HOMENews

ಮೈಸೂರು: ಆದಿಚುಂಚನಗಿರಿ ಕ್ಷೇತ್ರಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರಿನ ಮಹಾರಾಜರ ವಿಶೇಷ ‘ಪೇಟ’ ಸಮರ್ಪಣೆ

ಮೈಸೂರು, ಏಪ್ರಿಲ್ 13:-  ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಆಗಮಿಸಲಿರುವ ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ  ಅವರಿಗೆ ಮೈಸೂರು ಆದಿಚುಂಚನಗಿರಿ ಭಕ್ತವೃಂದದ ವತಿಯಿಂದ ವಿಶೇಷವಾಗಿ ಸಾಂಸ್ಕೃತಿಕ ಮಹತ್ವ ಹೊಂದಿದ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ ಪೇಟ’ವನ್ನು ಸಮರ್ಪಣೆ ಮಾಡಲು ಸಿದ್ಧತೆ ಮಾಡಲಾಗಿದೆ. ಈ ಪೇಟವನ್ನು ಇಂದು ಭಕ್ತವೃಂದದ ಪ್ರತಿನಿಧಿಗಳು ಆದಿಚುಂಚನಗಿರಿ ಕ್ಷೇತ್ರದ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದರು.

ಮೈಸೂರಿನ ರಾಜ ಪರಂಪರೆಯ ಪ್ರತೀಕವಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶೈಲಿಯ ಪೇಟವನ್ನು ಆಧರಿಸಿ ಈ ವಿಶೇಷ ಪೇಟವನ್ನು ವಿನ್ಯಾಸಗೊಳಿಸಲಾಗಿದೆ. ಇದು ಮೈಸೂರು ಸಂಸ್ಕೃತಿ, ಪರಂಪರೆ ಮತ್ತು ಗೌರವದ ಸಂಕೇತವಾಗಿದ್ದು, ಪ್ರಧಾನಮಂತ್ರಿಗಳಿಗೆ ಸನ್ಮಾನವಾಗಿ ಅರ್ಪಿಸಲಾಗುತ್ತಿದೆ. ಈ ಪೇಟ ತಯಾರಿಕೆಯಲ್ಲಿ ಸ್ಥಳೀಯ ಕಲಾವಿದರ ನೈಪುಣ್ಯ ಹಾಗೂ ಪರಂಪರೆಯ ಕಲಾತ್ಮಕತೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಭಕ್ತವೃಂದದ ಪ್ರತಿನಿಧಿಗಳು, “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ನಮಗೆ ಗೌರವದ ಸಂಗತಿ. ಅವರ ಭೇಟಿಯನ್ನು ಸ್ಮರಣೀಯವಾಗಿಸಲು ಮೈಸೂರು ಸಂಸ್ಕೃತಿಯ ಪ್ರತೀಕವಾದ ಪೇಟವನ್ನು ಸಮರ್ಪಿಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.

ಆದಿಚುಂಚನಗಿರಿ ಮಠವು ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವಹಿಸಿರುವುದು ಎಲ್ಲರಿಗೂ ತಿಳಿದ ಸಂಗತಿ. ಪ್ರಧಾನಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಮಠದಲ್ಲಿ ಭಕ್ತರ ಸಂಚಾರ ಹೆಚ್ಚಾಗುವ ನಿರೀಕ್ಷೆಯಿದ್ದು, ವಿವಿಧ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ.

ಈ ವಿಶೇಷ ಪೇಟ ಸಮರ್ಪಣೆ ಮೂಲಕ ಮೈಸೂರು ಸಂಸ್ಕೃತಿಯ ಗೌರವವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿಬಿಂಬಿಸಲು ಭಕ್ತವೃಂದ ಪ್ರಯತ್ನಿಸುತ್ತಿದ್ದು, ಪ್ರಧಾನಮಂತ್ರಿಗಳ ಭೇಟಿ ಈ ಭಾಗದ ಜನತೆಗೆ ಮತ್ತಷ್ಟು ಉತ್ಸಾಹ ತುಂಬಿದೆ.

ಈ ಸಮಾರಂಭದಲ್ಲಿ ಮೈಸೂರಿನ ಪ್ರಖ್ಯಾತ ವೈದ್ಯರಾದ ಡಾ. ಬಾಲಕೃಷ್ಣೇಗೌಡ, ನಮ್ಮೂರು ನಮ್ಮೂರು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ಬೀಡನಹಳ್ಳಿ ಸತೀಶ್ ಗೌಡ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜೊತೆಗೆ ನಿರ್ದೇಶಕರಾದ ಎ. ರವಿ, ಗಿರೀಶ್ ಗೌಡ, ಸಂತೋಷ್, ಕಲಾವಿದ ನಂದನ್ ಸಿಂಗ್ ಮತ್ತು ಮಠದ ಸದ್ಭಕ್ತರಾದ ಸಂಜುಗೌಡ, ಜೀವನ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಗೌರವ ಹೆಚ್ಚಿಸಿದರು.

 

 

Leave a Reply