ಸ್ವಚ್ಛತಾ ಜಾಗೃತಿ ರೋಡ್ ಶೋಗೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಚಾಲನೆ: ಸ್ವಚ್ಛ ಮೈಸೂರು ನಿರ್ಮಾಣಕ್ಕೆ ನಾಗರಿಕರ ಸಹಕಾರ ಅಗತ್ಯ

ಮೈಸೂರು, ಮಾ.08:- ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾಗಿದ್ದ ಭವ್ಯ ಸ್ವಚ್ಛತಾ ಜಾಗೃತಿ ರೋಡ್ ಶೋಗೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಇಂದು ಚಾಲನೆ ನೀಡಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಈ ಜಾಗೃತಿ ಮೆರವಣಿಗೆಯಲ್ಲಿ ಪೌರಕಾರ್ಮಿಕರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಕಲಾ ತಂಡಗಳು ಹಾಗೂ ವಿಂಟೇಜ್ ಕಾರು ಮತ್ತು ಬೈಕ್ ಸವಾರರು ಭಾಗವಹಿಸಿ ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು, ಮೈಸೂರು ನಗರವನ್ನು ಸ್ವಚ್ಛ ಮತ್ತು ಸುಂದರವಾಗಿ ಉಳಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಹೇಳಿದರು. ಮೈಸೂರಿನ ಇತಿಹಾಸ ಹಾಗೂ ಸಾಂಸ್ಕೃತಿಕ ವೈಭವವನ್ನು ನೆನಪಿಸಿಕೊಂಡ ಅವರು, “ಮೈಸೂರು ವಿಶ್ವವಿಖ್ಯಾತ ನಗರವಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಮಹತ್ವದ ಪಾತ್ರವಹಿಸಿದೆ. ಅವರು ನಿರ್ಮಿಸಿದ ಈ ಸುಂದರ ನಗರವನ್ನು ನಾವು ಸ್ವಚ್ಛವಾಗಿ ಕಾಪಾಡಿ ಮುಂದಿನ ಪೀಳಿಗೆಗೆ ನೀಡಬೇಕಾಗಿದೆ” ಎಂದು ತಿಳಿಸಿದರು.

ನಗರದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಪಾಯಿಗಳ ಸೇವೆ ಅಪಾರವಾಗಿದೆ ಎಂದು ಪ್ರಶಂಸಿಸಿದ ಅವರು, ಸಾರ್ವಜನಿಕರು ಕೂಡ ಅವರೊಂದಿಗೆ ಕೈಜೋಡಿಸಿ ನಗರವನ್ನು ಸ್ವಚ್ಛವಾಗಿಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗುಳುವುದು, ಕಸ ಎಸೆಯುವುದು ಹಾಗೂ ಸಾಕುಪ್ರಾಣಿಗಳಿಂದ ಮಲಮೂತ್ರ ವಿಸರ್ಜನೆ ಮಾಡಿಸುವಂತಹ ಅಸಭ್ಯ ಅಭ್ಯಾಸಗಳನ್ನು ತೊರೆದು, ಸ್ವಚ್ಛತೆಯ ಬಗ್ಗೆ ಜವಾಬ್ದಾರಿ ಹೊಂದಬೇಕು ಎಂದು ಹೇಳಿದರು. ಪ್ರತಿಯೊಬ್ಬ ನಾಗರಿಕರು ಶಿಸ್ತು ಮತ್ತು ಜವಾಬ್ದಾರಿಯನ್ನು ರೂಢಿಸಿಕೊಂಡರೆ ಮೈಸೂರು ನಗರ ಇನ್ನಷ್ಟು ಸುಂದರ ಹಾಗೂ ಮಾದರಿ ನಗರವಾಗಿ ರೂಪುಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

ಅವರು ಇದೇ ವೇಳೆ ಮಹಿಳಾ ದಿನಾಚರಣೆಯ ಮಹತ್ವವನ್ನೂ ವಿವರಿಸಿದರು. ಮಹಿಳೆಯರಿಗೆ ಶಿಕ್ಷಣ, ಸಮಾನತೆ, ಆರ್ಥಿಕ ಸ್ವಾವಲಂಬನೆ ಮತ್ತು ರಾಜಕೀಯ ಅಧಿಕಾರ ಸಿಗಬೇಕೆಂಬ ಉದ್ದೇಶದಿಂದ ಪ್ರತಿವರ್ಷ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ ಎಂದು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಸಮಾನ ವೇತನ ನೀಡುವಂತೆ ಕಾನೂನು ರೂಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸಚಿವರು ಸ್ಮರಿಸಿದರು. ಕುಟುಂಬವನ್ನು ಕಟ್ಟುವಲ್ಲಿ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಅವರು ಹೇಳಿದರು.

ಈ ಸ್ವಚ್ಛತಾ ಜಾಗೃತಿ ರೋಡ್ ಶೋನಲ್ಲಿ ವಿಂಟೇಜ್ ಕಾರುಗಳು, ಬೈಕ್ ಸವಾರರು, ವಿವಿಧ ಕಲಾ ತಂಡಗಳು, ಪೌರಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಸ್ವಚ್ಛತೆಯ ಸಂದೇಶವನ್ನು ಸಾರ್ವಜನಿಕರಿಗೆ ಸಾರಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಕೆ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ., ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರವನ್ನು ಸ್ವಚ್ಛ ಹಾಗೂ ಆರೋಗ್ಯಕರವಾಗಿಡಲು ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಉತ್ತಮ ಸಂದೇಶ ನೀಡುತ್ತವೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಅಭಿಪ್ರಾಯಪಟ್ಟರು





