HOMENews

ಬೆಂಗಳೂರು ಸಂಗೀತ ಕಾರ್ಯಕ್ರಮಗಳಲ್ಲಿ ಮೊಬೈಲ್ ಕಳ್ಳತನ: ದೆಹಲಿಯಿಂದ ವಿಮಾನದಲ್ಲಿ ಬರುತ್ತಿದ್ದ ಖದೀಮರ ಬಂಧನ

ಬೆಂಗಳೂರು: ನಗರ ಹೊರವಲಯಗಳಲ್ಲಿ ನಡೆಯುವ ದೊಡ್ಡ ಸಂಗೀತ ಕಾರ್ಯಕ್ರಮಗಳನ್ನು ಟಾರ್ಗೆಟ್ ಮಾಡಿಕೊಂಡು ಮೊಬೈಲ್ ಕಳ್ಳತನ ಮಾಡುತ್ತಿದ್ದ ದೆಹಲಿ ಮೂಲದ ಇಬ್ಬರು ಖದೀಮರನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಯಚಂದ್ ಹಾಗೂ ತರುಣ್ ಎಂದು ಗುರುತಿಸಲಾಗಿದ್ದು, ಇವರ ಬಳಿಯಿಂದ ಸುಮಾರು 9 ಲಕ್ಷ ರೂಪಾಯಿ ಮೌಲ್ಯದ 14 ಐಫೋನ್ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನಸಮೂಹದ ಗದ್ದಲ ಮತ್ತು ಗೊಂದಲವನ್ನು ಬಳಸಿಕೊಂಡು ಮೊಬೈಲ್ ಕಳ್ಳತನ ಮಾಡುವುದು ಆರೋಪಿಗಳ ಮುಖ್ಯ ತಂತ್ರವಾಗಿತ್ತು. ಕಾರ್ಯಕ್ರಮಗಳ ಮಾಹಿತಿಯನ್ನು ಆನ್‌ಲೈನ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮುಂಚಿತವಾಗಿ ಸಂಗ್ರಹಿಸಿಕೊಂಡು, ವಿಮಾನದ ಮೂಲಕ ದೆಹಲಿಯಿಂದ ಬೆಂಗಳೂರಿಗೆ ಬಂದು ವೀಕ್ಷಕರಂತೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಬಳಿಕ ಜನಸಂದಣಿಯಲ್ಲಿ ಮೊಬೈಲ್ ಕದ್ದ ನಂತರ ನಗರದಲ್ಲೇ ಬಾಡಿಗೆ ಕೊಠಡಿ ಪಡೆದು ಕೆಲವು ದಿನಗಳ ಕಾಲ ತಂಗುತ್ತಿದ್ದರು.

ಇತ್ತೀಚೆಗೆ ದೇವನಹಳ್ಳಿ ಸಮೀಪದ ಚನ್ನರಾಯಪಟ್ಟಣದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಹದೇವಪುರ ನಿವಾಸಿಯೊಬ್ಬರ ಐಫೋನ್ ಮೊಬೈಲ್ ಕಳುವಾದ ಪ್ರಕರಣದ ಬಗ್ಗೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ದೂರು ಆಧರಿಸಿ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿ ಮೊಬೈಲ್ ಟವರ್ ಲೋಕೇಶನ್ ಹಾಗೂ ತಾಂತ್ರಿಕ ಮಾಹಿತಿಗಳ ಸಹಾಯದಿಂದ ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಿದರು.

ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ವೈಟ್‌ಫೀಲ್ಡ್ ಪ್ರದೇಶದಲ್ಲಿ ಬಂಧಿಸಿ ಅವರ ಬಳಿಯಿಂದ ಕಳುವಾದ 14 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ತನಿಖೆಯಲ್ಲಿ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ 13 ಪ್ರಕರಣಗಳು ಮತ್ತು ವೈಟ್‌ಫೀಲ್ಡ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಬಂಧಿತರು ಇದೇ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿದ್ದರೂ, ಈ ಹಿಂದೆ ಸಹ ಬೆಂಗಳೂರು ಮತ್ತು ಸುತ್ತಮುತ್ತ ನಡೆದ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳಲ್ಲಿ ಮೊಬೈಲ್ ಕಳ್ಳತನ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರು ಜನಸಂದಣಿ ಇರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ತಮ್ಮ ಮೊಬೈಲ್ ಮತ್ತು ಬೆಲೆಬಾಳುವ ವಸ್ತುಗಳ ಬಗ್ಗೆ ವಿಶೇಷ ಜಾಗ್ರತೆ ವಹಿಸುವಂತೆ ಮನವಿ ಮಾಡಿದ್ದಾರೆ.

Leave a Reply