HOMENews

ಮಾರ್ಚ್ 8: ಸ್ವಚ್ಛತಾ ರೋಡ್ ಶೋ- ವಿಂಟೇಜ್ ಕಾರುಗಳು, ಬೈಕ್ ರ್ಯಾಲಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರನ್ನು ದೇಶದ ಮಾದರಿ ಸ್ವಚ್ಛ ಮತ್ತು ಹಸಿರುಮಯ ನಗರವನ್ನಾಗಿ ರೂಪಿಸುವ ಗುರಿಯೊಂದಿಗೆ ಮಹಾನಗರ ಪಾಲಿಕೆಯು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಇದೇ ಮಾರ್ಚ್ 8ರ ಭಾನುವಾರದಂದು ಬೆಳಗ್ಗೆ 8 ಗಂಟೆಗೆ ರಾಜ್ಯಮಟ್ಟದ ಬೃಹತ್ ‘ಸ್ವಚ್ಛತಾ ರೋಡ್ ಶೋ’ ಹಾಗೂ ಘನತ್ಯಾಜ್ಯ ನಿರ್ವಹಣಾ ಪ್ರದರ್ಶನವನ್ನು ಆಯೋಜಿಸಿದೆ. ಸಾರ್ವಜನಿಕರಲ್ಲಿ ನೈರ್ಮಲ್ಯ ಮತ್ತು ತ್ಯಾಜ್ಯ ವಿಲೇವಾರಿ ಕುರಿತು ಜಾಗೃತಿ ಮೂಡಿಸುವುದು ಈ ಮಹತ್ವಾಕಾಂಕ್ಷಿ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಈ ಬೃಹತ್ ರೋಡ್ ಶೋ ಮೈಸೂರು ಅರಮನೆ ಆವರಣದಿಂದ ಆರಂಭವಾಗಿ ಸುಮಾರು 3.5 ಕಿಲೋಮೀಟರ್ ದೂರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ.

ಈ ಬೃಹತ್ ‘ಸ್ವಚ್ಛತಾ ರೋಡ್ ಶೋ’ ಪಥಸಂಚಲನದಲ್ಲಿ ಒಟ್ಟು 17 ವಿವಿಧ ತಂಡಗಳು ಭಾಗವಹಿಸಲಿವೆ. ಹತ್ತು ಕುದುರೆಗಳನ್ನೊಳಗೊಂಡ ‘ಹಾರ್ಸ್ ಯೂನಿಟ್’ ಸಾಗಲಿದೆ. ಸಾಂಸ್ಕೃತಿಕ ತಂಡಗಳಾದ ಮಹಿಳಾ ಪೂಜಾ ಕುಣಿತ, ಮಹಿಳಾ ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಮಹಿಳಾ ನಗಾರಿ ಮತ್ತು ಲಂಬಾಣಿ ಮಹಿಳೆಯರ ನೃತ್ಯ ತಂಡಗಳು ಸಾಥ್ ನೀಡಲಿವೆ. ಜೊತೆಗೆ ಪಟ ಕುಣಿತ, ಕಂಸಾಳೆ, ಗಾರಡಿ ಗೊಂಬೆ ಮತ್ತು ಗೊರವರ ಕುಣಿತದ ಜಾನಪದ ಕಲಾತಂಡಗಳು ಮೆರುಗು ನೀಡಲಿದ್ದು, ಸುಮಾರು 200 ಎನ್ಎಸ್ಎಸ್  ಹಾಗೂ 300 ಎನ್ಸಿಸಿ  ಕೆಡೆಟ್ಗಳು ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಲಿದ್ದಾರೆ. ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಲು 15 ವಿಂಟೇಜ್ ಕಾರುಗಳು ಮತ್ತು 50 ಬೈಕ್ಗಳ ರ್ಯಾಲಿ ನಡೆಯಲಿದ್ದು, ಗಣ್ಯ ವ್ಯಕ್ತಿಗಳಿಗಾಗಿ ಮೀಸಲಿಟ್ಟ ವಿಐಪಿ ವಾಹನವೂ ಇದರಲ್ಲಿ ಒಳಗೊಂಡಿರಲಿದೆ. ಸುಮಾರು 300 ಪೌರಕಾರ್ಮಿಕರು ಹಾಗೂ ಪಾಲಿಕೆ ಸಿಬ್ಬಂದಿಯೊಂದಿಗೆ 25 ಅತ್ಯಾಧುನಿಕ ಘನತ್ಯಾಜ್ಯ ನಿರ್ವಹಣಾ ವಾಹನಗಳು ಈ ಬೃಹತ್ ರೋಡ್ ಶೋನಲ್ಲಿ ಸಾಗಿ ಸ್ವಚ್ಛತೆಯ ಸಂದೇಶವನ್ನು ಸಾರಲಿವೆ.

ಸರ್ಕಾರದ ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಸ್ವಚ್ಛತಾ ರಾಯಭಾರಿಗಳಾದ ಬಿಗ್ ಬಾಸ್ ಖ್ಯಾತಿಯ ಸೂರಜ್, ಪ್ರಖ್ಯಾತ ಗಾಯಕರಾದ ಅಲೋಕ್ ಹಾಗೂ ಅನನ್ಯಾ ಭಟ್ ಅವರು ಈ ಅಭಿಯಾನದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಹುರಿದುಂಬಿಸಲಿದ್ದಾರೆ. ರೋಡ್ ಶೋ ಉದ್ದಕ್ಕೂ ಸ್ವಯಂಸೇವಕರು ಸ್ವಚ್ಛತಾ ಜಾಗೃತಿ ಘೋಷಣೆಗಳ ಫಲಕಗಳನ್ನು ಹಿಡಿದು ಸಾಗಲಿದ್ದು, ತ್ಯಾಜ್ಯದಿಂದ ತಯಾರಿಸಲಾದ ವಿನೂತನ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಜಾಥಾವು ಮಹಾರಾಜ ಕಾಲೇಜು ಮೈದಾನ ತಲುಪಿದ ನಂತರ ಅಲ್ಲಿ ಎಲ್ಲರೂ ಒಟ್ಟಾಗಿ ಸ್ವಚ್ಛತಾ ಪ್ರತಿಜ್ಞೆಯನ್ನು ಸ್ವೀಕರಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ಅಳವಡಿಸಿಕೊಂಡಿರುವ ಉತ್ತಮ ಪದ್ಧತಿಗಳ ಕುರಿತು ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು  ಸ್ವಚ್ಛತಾ ಎಕ್ಸ್ ಪೋ ಎಂಬ ಸಾರ್ವಜನಿಕ ಮೇಳವನ್ನು ಸಹ ಆಯೋಜಿಸಲಾಗಿದೆ. ಈ ಸಾರ್ವಜನಿಕ ಮೇಳದ ಮುಖಾಂತರ ಪಾಲಿಕೆಯಿಂದ ವಿವಿಧ ಸ್ಟಾಲ್ಗಳನ್ನು ಅಳವಡಿಸಿ ಘನತ್ಯಾಜ್ಯ ವಸ್ತುಗಳ ಸಮರ್ಪಕ ಸಂಗ್ರಹಣೆ, ಸಾಗಾಣಿಕೆ ಮತ್ತು ವೈಜ್ಞಾನಿಕ ವಿಲೇವಾರಿ ಹಾಗು ಒಳಚರಂಡಿ ನೀರಿನ ಶುದ್ದೀಕರಣ ಘಟಕದ ಕುರಿತಾದ ಪ್ರಾತ್ಯಕ್ಷಿತೆ ಮತ್ತು ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯ ವಸ್ತುಗಳ ಪ್ರದರ್ಶನ ಅಲ್ಲದೆ ಪ್ಲಾಸ್ಟಿಕ್ ತ್ಯಾಜ್ಯವನ್ನು  ಮರುಬಳಕೆ ಮಾಡುವ ಕುರಿತು ಅರಿವು ಮೂಡಿಸುವುದು ಈ ಸ್ವಚ್ಛತಾ ಎಕ್ಸ್ ಪೋ ನ ಪ್ರಮುಖ ಉದ್ದೇಶವಾಗಿರುತ್ತದೆ.

ನಗರದ ಅಂದವನ್ನು ಕಾಪಾಡುವ ಈ ಅಭಿಯಾನದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯಗತ್ಯವಾಗಿದ್ದು, ಮೈಸೂರಿನ ಪ್ರತಿಯೊಬ್ಬ ನಾಗರಿಕರು, ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಈ ಬೃಹತ್ ರೋಡ್ ಶೋನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಆಯುಕ್ತರು ಈ ಮೂಲಕ ಮನವಿ ಮಾಡಿದ್ದಾರೆ. ನಗರವನ್ನು ಇನ್ನಷ್ಟು ಸ್ವಚ್ಛ ಮತ್ತು ಹಸಿರುಮಯವಾಗಿಸಲು ಪಾಲಿಕೆ ಕೈಗೊಂಡಿರುವ ಈ ಕಟ್ಟುನಿಟ್ಟಿನ ಕ್ರಮಗಳಿಗೆ ನಾಗರಿಕರು ಕೈಜೋಡಿಸಿ ಮೈಸೂರನ್ನು ದೇಶಕ್ಕೆ ಮೊದಲ ಸ್ಥಾನಕ್ಕೇರಿಸಲು ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತರಾದ ಶ್ರೀ ಶೇಖ್ ತನ್ವೀರ್ ಆಸೀಫ್ ಕೋರಿದ್ದಾರೆ.

Leave a Reply