HOMENews

ಮಣಿಪಾಲ್ ಆಸ್ಪತ್ರೆಯಲ್ಲಿ ಅತಿ ಆಧುನಿಕ ಚಿಕಿತ್ಸೆ: ಮೂತ್ರನಾಳ ಸಮಸ್ಯೆಗೆ ಸ್ಟೆಮ್ ಸೆಲ್ ವಿಧಾನದಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಮೈಸೂರು: ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮೂತ್ರ ವಿಸರ್ಜನೆ ತೊಂದರೆ ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡಬಹುದು. ಇಂತಹ ಸಮಸ್ಯೆಗೆ ಮೈಸೂರು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಅತ್ಯಾಧುನಿಕ “ಸ್ಟೆಮ್ ಸೆಲ್” ತಂತ್ರಜ್ಞಾನವನ್ನು ಬಳಸಿ ಯಶಸ್ವಿ ಚಿಕಿತ್ಸೆ ನೀಡಲಾಗಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಜ್ಞ ವೈದ್ಯ ಡಾ. ಟಿ.ಪಿ. ದಿನೇಶ್ ಕುಮಾರ್, ಸುಮಾರು 30 ವರ್ಷದ ಯುವಕನೊಬ್ಬ ಕಳೆದ ಹಲವು ತಿಂಗಳುಗಳಿಂದ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತ ಆಸ್ಪತ್ರೆಗೆ ಬಂದಿದ್ದನೆಂದು ತಿಳಿಸಿದರು. ಈತನಿಗೆ ಒಂದು ವರ್ಷ ಹಿಂದೆಯೇ ಬೆಂಗಳೂರುನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದರೂ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಿರಲಿಲ್ಲ.
ವೈದ್ಯಕೀಯ ಪರೀಕ್ಷೆಯಲ್ಲಿ, ಮೂತ್ರ ಸಾಗುವ ನಾಳದಲ್ಲಿ ಮಾಂಸ (scar tissue) ಬೆಳೆಯುವುದರಿಂದ ನಾಳ ಮುಚ್ಚಿಕೊಂಡಿರುವುದು ಪತ್ತೆಯಾಯಿತು. ಈ ಹಿನ್ನೆಲೆ, ಸಂಪ್ರದಾಯಿಕ ದೊಡ್ಡ ಶಸ್ತ್ರಚಿಕಿತ್ಸೆಯ ಬದಲಾಗಿ ಹೊಸ ತಂತ್ರಜ್ಞಾನ ಬಳಕೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.
ಈ ಚಿಕಿತ್ಸೆಯಲ್ಲಿ, ರೋಗಿಯ ಕೆನ್ನೆಯ ಒಳಭಾಗದಿಂದ ಜೀವಕೋಶಗಳನ್ನು ತೆಗೆದು, ಪುಣೆಯ ವಿಶೇಷ ಪ್ರಯೋಗಾಲಯದಲ್ಲಿ ಅವುಗಳನ್ನು ವೃದ್ಧಿಪಡಿಸಿ ಔಷಧೀಯ ರೂಪಕ್ಕೆ ತರಲಾಯಿತು. ನಂತರ ಸಿಸ್ಟೋಸ್ಕೋಪ್ ಹಾಗೂ ಲೇಸರ್ ತಂತ್ರಜ್ಞಾನ ಸಹಾಯದಿಂದ ಆ ಕೋಶಗಳನ್ನು ಮೂತ್ರನಾಳದ ಪೀಡಿತ ಭಾಗಕ್ಕೆ ಸೇರಿಸಲಾಯಿತು.
ಈ ವಿಧಾನದಿಂದ ಯಾವುದೇ ದೊಡ್ಡ ಕತ್ತರಿಸುವ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದೆ, ಕಡಿಮೆ ನೋವು ಮತ್ತು ಶೀಘ್ರ ಚೇತರಿಕೆ ಸಾಧ್ಯವಾಗಿದೆ. ಚಿಕಿತ್ಸೆ ಬಳಿಕ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಉಪೇಂದ್ರ ಶೆಣೈ ಮಾತನಾಡಿ, ಮೂತ್ರನಾಳದ ತೊಂದರೆಗಳು ಪುನರಾವರ್ತಿತವಾಗುವ ಸ್ವಭಾವ ಹೊಂದಿದ್ದು, ಇದರಿಂದ ರೋಗಿಗಳಿಗೆ ದೈಹಿಕ ಹಾಗೂ ಮಾನಸಿಕ ಒತ್ತಡ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸ್ಟೆಮ್ ಸೆಲ್ ಆಧಾರಿತ ಈ ವಿಧಾನ ಪರಿಣಾಮಕಾರಿ ಪರಿಹಾರವಾಗುತ್ತದೆ ಎಂದು ಹೇಳಿದರು.
ಈ ವೇಳೆ ಆಸ್ಪತ್ರೆ ನಿರ್ದೇಶಕ ಬಿ.ಜೆ. ಸಂದೀಪ್ ಪಟೇಲ್ ಉಪಸ್ಥಿತರಿದ್ದರು.
ಮೈಸೂರಿನಲ್ಲಿ ಈ ರೀತಿಯ ನೂತನ ವೈದ್ಯಕೀಯ ತಂತ್ರಜ್ಞಾನ ಲಭ್ಯವಾಗಿರುವುದು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

Leave a Reply