದುಕೊಂಡ ಕಾರಣ ವೃದ್ಧಾಪ್ಯ ವೇತನ ಪಡೆಯಲು ತೊಂದರೆಯಾಗಿತ್ತು. ಈ ಸಂದರ್ಭದಲ್ಲೂ ಸಂಸ್ಥೆಯೇ ಮುನ್ನಡೆದು ಆಧಾರ್ ಕಾರ್ಡ್ ನವೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ, ಅವಳಿಗೆ ಸೌಲಭ್ಯ ಪುನಃ ದೊರಕುವಂತೆ ನೆರವಾಯಿತು. ಆಹಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಹಿನ್ನೆಲೆ ಅಕ್ಕಿ, ಬೇಳೆ ಹಾಗೂ ಇತರೆ ಅಗತ್ಯ ಪದಾರ್ಥಗಳನ್ನು ಒಳಗೊಂಡ ಆಹಾರ ಕಿಟ್ ವಿತರಿಸಲಾಗಿದೆ.

“ಜಯಮ್ಮಳಂತಹ ನಿರ್ಗತಿಕ ವೃದ್ಧರು ಸಮಾಜದಲ್ಲಿ ಹಲವರಿದ್ದಾರೆ. ಅವರಿಗೆ ಕನಿಷ್ಠ ಒಂದೊತ್ತಿನ ಊಟದ ಭರವಸೆ ನೀಡುವ ಉದ್ದೇಶದಿಂದ ಪ್ರತಿದಿನ ಆಹಾರ ವಿತರಣೆ ಯೋಜನೆ ರೂಪಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ” ಎಂದು ನಿಂಗರಾಜ್ ಮಲ್ಲಾಡಿ ಹೇಳಿದರು. ಸಮಾಜದ ಸಹೃದಯರು ಸಹಕಾರ ನೀಡಿದರೆ ಹೆಚ್ಚಿನ ನಿರ್ಗತಿಕರಿಗೆ ನೆರವು ನೀಡಲು ಸಾಧ್ಯವಾಗುತ್ತದೆ ಎಂದು ಅವರು ಮನವಿ ಮಾಡಿದರು.

ಇದನ್ನೂ ಓದಿ:- ಕೊಪ್ಪಳದಲ್ಲಿ ಮರ್ಯಾದಾ ಹತ್ಯೆ ಯತ್ನ: ಕೊಡಲಿ ಏಟಿನಿಂದ ಗಾಯಗೊಂಡ 4 ತಿಂಗಳ ಗರ್ಭಿಣಿ ಜೀವಾಪಾಯದಿಂದ ಪಾರು

ಆಹಾರ ಕಿಟ್ ಸ್ವೀಕರಿಸಿದ ಜಯಮ್ಮ ಕೃತಜ್ಞತೆಯಿಂದ ಸಂಸ್ಥೆಯ ಸದಸ್ಯರಿಗೆ ಆಶೀರ್ವಚನ ನೀಡಿದರು. “ನನ್ನನ್ನು ನೆನಸಿ ನೆರವಾದದ್ದು ದೇವರ ಕೃಪೆ,” ಎಂದು ಅವರು ಭಾವನಾತ್ಮಕವಾಗಿ ಹೇಳಿದರು.

ಈ ಸಮುಯದಲ್ಲಿ ಸಂಸ್ಥೆಯ ಸದಸ್ಯ ಸೂರ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು. ಸ್ಥಳೀಯರು ಬೆಳಕು ಸೇವಾ ಸಂಸ್ಥೆಯ ಸೇವಾ ಮನೋಭಾವವನ್ನು ಶ್ಲಾಘಿಸಿದ್ದಾರೆ. ಸಮಾಜದ ಅಂಗಳದಲ್ಲಿ ಮರೆತುಹೋಗುವ ಜೀವಗಳಿಗೆ ಈ ರೀತಿಯ ನೆರವು ಒಂದು ಬೆಳಕಿನ ಕಿರಣವಾಗಲಿ ಎಂಬ ಆಶಯ ವ್ಯಕ್ತವಾಗಿದೆ.

ಸಫಾರಿ ಆರಂಭಕ್ಕೆ ಅನುಮತಿ: ರೈತರ ಆಕ್ರೋಶ – ನಿರ್ಧಾರ ಹಿಂಪಡೆಯಲು ಎಚ್ಚರಿಕೆ

Leave a Response