HOMENews

ಲವ್ ಮ್ಯಾರೇಜ್‌ಗೆ ಸಹಾಯ ಮಾಡಿದ ವ್ಯಕ್ತಿಗೆ ಕ್ರೂರ ಹಲ್ಲೆ; ವಿವಸ್ತ್ರಗೊಳಿಸಿ ಕಾಲು ಜಜ್ಜಿದ ಆರೋಪ

ಮಂಡ್ಯ, : ಪ್ರೀತಿ ವಿವಾಹಕ್ಕೆ ನೆರವಾದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ವಿವಸ್ತ್ರಗೊಳಿಸಿ ಅಮಾನುಷವಾಗಿ ಥಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಕಾಶ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮದ ಯುವತಿಯೊಬ್ಬಳು ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಲು ಪ್ರಕಾಶ್ ಸಹಾಯ ಮಾಡಿದ್ದಾನೆ ಎಂಬ ಅನುಮಾನದಿಂದ ಯುವತಿಯ ತಂದೆ ಸೇರಿದಂತೆ ಕೆಲವರು ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕಾಶ್ ಹಾಗೂ ಆತನ ಬಾಮೈದ ನವೀನ್ ಮೇಲೆ ಗಿರೀಶ್, ಸಂಜು, ಗಣೇಶ್, ಪುಟ್ಟರಾಜು ಮತ್ತು ನಿಂಗಣ್ಣ ಸೇರಿಕೊಂಡು ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ. ಆರೋಪಿಗಳು ಪ್ರಕಾಶ್ ಅವರನ್ನು ಹಿಡಿದು ವಿವಸ್ತ್ರಗೊಳಿಸಿ, ದೊಡ್ಡ ಗಲ್ಲಿನಿಂದ ಕಾಲು ಜಜ್ಜಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯಿಂದ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದಕ್ಕೂ ಮುನ್ನ ಅದೇ ಗ್ರಾಮದ ನಿಂಗಣ್ಣ ಅವರ ಪುತ್ರಿ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದು, ನಂತರ ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಿರುವುದು ತಿಳಿದುಬಂದಿತ್ತು. ಯುವತಿ ಮನೆ ಬಿಟ್ಟು ಹೋಗಲು ಪ್ರಕಾಶ್ ಸಹಾಯ ಮಾಡಿದ್ದಾನೆ ಎಂಬ ಅನುಮಾನದಿಂದ ಯುವತಿಯ ತಂದೆ ನಿಂಗಣ್ಣ ಮತ್ತು ಅವರ ಸಂಬಂಧಿಕರು ಪ್ರಕಾಶ್ ವಿರುದ್ಧ ಕೋಪಗೊಂಡಿದ್ದರು ಎನ್ನಲಾಗಿದೆ.

ಈ ನಡುವೆ ಯುವತಿಯ ವಿವಾಹ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಆರೋಪಿಗಳು ಪ್ರಕಾಶ್ ಅವರಿಗೆ ಫೋನ್ ಮೂಲಕ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪ್ರಕಾಶ್ ಮತ್ತು ನವೀನ್ ಫೆಬ್ರವರಿ 21ರಂದು ಮಧ್ಯರಾತ್ರಿ ಸಂಜು ಮನೆಗೆ ತೆರಳಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ಕುರಿತು ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಘಟನೆಗೆ ಪ್ರತೀಕಾರವಾಗಿ ಫೆಬ್ರವರಿ 22ರಂದು ಸಂಜು ಮತ್ತು ಗಿರೀಶ್ ನೇತೃತ್ವದ ತಂಡ ಪ್ರಕಾಶ್ ಮತ್ತು ನವೀನ್ ಮೇಲೆ ದಾಳಿ ನಡೆಸಿ ಕ್ರೂರವಾಗಿ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಗಿರೀಶ್ ಅವರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಗ್ರಾಮದಲ್ಲಿ ಈ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

Leave a Reply